ಕೊಪ್ಪಳ: ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಏನೂ ಮಾಡಿಲ್ಲ. ಬರಿ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ. ಅವರು ಮಾಡಿದ್ದು ಎರಡೇ ಸಾಧನೆ ಒಂದು ವಿದೇಶ ಸುತ್ತಿದ್ದು, ಇನ್ನೊಂದು ಮನ್ ಕೀ ಮಾತ್ ಮಾಡಿದ್ದು. ಈ ಬಾರಿಯ ಚುನಾವಣೆಯಲ್ಲಿ ಯುಪಿಎ ಅಧಿಕಾರಕ್ಕೇರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಸಾರ್ವಜನಿಕ ಮೈದಾನದಲ್ಲಿ ಗುರುವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬಹಿರಂಗ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಮತಯಾಚಿಸಿ ಮಾತನಾಡಿದರು. ಈ ಹಿಂದೆ ಮೋದಿಯನ್ನು ಬೆಂಬಲಿಸಿದವರು ಈಗ ಭ್ರಮನಿರನನರಾಗಿದ್ದಾರೆ. 5 ವರ್ಷಗಳಲ್ಲಿ ಮೋದಿ ಎಲ್ಲ ಕ್ಷೇತ್ರಗಳಲ್ಲೂ ವಿಫಲರಾಗಿದ್ದಾರೆ. ಅವರು ಕೊಟ್ಟ ಎಲ್ಲ ಭರವಸೆ ಹುಸಿಯಾಗಿವೆ.
ಮೋದಿ ಕೊಟ್ಟ ಭರವಸೆಗಳು ಹುಸಿಯಾಗಿವೆ. ಕಪ್ಪು ಹಣ ತರುತ್ತೇನೆ ಎಂದ್ರು, ಎಲ್ಲರ ಖಾತೆಗೆ 15 ಲಕ್ಷ ಹಾಕ್ತಿನಿ ಅಂದ್ರು.
ಇಲ್ಲಿವರೆಗೂ 5 ಪೈಸೆ ಬಂದಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವೆ ಎಂದ್ರು. 5 ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸಿಲ್ಲ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಅಚ್ಚೇ ದಿನ್, ಮನ್ ಕೀ ಬಾತ್ ಬರಿ ಸುಳ್ಳಾಗಿದೆ. ಕಾಮ್ ಕೀ ಬಾತ್ ಮಾಡ್ರಿ ಅಂತಾ ನಾನೇ ಹೇಳಿದ್ದೇನೆ ಎಂದರು. ನನ್ನ ಅಧಿಕಾರವಧಿಯಲ್ಲಿ ರಾಜ್ಯದಲ್ಲಿ ಬರವಿತ್ತು, ನಿಯೋಗದೊಂದಿಗೆ ತೆರಳಿ ಮೋದಿಗೆ ಸಾಲ ಮನ್ನಾ ಮಾಡಿ ಎಂದರೆ ಮಾತಾಡ್ಲಿಲ್ಲ. ಇಲ್ಲಿನ ಬಿಜೆಪಿ ನಾಯಕರೂ ನಮ್ಮ ಜೊತೆಗೆ ಬಂದಿದ್ದರು. ನನ್ನ ಜೊತೆ ಬಂದ ಗಿರಾಕಿಗಳು ಬಾಯಿನೇ ಬಿಡಲಿಲ್ಲ. ನಾನು ಕೊಟ್ಟ ಮಾತಿನಂತೆ ಸೊಸೈಟಿ ಸಾಲ ಮನ್ನಾ ಮಾಡಿದೆ. ಆದರೆ ಮೋದಿ ಬ್ಯಾಂಕ್ ಸಾಲ ಮಾಡಲಿಲ್ಲ. ಮೋದಿನೇ ಚುನಾವಣೆ ಬಂದಿದೆ ಅಂತಾ ಈಗ ಸಣ್ಣ ರೈತರಿಗೆ ತಿಂಗಳಿಗೆ 500 ಕೊಡಲು ಹೊರಟಿದ್ದಾರೆ. ಸಾಲ ಮನ್ನಾ ಮಾಡದ ರೈತ ವಿರೋಧಿಮೋದಿ. ಹಸಿರು ಶಾಲು ಹಾಕೋ ಬಿಎಸ್‌ವೈಗೆ ನಾಚಿಕೆ ಆಗಲ್ವಾ? ಮಿಸ್ಟರ್ ಯಡಿಯೂರಪ್ಪ ಈಗ ರೈತರ ನೆನಪು ಮಾಡಿಕೊಂಡು ಹಸಿರು ಶಾಲು ಹಾಕುತ್ತಿದ್ದಾರೆ.
ಅವರಿಗೆ ನಾಚಿಕೆ ಆಗಲ್ವಾ? ಸಾಲ ಮನ್ನಾದ ಬಗ್ಗೆ ಮಾತಾಡಲ್ಲ. ಕಾಂಗ್ರೆಸ್ ಅಧಿಕಾರದ ರಾಜ್ಯಗಳಲ್ಲಿ ನಾವು ಸಾಲ ಮನ್ನಾ ಮಾಡಿದ್ದೇವೆ. ಮೋದಿ ಉದ್ಯಮಿಗಳ 3.50 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದು ಏಕ ವಚನದಲ್ಲಿ ವಾಗ್ಧಾಳಿ ನಡೆಸಿದರು.
ಹೈಕ ಭಾಗಕ್ಕೆ ಯುಪಿಎ ಸರ್ಕಾರದಲ್ಲಿ 371(ಜೆ) ಮೀಸಲಾತಿ ಸಿಕ್ಕಿದೆ. ಇಲ್ಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಇಂಜನಿಯರಿಂಗ್, ಮೆಡಿಕಲ್ ಸೀಟ್ ಲಭ್ಯವಾಗಿವೆ. ಇಲ್ಲಿನ ಸಂಗಣ್ಣ ಕರಡಿ ಒಮ್ಮೆಯಾದ್ರೂ ಸಂಸತ್‌ಲ್ಲಿ ಮೀಸಲಾತಿ ಬಗ್ಗೆ ಮಾತಾಡಿದ್ದಾನಾ. ಕರಡಿಗೆ ನಾಚಿಕೆ ಆಗಲ್ವಾ ಎಂದರಲ್ಲದೇ, ನಾನೂ ಕೊಪ್ಪಳದಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಈಗ ಪೂರ್ವದಲ್ಲಿ ಸೂರ್ಯ ಉದಯಿಸೋದು ಏಷ್ಟು ಸತ್ಯನೋ. ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವು ಅಷ್ಟೇ ಸತ್ಯ. ಈಗ ಜೆಡಿಎಸ್ ಸೇರಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.
ಸಿ.ಎಂ. ಇಬ್ರಾಹಿಂ ಮಾತನಾಡಿ, ಮೋದಿ ಈಗ.. ನೀನು ಹೋದಿ. ಸರ್ಜಿಕಲ್ ದಾಳಿಗೂ ಹಿಂದೆ ಹಲವು ದಾಳಿ ನಡೆದಿವೆ.
ಈಗ ಮೋದಿ ಹುಚ್ಚ ಮುಂಡೇದ್ ನಾನೇ ದಾಳಿ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದೆ. ದೇಶದ ಭದ್ರತಾ ವಿಚಾರದಲ್ಲಿ ರಾಜಕೀಯ ಮಾತು ತರವಲ್ಲ. ಕೇಂದ್ರದಲ್ಲಿ ರಾಜ್ಯದ 8 ಜನ ಲಿಂಗಾಯತ ಸಂಸದರಿದ್ದಿರಿ ಒಬ್ಬರೂ ಮಿನಿಸ್ಟರ್ ಆಗ್ಲಿಲ್ಲ. ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದ್ರೆ ಚುನಾವಣೆ ಇರಲ್ಲ ಎಂದು ಗುಡುಗಿದರು.
ಕರಡಿ ಕಾಡಿಗೆ.. ಹಿಟ್ನಾಳ ದಿಲ್ಲಿಗೆ ಸಂಗಣ್ಣ ಕರಡಿಗೆ ಕೊಪ್ಪಳ ಬಿಜೆಪಿ ಟಿಕೆಟ್ ಸಿಗಲಿ ಎಂದು ಆ ಭಗವಂತನಲ್ಲಿ ಬೇಡಿಕೊಂಡಿದ್ದೆವು. ಈಗ ಕಾಂಗ್ರೆಸ್ -ಜೆಡಿಎಸ್ ಮೈತ್ರಿಯೊಂದಿಗೆ ಒಗ್ಗಟ್ಟಾಗಿದ್ದೇವೆ. ಕ್ಷೇತ್ರದ ಮತದಾರರು ಕರಡಿಯನ್ನು ಕಾಡಿಗೆ ಕಳಿಸಬೇಕು. ಹಿಟ್ನಾಳನ್ನನ್ನು ದಿಲ್ಲಿಗೆ ಕಳಿಸಬೇಕೆಂದು ಮಾಜಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ನುಡಿದರು.
ದೇಶದಲ್ಲಿ ಮೋದಿ ಅವರು ಐದು ವರ್ಷ ಬರಿ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಡಿಸೇಲ್ ದರ ಏರುತ್ತಿದೆ. ಅಭಿವೃದ್ಧಿ ಬಗ್ಗೆ ಮೋದಿ ಕಾಳಜಿಯೇ ಇಲ್ಲ. ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸಿ, ಪಕ್ಷದ ಕಾರ್ಯಕರ್ತರೆ ಏ. 23ರವರೆಗೂ ವಿರಮಿಸಬೇಡಿ. ಕೆಲಸದಲ್ಲಿ ತೊಡಗಿ.
ರಾಜಶೇಖರ ಹಿಟ್ನಾಳ, ಕಾಂಗ್ರೆಸ್ ಅಭ್ಯರ್ಥಿ
ಸಿದ್ದು ಪಿಎಂ ಪಟ್ಟ ಕೊಟ್ರೂ ನಿಭಾಯಿಸ್ತಾರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಹರಿಕಾರ.
ಅವರಿಗೆ ಬಡವರ, ದಲಿತರ, ಅಲ್ಪ ಸಂಖ್ಯಾತರ ಸೇರಿದಂತೆ ಹಿಂದುಳಿದ ವರ್ಗದ ಜನರ ಬಗ್ಗೆ ಕಾಳಜಿಯಿದೆ. ಕಳೆದ ಸರ್ಕಾರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಅವರು ಮತ್ತೂಮ್ಮೆ ಸಿಎಂ ಆಗಲಿ, ಅವರಿಗೆ ಪ್ರಧಾನಿ ಪಟ್ಟ ಕೊಟ್ಟರೂ ನಿಭಾಯಿಸುತ್ತಾರೆ. ಮುಂದೆ ಬೇಕಿದ್ದರೆ ಕೇಂದ್ರದ ಹಣಕಾಸು ಸಚಿವರಾಗಲಿ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹಾರೈಸಿದರು.