ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಈಗಾಗಲೇ ಮುಹೂರ್ತ ನಿಗದಿಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಚರ್ಚೆ ಮಾಡಿ ಈ ಮುಹೂರ್ತ ನಿಗದಿ ಮಾಡಿದ್ದಾರೆ. ಅದು ಯಾವುದೆಂದು ಸಿದ್ದರಾಮಯ್ಯನವರೇ ಬಾಯಿಬಿಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಯಾವುದೇ ಕಾರಣಕ್ಕೂ ಅವಧಿ ಪೂರೈಸುವುದಿಲ್ಲ. ನಾನು 5 ವರ್ಷ ಮುಖ್ಯಮಂತ್ರಿಯಾಗಿರುತ್ತೇನೆಂದು ಅವರು ರಾಜ್ಯದ ಜನತೆಯ ಮುಂದೆ ಘೋಷಿಸಲಿ ನೋಡೋಣ ಎಂದು ಸವಾಲು ಹಾಕಿದರು. ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಹಾಗೂ ಅವರ ಕುಟುಂಬ ಆರೋಪಿ ಸ್ಥಾನದಲ್ಲಿ ನಿಂತಿದೆ.
ಭ್ರಷ್ಟಾಚಾರ ಸಂಬಂಧ ರಾಜ್ಯದ ಜನತೆಗೆ ಅವರು ಉತ್ತರ ಕೊಡಬೇಕಿದೆ. ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ನೋಟಿಸ್ ಕೊಟ್ಟು ತನಿಖೆಗೆ ಬರುವಂತೆ ತಿಳಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ತನಿಖೆ ಎದುರಿಸುತ್ತೀರಾ? ಆರೋಪಿಯಾಗಿ ಹೋಗುವಿರಾ? ಎಂಬುದನ್ನು ಜನತೆಗೆ ತಿಳಿಸಿ ಎಂದು ಆಗ್ರಹಿಸಿದರು.
ಸಿಎಂ ಕುಮ್ಮಕ್ಕು:
ಒಂದು ಕಡೆ ವಾಲ್ಮೀಕಿ ನಿಗಮದ ಹಗರಣ, ಇನ್ನೊಂದೆಡೆ ಮೈಸೂರಿನ ಮುಡಾ ಹಗರಣ, ಮತ್ತೊಂದೆಡೆ ಒಬ್ಬ ಬೇಜವಾಬ್ದಾರಿ ಸಚಿವ ಜಮೀರ್ ಅಹಮದ್ ವಕ್ಫ್ ಬೋರ್ಡ್ ಮೂಲಕ ರೈತರ ಜಮೀನು ಲೂಟಿ ಹೊಡೆಯುತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳ ಕುಮ್ಮಕ್ಕಿದೆ ಎಂದರು.