Advertisement

Congress Government: ಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತ: ಗೃಹ ಸಚಿವ ಡಾ.ಜಿ. ಪರಮೇಶ್ವರ್‌

12:54 AM Aug 12, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬದಲಾಗುತ್ತಾರೆಂದು ಕಾಂಗ್ರೆಸ್‌ನ ಯಾವ ನಾಯಕರೂ ಹೇಳಿಲ್ಲ. ಆದರೆ ಬಿಜೆಪಿ-ಜೆಡಿಎಸ್‌ ನಾಯಕರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆ ರೀತಿಯ ಚರ್ಚೆಗಳು ಅಪ್ರಸ್ತುತ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

Advertisement

ಪತ್ರಕರ್ತರೊಂದಿಗೆ ಅವರು ಮಾತನಾಡಿ, ರಾಜ್ಯಪಾಲರು ಮುಖ್ಯಮಂತ್ರಿಯವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಬಾರದು. ಈ ಕುರಿತು ದಾಖಲಾಗಿರುವ ದೂರನ್ನು ತಿರಸ್ಕರಿಸಬೇಕು ಮತ್ತು ಶೋಕಾಸ್‌ ನೋಟಿಸ್‌ ಹಿಂಪಡೆಯಬೇಕು ಎಂದು ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಸಲಹೆ ನೀಡಿದೆ. ಅದರ ಹೊರತಾಗಿಯೂ ಅವರು ಮುಂದುವರಿದರೆ ನಮಗೂ ಕಾನೂನು ಹೋರಾಟ ಅನಿವಾರ್ಯವಾಗಲಿದೆ. ರಾಜ್ಯಪಾಲರು ಕಾನೂನಿನ ಪ್ರಕಾರ ನಡೆದುಕೊಳ್ಳುವ ನಿರೀಕ್ಷೆಯಿದೆ ಎಂದರು.

ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ  ಪ್ರಕರಣಕ್ಕೆ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯನ್ನು ತೆರವು ಮಾಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆ. ಮುಂದಿನ ವಿಚಾರಣೆಯಲ್ಲಿ ರಾಜ್ಯ ಸರಕಾರದ ಪರವಾಗಿ ಸಮರ್ಥ ವಾದ ಮಂಡಿಸಲಾಗುವುದು ಎಂದು ಪರಮೇಶ್ವರ್‌ ಹೇಳಿದರು.

ಈಗಾಗಲೇ ಅಭಿಯೋಜಕರು ಮೇಲ್ಮನವಿ ಸಲ್ಲಿಸಿದ್ದಾರೆ. ಮುಂದಿನ ವಿಚಾರಣೆಯಲ್ಲಿ ರಾಜ್ಯ ಸರಕಾರದ ಪರವಾಗಿ ಸಮರ್ಥ ವಾದ ಮಂಡಿಸಲಾಗುವುದು. ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಿಗೆ ಸಾಮಾನ್ಯವಾಗಿ ಜಾಮೀನು ದೊರೆಯುವುದಿಲ್ಲ. ಆದರೆ ನ್ಯಾಯಮೂರ್ತಿಗಳು ಜಾಮೀನು ಕೊಟ್ಟಿದ್ದಾರೆ. ರಾಜ್ಯಸರಕಾರದ ಪರ ವಕೀಲರು ನ್ಯಾಯಾಲಯದ ಮುಂದೆ ಸತ್ಯಾಸತ್ಯತೆಗಳನ್ನು ವಿವರಿಸಲಿದ್ದಾರೆ ಎಂದು ಪರಮೇಶ್ವರ್‌ ತಿಳಿಸಿದರು.

ರಾಜ್ಯಪಾಲರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ನ್ಯಾಯಯುತವಾಗಿ ನಿರ್ಧಾರ ತೆಗೆದುಕೊಂಡರೆ ಒಪ್ಪಿಕೊಳ್ಳುತ್ತೇವೆ. ರಾಜ್ಯಪಾಲರು ಕಾನೂನು ಬಿಟ್ಟು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಮಗೆ ಅನಿಸುವುದಿಲ್ಲ. ಕಾನೂನಿನ ಪ್ರಕಾರ ನಡೆದುಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.

Advertisement

ಕೆನೆಪದರ ಮೀರಿದವರನ್ನು ಮೀಸಲಾತಿಯಿಂದ ಹೊರಗಿಡುವ ಬಗ್ಗೆ ನನ್ನ ಅಭಿಪ್ರಾಯಗಳು ಏನೇ ಇದ್ದರೂ ಅದು ವೈಯಕ್ತಿಕ. ಎಐಸಿಸಿ ಚರ್ಚೆ ಮಾಡಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜ್ಯ ಘಟಕಕ್ಕೆ ನೀಡುವ ನಿರ್ದೇಶನಗಳು ಮುಖ್ಯವಾಗುತ್ತದೆ. ನಂತರ ನಾವು ಪ್ರತಿಕ್ರಿಯೆ ನೀಡುತ್ತೇವೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next