ಬೆಂಗಳೂರು: ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ “ಗೃಹಜ್ಯೋತಿ’ಯಲ್ಲಿ ಸರಕಾರ ನಿಗದಿತ ಶುಲ್ಕ ಮತ್ತು ವಿದ್ಯುತ್ ಬಳಕೆಗೆ ವಿಧಿಸಲಾಗುವ ತೆರಿಗೆ ಸಹಿತ ಬಹುತೇಕ ಎಲ್ಲ ಪ್ರಕಾರದ ಹೊರೆಯಿಂದ ಮುಕ್ತಗೊಳಿಸಲು ಸರಕಾರ ನಿರ್ಧರಿಸಿದೆ. ಆದರೆ 200 ಯೂನಿಟ್ ಗಡಿ ದಾಟಿದರೆ ಎಂದಿನಂತೆ ಪೂರ್ತಿ ಬಿಲ್ ಪಾವತಿಸಬೇಕಿದೆ.
ಉಚಿತ ವಿದ್ಯುತ್ ಗ್ಯಾರಂಟಿ ಆಗಸ್ಟ್‌ನಿಂದ ಜಾರಿಗೆ ಬರಲಿದೆ ಎಂದು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಆದರೂ ಜನರಲ್ಲಿ ಹಲವು ಪ್ರಶ್ನೆಗಳು ಮೂಡಿದ್ದು, ಅವುಗಳಿಗೆ ಹಣಕಾಸು ಇಲಾಖೆ ಮತ್ತು ಇಂಧನ ಇಲಾಖೆ ಹಿರಿಯ ಅಧಿಕಾರಿಗಳು ಉತ್ತರಿಸಿದ್ದಾರೆ. ಅದರ ವಿವರ ಹೀಗಿದೆ.
200 ಯೂನಿಟ್ ಗಡಿ ದಾಟಿದರೆ ಒಟ್ಟಾರೆ ಬಿಲ್ ಪಾವತಿಸಬೇಕೇ? ಮೇಲಿನ ವಿದ್ಯುತ್ ಬಳಕೆಗೆ ಬಿಲ್ ಪಾವತಿಸಿದರೆ ಸಾಕಾ?
– 200 ಯೂನಿಟ್ ದಾಟಿದರೆ ಎಂದಿನಂತೆ ಇಡೀ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ. ಉದಾಹರಣೆಗೆ 210 ಯೂನಿಟ್ ಬಳಸಿದ್ದರೆ, ಕೇವಲ 10 ಯೂನಿಟ್ ಬಿಲ್ ಕಟ್ಟುವಂತಿಲ್ಲ. ಒಟ್ಟಾರೆ 210 ಯೂನಿಟ್ ಬಿಲ್ ಕಟ್ಟಬೇಕಾಗುತ್ತದೆ.
ವರ್ಷದ ಸರಾಸರಿ ಮೇಲೆ ಹೆಚ್ಚುವರಿ ಶೇ. 10ರಷ್ಟು ಬಳಕೆಗೆ ವಿನಾಯಿತಿ ಇದೆ. ಆ ಮಿತಿಯನ್ನೂ ಮೀರಿದರೆ ಹೇಗೆ?
– ಮಿತಿ ಎಷ್ಟು ಮೀರಿರುತ್ತಾರೋ ಅದಕ್ಕೆ ಮಾತ್ರ ಬಿಲ್ ಬರುತ್ತದೆ. ಉದಾಹರಣೆಗೆ 150 ಯೂನಿಟ್ ಸರಾಸರಿ ಬಳಕೆ ಅಂದುಕೊಂಡರೆ, ಶೇ. 10 ಹೆಚ್ಚುವರಿಯೂ ಸೇರಿ 165 ಯೂನಿಟ್ ಆಗುತ್ತದೆ. ಗ್ರಾಹಕ ಬಳಕೆ ಪ್ರಮಾಣ 180 ಯೂನಿಟ್ ಆದರೆ ಮಿತಿಯನ್ನು ದಾಟಿದ, ಅಂದರೆ 15 ಯೂನಿಟ್‌ಗೆ ಮಾತ್ರ ಬಿಲ್ ಬರುತ್ತದೆ.
Related Articles
ನಿಗದಿತ ಶುಲ್ಕ ಮತ್ತು ಬಳಕೆ ಶುಲ್ಕದ ಮೇಲಿನ ತೆರಿಗೆ ಹೇಗೆ?
– ವಿದ್ಯುತ್ ಬಳಕೆ ಶುಲ್ಕ ಮತ್ತು ನಿಗದಿತ ಶುಲ್ಕ ಹಾಗೂ ತೆರಿಗೆ ಮೂರನ್ನೂ ಸರಕಾರವೇ ಭರಿಸಲಿದೆ. ಗ್ರಾಹಕರ ಮೇಲೆ ಯಾವುದೇ ಹೊರೆ ಇರುವುದಿಲ್ಲ.
ಎಷ್ಟು ಗ್ರಾಹಕರು ಈ ಯೋಜನೆ ವ್ಯಾಪ್ತಿಗೆ ಬರಬಹುದು?
– ಸುಮಾರು ಎರಡು ಕೋಟಿಗೂ ಅಧಿಕ ಗೃಹ ಬಳಕೆದಾರರಿದ್ದಾರೆ. ಇದರಲ್ಲಿ ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿಯೂ ಸೇರಿದೆ. ಅವರಲ್ಲಿ ಶೇ. 90ಕ್ಕೂ ಅಧಿಕ ಗ್ರಾಹಕರು ಇದರ ಫಲಾನುಭವಿಗಳಾಗಲಿದ್ದಾರೆ.