Advertisement

Congress ಸರಕಾರ ಜನರಿಗೆ ಶಾಪ: ಪಾದಯಾತ್ರೆಯಲ್ಲಿ ವಿಜಯೇಂದ್ರ ಕಿಡಿ

11:17 PM Aug 03, 2024 | Team Udayavani |

ಬೆಂಗಳೂರು: ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ಕೊಡಿಸಲು ಈ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.

Advertisement

ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನೇತೃತ್ವದ ಮೈಸೂರು ಚಲೋ ಬೃಹತ್ ಪಾದಯಾತ್ರೆ ಶನಿವಾರ (ಆಗಸ್ಟ್ 3) ಬಿಡದಿ ತಲುಪಿದಾಗ ಏರ್ಪಡಿಸಿದ ಸಭೆಯಲ್ಲಿ ಅವರು ಮಾತನಾಡಿ’ ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರಕಾರ ಹಗರಣಗಳ ಸರಕಾರವಾಗಿ ಮಾರ್ಪಾಡಾಗಿದೆ ಎಂದು ಟೀಕಿಸಿದರು.

ವಾಲ್ಮೀಕಿ ನಿಗಮದ ಹಗರಣ ಸಂಬಂಧ ಸಚಿವ ನಾಗೇಂದ್ರ ಅವರು ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಮೈಸೂರು ಮುಡಾದಲ್ಲಿ ನಿವೇಶನಕ್ಕಾಗಿ ಲಕ್ಷಾಂತರ ಜನರು ಕಾಯುತ್ತಿದ್ದಾರೆ. ಆದರೆ, ಸಿದ್ದರಾಮಯ್ಯನವರ ಕುಟುಂಬಕ್ಕೆ 14 ನಿವೇಶನ ಕೊಟ್ಟಿದ್ದಾರೆ. ಅಲ್ಲದೆ, ನಿವೇಶನಗಳನ್ನು ಅವರ ಶಿಫಾರಸಿನಂತೆ ನೀಡಿದ್ದು, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲು ಆಗ್ರಹಿಸಿದರು.

ನಾವು ಬಡವರು, ಶೋಷಿತರು, ವಂಚಿತರಿಗೆ ನ್ಯಾಯ ದೊರಕಿಸಲು ಪಾದಯಾತ್ರೆ ಮಾಡುತ್ತಿದ್ದರೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಧಮ್ಕಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆ ಇಲ್ಲ. ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವವರೆಗೆ ಬಿಜೆಪಿ- ಜೆಡಿಎಸ್ ಹೋರಾಟ ಮುಂದುವರೆಯಲಿದೆ ಎಂದು ಪ್ರಕಟಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ವರ್ಗಾವಣೆಗೆ ಕಾಂಗ್ರೆಸ್ ಶಾಸಕ 30 ಲಕ್ಷ ಲಂಚ ಕೇಳಿದ್ದರಿಂದ ಯಾದಗಿರಿ ಪೊಲೀಸ್ ಅಧಿಕಾರಿ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಅವರ ಧರ್ಮಪತ್ನಿಯೇ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್ ಸರಕಾರವು ರಾಜ್ಯದ ಜನರಿಗೆ ಶಾಪವಾಗಿ ಪರಿಣಮಿಸಿದೆ ಎಂದು ಟೀಕಿಸಿದರು. ಕಾಂಗ್ರೆಸ್ಸಿನದು ವಚನಭ್ರಷ್ಟ, ಬಡವರ ವಿರೋಧಿ, ದೀನದಲಿತರ, ಪರಿಶಿಷ್ಟ ಸಮುದಾಯಗಳ ವಿರೋಧಿ ಸರಕಾರ ಎಂದು ದೂರಿದರು.

Advertisement

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಮಾತನಾಡಿ, ನ್ಯಾಯ, ನೀತಿ, ಧರ್ಮವನ್ನು ಬಿಟ್ಟ ಸಿದ್ದರಾಮಯ್ಯನವರು ಕುರ್ಚಿಗೆ ಅಂಟಿಕೊಂಡಿದ್ದಾರೆ ಎಂದು ಆರೋಪಿಸಿದರು. ರಾಹುಲ್ ಗಾಂಧಿಯವರಿಗೆ ನೈತಿಕತೆ ಇದ್ದರೆ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಬೇಕು ಎಂದು ಆಗ್ರಹಿಸಿದರು.

ಡಿ.ಕೆ.ಶಿವಕುಮಾರ್ ಮತ್ತು ಮಿತ್ರರು ರಾಮನಗರ ಜಿಲ್ಲೆಯ ಜನರ ಭೂಮಿಯನ್ನು ಕಬಳಿಸಲು ಮುಂದಾಗಿದ್ದಾರೆ. ಡಿ.ಕೆ.ಶಿವಕುಮಾರ್ ಗಂಡಸುತನದ ಮಾತನಾಡುತ್ತಾರೆ. ಕೆಲಸ ಮಾಡುವುದರಲ್ಲಿ ಅವರು ಗಂಡಸುತನ ತೋರಿಸಬೇಕು ಎಂದು ಒತ್ತಾಯಿಸಿದರು.

ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಶಾಸಕರಾದ ಮುನಿರತ್ನ, ಅರವಿಂದ ಬೆಲ್ಲದ, ಹರೀಶ್ ಗೌಡ, ಮುಖಂಡರಾದ ಮಹೇಶ್, ಹರತಾಳು ಹಾಲಪ್ಪ, ಮಾಗಡಿ ಕ್ಷೇತ್ರದ ಮಂಜುನಾಥ್, ಎರಡೂ ಪಕ್ಷಗಳ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next