ಬೆಂಗಳೂರು: ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆ ಮೊದಲೇ ಕಾಂಗ್ರೆಸ್ ನಾಯಕರು ಒಂದು ಸುತ್ತಿನ “ರಂಗ ತಾಲೀಮು’ ಪೂರ್ಣಗೊಳಿಸಿದ್ದಾರೆ.
ಸಾಮಾನ್ಯವಾಗಿ ಕಾಂಗ್ರೆಸ್ ತುಸು ನಿಧಾನ ಎಂಬ ಆರೋಪ ಪ್ರತಿ ಚುನಾವಣೆಯಲ್ಲಿ ಕೇಳಿಬರುತ್ತಿತ್ತು. ಆದರೆ ಈ ಸಲ ಉಳಿದ ಪಕ್ಷವನ್ನು ಹಿಂದಿಕ್ಕುವ ರೀತಿಯಲ್ಲಿ ತಯಾರಿ ಮಾಡಿಕೊಂಡಿದೆ. ಈಗಾಗಲೇ ಪ್ರಜಾಧ್ವನಿ ಯಾತ್ರೆಯಿಂದ ಹಿಡಿದು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆವರೆಗೆ ಚುನಾವಣೆ ಎದುರಿಸಲು ಅಗತ್ಯವಿರುವ ಹಲವು ಸಿದ್ಧತೆಗಳನ್ನು ಕಾಂಗ್ರೆಸ್ ಮಾಡಿಕೊಂಡಿದ್ದು, ಆ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದೆ. ಈಗ ಅಂತಿಮ ಹಂತದ ಆಟಕ್ಕೆ ಸಜ್ಜುಗೊಂಡಿದೆ.
ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸೆಪ್ಟಂಬರ್‌ನಲ್ಲೇ ರಾಜ್ಯಕ್ಕೆ ಬಂದು ಸುಮಾರು 18 ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೆಜ್ಜೆ ಹಾಕುವುದರೊಂದಿಗೆ ಪರೋಕ್ಷವಾಗಿ ಚುನಾವಣ ಪ್ರಚಾರಕ್ಕೆ ಚಾಲನೆ ನೀಡಿದರು. ಇದರಲ್ಲಿ ಕಾಂಗ್ರೆಸ್ ಸೋನಿಯಾ ಗಾಂಧಿ ಕೂಡ ಪಾಲ್ಗೊಂಡು ಗಮನಸೆಳೆದಿದ್ದರು.
ಜನವರಿಯಲ್ಲಿ ಕಾಂಗ್ರೆಸ್ ರಾಜ್ಯ ನಾಯಕರಿಂದ “ಪ್ರಜಾಧ್ವನಿ’ ಯಾತ್ರೆಗೆ ಚಾಲನೆ ನೀಡಲಾಯಿತು. ಅಲ್ಲಿ ರಾಜ್ಯದ ಪ್ರತಿಯೊಬ್ಬ ಗ್ರಾಹಕನಿಗೂ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದರು. ಈ ಯಾತ್ರೆ 21 ಜಿಲ್ಲೆಗಳಲ್ಲಿ ಸಾಗಿಬಂತು.
ಈ ನಡುವೆ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ “ನಾ ನಾಯಕಿ’ ಕಾರ್ಯಕ್ರಮ ಆಯೋಜಿಸಲಾಯಿತು. ಈ ವೇಳೆ ರಾಜ್ಯದ ಪ್ರತಿ ಮನೆಯ ಒಡತಿಗೆ ಮಾಸಿಕ ಎರಡು ಸಾವಿರ ಘೋಷಿಸುವ ಮೂಲಕ ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಲಾಯಿತು. ಇದರ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕೊರಟಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು. ಈಚೆಗಷ್ಟೇ ರಾಹುಲ್ ಗಾಂಧಿ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ “ಯುವಕ್ರಾಂತಿ’ಯಲ್ಲಿ ಪಕ್ಷದ ಯುವ ಕಾರ್ಯಕರ್ತರಿಗೆ ಹೊಸ ಉತ್ಸಾಹ ತುಂಬಿದರು. ಈಗ ಮತ್ತೆ ಕೋಲಾರದಿಂದ ಚುನಾವಣೆ ಪ್ರಚಾರಕ್ಕೂ ಆಗಮಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದೆಲ್ಲದರ ನಡುವೆ ಮೊದಲ ಹಂತವಾಗಿ 124 ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆಯನ್ನೂ ಮಾಡಲಾಯಿತು. ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುಜೇìವಾಲ ರಾಜ್ಯದಲ್ಲೇ ಠಿಕಾಣಿ ಹೂಡಿದ್ದಾರೆ. ಈಗ ಎರಡನೇ ಹಂತದ ತಯಾರಿಗೆ ಕಾಂಗ್ರೆಸ್ ಸಜ್ಜಾಗಿದೆ.