ಗದಗ: ಅಗ್ನಿಪಥ ಯೋಜನೆ ಜಾರಿಯಿಂದ ಕಾಂಗ್ರೆಸ್ ಗೆ ಯಾಕೆ ಉರಿ ಬಿದ್ದಿದೆ ತಿಳಿಯುತ್ತಿಲ್ಲ. ಅಗ್ನಿಪಥ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಭಾನುವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಪಥ ಯೋಜನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನಿರ್ಧಾರಕ್ಕೆ ಬಿಜೆಪಿ ಬದ್ಧವಾಗಿದೆ. ಅಗ್ನಿಪಥ ಯೋಜನೆಯ ಹಿನ್ನಡೆಗೆ ಹುನ್ನಾರ ನಡೆದಿದೆ. ಇಸ್ರೇಲ್ ದೇಶಕ್ಕೆ ಹೋಲಿಸಿ ನೋಡಿದರೆ ಅಲ್ಲಿ ಪ್ರತಿಯೊಂದು ಮನೆಯಲ್ಲಿನ ಯುವಕರು ದೇಶಾಭಿಮಾನದಿಂದ ಸೇನೆಗೆ ಸೇರುತ್ತಾರೆ. ಇಲ್ಲಿನ ಪ್ರತಿಯೊಬ್ಬರಿಗೂ ದೇಶದ ಮೇಲೆ ಪ್ರೀತಿ, ಅಭಿಮಾನ, ಗೌರವ ಇರಬೇಕು ಎಂದರು.
18 ವರ್ಷದ ಯುವಕರಿಗೆ ಸೇನೆ ಸೇರಲು ಆಸಕ್ತಿ ಇದ್ದರೆ ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಮಾಡಬಹುದು. ಅಗ್ನಿಪಥ ಯೋಜನೆ ಒಳ್ಳೆಯ ಕಾರ್ಯಕ್ರಮವಾಗಿದೆ. ದೇಶದ ಯುವಕರಲ್ಲಿ ದೇಶ ಪ್ರೇಮ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ಇದನ್ನು ಸಹಿಸಲಾಗದ ಕಾಂಗ್ರೆಸ್ ಯುವಕರಿಗೆ ದಿಕ್ಕು ತಪ್ಪಿಸಿ ಬೀದಿಗಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
40% ಕಮಿಷನ್ ನಲ್ಲಿ ಪ್ರಧಾನಿಗೂ ಪಾಲು ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ. ಶ್ರೀರಾಮುಲು ಅವರು ದೇಶದಲ್ಲಿ ಭ್ರಷ್ಟಾಚಾರದ ದೊಡ್ಡ ಪಿತಾಮಹ ಅಂದರೆ ಅದು ಕಾಂಗ್ರೆಸ್. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿದೆ. ಬಿಜೆಪಿ ಸರ್ಕಾರ ಸಂಪೂರ್ಣ ಪಾರದರ್ಶಕ ಆಡಳಿತ ನೀಡುತ್ತಿದೆ. ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡು ಈ ರೀತಿ ಆರೋಪ ಮಾಡುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ರಾಜ್ಯಕ್ಕೆ ಶಕ್ತಿ ತರುತ್ತದೆ. ಇಂತಹ ವಿಚಾರದಲ್ಲೂ ಕಾಂಗ್ರೆಸ್ ಟೀಕೆ ಮಾಡುವ ಕೆಲಸ ನೋಡಿದರೆ ಅದರ ನೈತಿಕ ದಿವಾಳಿತನ ತೋರಿಸುತ್ತದೆ ಎಂದರು.
ಕಾನೂನಿಗಿಂತ ರಾಹುಲ್ ಗಾಂಧಿ ದೊಡ್ಡವರಲ್ಲ. ತನಿಖೆ ನಡೆಯುತ್ತಿರುವ ವೇಳೆ ಬೀದಿಗಿಳಿದು ಹೋರಾಟ ಮಾಡುವ ಅವಶ್ಯಕತೆ ಇಲ್ಲ ಎಂದು ಶ್ರೀರಾಮುಲು ಹೇಳಿದರು.