ಹುಬ್ಬಳ್ಳಿ: ಬಿಜೆಪಿ ರಾಜಭವನವನ್ನು ಯಾವುದೇ ರೀತಿಯಿಂದ ದುರ್ಬಳಕೆ ಮಾಡಿಕೊಂಡಿಲ್ಲ. ಆದರೆ ಕಾಂಗ್ರೆಸ್ ರಾಜಭವನವನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ದೊಡ್ಡ ಇತಿಹಾಸವೇ ಇದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ (Mahesh Tenginakai) ಆರೋಪಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಲು, ಮಾಹಿತಿ ಪಡೆಯಲು ರಾಜ್ಯಪಾಲರು ಮುಂದಾಗಿದ್ದಾರೆ ಇದರಲ್ಲಿತಪ್ಪೇನಿದೆ. ಅಂತಹ ಅಧಿಕಾರ ರಾಜ್ಯಪಾಲರಿಗಿದೆ ಎಂದರು.
ಮುಡಾ, ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿಲ್ಲವೆಂದರೆ ಸಿಎಂಗೆ ಭಯ ಯಾಕೆ. ಆರೋಪದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಈ ವೇಳೆಗೆ ಸಿಎಂ ರಾಜೀನಾಮೆ ನೀಡಬೇಕಾಗಿತ್ತು. ಅದು ಬಿಟ್ಟು ಭಂಡತನದಿಂದ ರಾಜ್ಯಪಾಲರ ವಿರುದ್ದವೇ ಆರೋಪಕ್ಕಿಳಿದಿದ್ದಾರೆ ಎಂದು ಹೇಳಿದರು.
ರಾಜಭವನದಿಂದ ಯಾವ ದಾಖಲೆ ಮಾಹಿತಿ ಸೋರಿಕೆ ಆಗಿರದು. ನಟ ದರ್ಶನ ವಿಚಾರದಲ್ಲಿ ಜೈಲಿನ ಹಲವು ಮಾಹಿತಿಗಳು ಹೇಗೆ ಹೊರಬಂದವು? ಸರ್ಕಾರ ಇದಕ್ಕೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.
ತಿರುಪತಿ ಪ್ರಸಾದ ಪ್ರಕರಣ ದುರ್ದೈವದ ಸಂಗತಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಆಗಲೇಬೇಕು. ಹಿಂದೂ ಧರ್ಮಕ್ಕೆ ಧಕ್ಕೆ ತರುವ ಹುನ್ನಾರವಿದು ಎಂದು ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನದಲ್ಲಿ ವಿಫಲವಾಗಿದ್ದು, ಅಭಿವೃದ್ದಿಗೂ ಅನುದಾನ ಇಲ್ಲವಾಗಿದೆ. ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಅನುದಾನ ದೊರೆಯುತ್ತಿಲ್ಲ. ಗ್ಯಾರಂಟಿಗಳನ್ನು ಬಂದ್ ಮಾಡಬೇಕೆಂದು ಕಾಂಗ್ರೆಸ್ ಶಾಸಕರೇ ಖಾಸಗಿಯಾಗಿ ಹೇಳುತ್ತಿದ್ದಾರೆ ಎಂದರು.