Advertisement

Congress Government; ವಿಪಕ್ಷದ ಮೇಲೆ ಆರೋಪಗಳ ಸುರಿಮಳೆ!

01:07 AM Jul 20, 2024 | Team Udayavani |

ಬೆಂಗಳೂರು: ವಿಪಕ್ಷಗಳ ಧರಣಿ, ಗದ್ದಲ- ಗಲಾಟೆ ನಡುವೆಯೇ ಅತಿವೃಷ್ಟಿಯ ಕುರಿತು ಚರ್ಚಿಸಲು ಸ್ಪೀಕರ್‌ ಅವಕಾಶ ಕೊಟ್ಟಿದ್ದರೂ ಆಡಳಿತ ಪಕ್ಷದ ಸದಸ್ಯರು ಮಾತ್ರ ವಿಪಕ್ಷದ ವಿರುದ್ಧ ಆರೋಪಗಳ ಸುರಿಮಳೆಗೈದರು.

Advertisement

ಚರ್ಚೆಗೆ ಅಡ್ಡಿಪಡಿಸುತ್ತಿರುವ ಬಿಜೆಪಿಯವರನ್ನು ಹೊರ ಹಾಕಿ ಎಂದು ಆಗ್ರಹಿಸಿದವರೇ ಹೆಚ್ಚು. ಅಷ್ಟೇ ಅಲ್ಲದೆ, ಅತಿವೃಷ್ಟಿ ಕುರಿತು ಶಿವಲಿಂಗೇಗೌಡ ಮಾತನಾಡುತ್ತ, ಬಿಜೆಪಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಿದೆ. ಇವರ ಪಾಪದ ಕೊಡ ತುಂಬಿದೆ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಧಿಕಾರದಲ್ಲಿದ್ದಾಗ 220 ಕೋಟಿ ರೂ. ಲೂಟಿ ಮಾಡಿದ್ದಾರೆ.

ಪ್ರಕರಣ ಮುಚ್ಚಿ ಹಾಕಿದ್ದಾರೆ. ಇವರಂತೆ ನಾವು ಪ್ರಕರಣ ಮುಚ್ಚಿಟ್ಟಿಲ್ಲ. ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅನುಭವಿಸುತ್ತಾರೆ. ಆತ್ಮಸ್ಥೈರ್ಯ ಇದ್ದರೆ ಸಿಎಂ ಉತ್ತರವನ್ನು ಆಲಿಸಲಿ ಎನ್ನಲಾರಂಭಿಸಿದರು. ಅತಿವೃಷ್ಟಿ ಬಗ್ಗೆ ಮಾತನಾಡಿ ಎಂದು ಸ್ಪೀಕರ್‌ ಎಷ್ಟು ಹೇಳಿದರೂ ಕೇಳಿಸಿಕೊಳ್ಳಲಿಲ್ಲ. ಕೊನೆಗೆ ತರೀಕೆರೆ ಶಾಸಕ ಶ್ರೀನಿವಾಸ್‌ ಅವರಿಗೆ ಮಾತನಾಡಲು ಸ್ಪೀಕರ್‌ ಸೂಚಿಸಿದರು.

ಬಂಗಾರಪೇಟೆ ನಾರಾಯಣಸ್ವಾಮಿ ತಮ್ಮ ಮಾತಿನುದ್ದಕ್ಕೂ ವಿಪಕ್ಷ ಸದಸ್ಯರ ವಿರುದ್ಧ ಹರಿಹಾಯುತ್ತಿದ್ದರು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಮಳೆ ಬರಲ್ಲ ಎನ್ನುತ್ತಿದ್ದರು. ಈಗ ಮಳೆಯಿಂದ ರಾಜ್ಯ ಸಮೃದ್ಧಿವಾಗಿದೆ. ಗ್ಯಾರಂಟಿಯಿಂದ ಜನ ಸಂತೃಪ್ತರಾಗಿದ್ದಾರೆ ಎನ್ನುತ್ತಿದ್ದಂತೆ ವಿಪಕ್ಷದವರು ಹಾಸ್ಯ ಮಾಡಲು ಶುರುಮಾಡಿದರು.

ಪ್ರದೀಪ್‌ ಈಶ್ವರ್‌ ಕೈಗೆ ಕಬ್ಬಿಣ ಕೊಡ್ರಿ…
ಅತಿವೃಷ್ಟಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌, ಶಾಸಕರಿಗೆ ಅನುದಾನ ಕೊಟ್ಟಿಲ್ಲ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಾರೆ. ಪ್ರತಿ ಶಾಸಕರಿಗೂ 25 ಕೋಟಿ ರೂ. ಅನುದಾನವನ್ನು ಸರಕಾರ ಕೊಟ್ಟಿದೆ ಎಂದು ಸಮರ್ಥಿಸಿಕೊಳ್ಳಲು ನಿಂತರು. ಇದಕ್ಕೆ ತಡೆಯೊಡ್ಡಿದ ವಿಪಕ್ಷ ಸದಸ್ಯರು, ಬಂಡಲ್‌ ಬಂಡಲ್‌… ಪ್ರದೀಪ್‌ ಈಶ್ವರ್‌ ಬಂಡಲ್‌ ಎಂದು ಕಾಲೆಳೆದರು.

Advertisement

ಅಷ್ಟರಲ್ಲೇ ಸ್ಪೀಕರ್‌ ಕೂಡ ಪ್ರದೀಪ್‌ ಈಶ್ವರ್‌ ಕೂತ್ಕೊಳಿ ಎನ್ನುತ್ತ ಶರತ್‌ ಬಚ್ಚೇಗೌಡರಿಗೆ ಮಾತನಾಡಲು ಅವಕಾಶವಿತ್ತರು. ಆದರೂ ಪ್ರದೀಪ್‌ ಈಶ್ವರ್‌ ಮಾತ್ರ ಮಾತು ಮುಂದುವರಿಸಿ, ಬಿಜೆಪಿಯವರು ಕೋವಿಡ್‌ ಕಳ್ಳರು, ಅದನ್ನೇಕೆ ಸಿಬಿಐ ತನಿಖೆಗೆ ಕೊಡಲಿಲ್ಲ ಎಂದೆಲ್ಲ ಕೂಗಲಾರಂಭಿಸಿದರು. ಬಿಜೆಪಿಯವರು ಕೆಣಕಿದಾಗಲೆಲ್ಲ ವೀರಾವೇಶದಿಂದ ಎದ್ದು ನಿಲ್ಲುತ್ತಿದ್ದ ಪ್ರದೀಪ್‌ ಈಶ್ವರ್‌ ಕೈಗೆ ಯಾರಾದರೂ ಕಬ್ಬಿಣ ಕೊಡಿ’ ಎಂದ ಸ್ಪೀಕರ್‌ ಮಾತು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next