Advertisement

ಕಣಕ್ಕಿಳಿದ ಖಾದ್ರಿ ; ಮಲ್ಲಮ್ಮ “ಕೈ’ಗೆ ಟಿಕೆಟ್‌

06:42 PM Mar 19, 2021 | Team Udayavani |

ಬೀದರ : ತೀವ್ರ ಕುತೂಹಲ ಕೆರಳಿಸಿರುವ ಬಸವಕಲ್ಯಾಣ ಉಪ ಕದನಕ್ಕಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಚುನಾವಣಾ ಅಖಾಡಕ್ಕೆ ಧುಮುಕಿವೆ. ಬಿಜೆಪಿ ಪಾಳಯದಲ್ಲಿ ಮಾತ್ರ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಕಸರತ್ತು ಮುಂದುವರಿದಿದೆ. ಬಿ.ನಾರಾಯಣರಾವ್‌ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿ ಮಾಡುತ್ತಿದ್ದಂತೆ ಇತ್ತ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Advertisement

ಗುರುವಾರ ಮಧ್ಯಾಹ್ನ ಮೊದಲ ಅಭ್ಯರ್ಥಿಯಾಗಿ ಜೆಡಿಎಸ್‌ ಸೈಯದ್‌ ಯಸ್ರಬ್‌ ಅಲಿ ಖಾದ್ರಿ ಅವರನ್ನು ಅಚ್ಚರಿಯ ಅಭ್ಯರ್ಥಿಯಾಗಿ ಘೋಷಿಸುತ್ತಿದ್ದಂತೆ, ಸಂಜೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ದಿ|ನಾರಾಯಣರಾವ್‌ ಪತ್ನಿ ಮಲ್ಲಮ್ಮ ಅವರ ಹೆಸರನ್ನು ಪ್ರಕಟಿಸಿದೆ. ಈ ಮೂಲಕ ಎರಡು ಪಕ್ಷಗಳು ಮಿನಿ ಫೈಟ್‌ಗೆ ರಣ ಕಹಳೆ ಮೊಳಗಿವೆ. ಕಾಂಗ್ರೆಸ್‌ನಿಂದ ಅನುಕಂಪದ ಅಸ್ತ್ರ: ಕೈ ವಶದಲ್ಲಿದ್ದ ಬಸವಕಲ್ಯಾಣ ಕ್ಷೇತ್ರವನ್ನು ಶತಾಯ ಗತಾಯ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್‌ ಅಳೆದು ತೂಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ.

ಟಿಕೆಟ್‌ಗಾಗಿ ದಿ|ನಾರಾಯಣರಾವ್‌ ಅವರ ಪತ್ನಿ ಮಲ್ಲಮ್ಮ ಅಥವಾ ಮಾಜಿ ಸಿಎಂ ದಿ|ಧರಂಸಿಂಗ್‌ ಅವರ ಪುತ್ರ ಎಂಎಲ್‌ಸಿ ವಿಜಯಸಿಂಗ್‌ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿತ್ತು. ಆದರೆ, ಕೊನೆಗೆ ಪಕ್ಷ ಮಲ್ಲಮ್ಮ ಅವರಿಗೆ ಮಣೆ ಹಾಕಿದೆ. ಜನನಾಯಕರಾಗಿ ಗುರುತಿಸಿಕೊಂಡಿದ್ದ ನಾರಾಯಣರಾವ್‌ ಅವರ ಓಟ್‌ ಬ್ಯಾಂಕ್‌ ಜತೆಗೆ ಅನುಕಂಪದ ಮತಗಳ ಲೆಕ್ಕಾಚಾರದ ಅಸ್ತ್ರ ಪ್ರಯೋಗಿಸಿದೆ. ನಾರಾಯಣರಾವ್‌ ನಿಧನ ಬಳಿಕ ಅವರ ಪತ್ನಿ ಅಥವಾ ಪುತ್ರನಿಗೆ ಟಿಕೆಟ್‌ ನೀಡುವ ಮೂಲಕ ಕುಟುಂಬದ ಕೈ ಹಿಡಿಯುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು.

ಇನ್ನೊಂದೆಡೆ ಎಂಎಲ್‌ಸಿ ವಿಜಯಸಿಂಗ್‌ ಅವರಿಗೆ ಟಿಕೆಟ್‌ ಕೊಡಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕಸರತ್ತು ನಡೆಸಿದ್ದರು. ಆದರೆ, ಕೊನೆ ಹಂತದಲ್ಲಿ ಸಿದ್ದರಾಮಯ್ಯ ಮೇಲುಗೈ ಸಾ ಧಿಸಿದ್ದಾರೆ. ಇನ್ನೊಂದೆಡೆ ಬಸವಕಲ್ಯಾಣ ಉಪ ಕದನಕ್ಕೆ ಸ್ಪ ರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಧಾರ್ಮಿಕ ಗುರುಗಳೂ ಆಗಿರುವ ಸಕ್ರಿಯ ರಾಜಕಾರಣಿ ಸೈಯದ್‌ ಯಸ್ರಬ್‌ ಅಲಿ ಖಾದ್ರಿ ಅವರನ್ನು ಅಚ್ಚರಿಯ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ.

ಐತಿಹಾಸಿಕ ಬಡೇಶಾ ದರ್ಗಾದ ಮೂರನೇ ತಲೆಮಾರಿನ ಸಜ್ಜಾದ್‌ ಆಗಿರುವ ಖಾದ್ರಿ ಕಳೆದ ಒಂದೂವರೆ ದಶಕದಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು. ಮಾಜಿ ಸಿಎಂ ಧರಂಸಿಂಗ್‌ ಮತ್ತು ಶಾಸಕ ನಾರಾಯಣರಾವ್‌ ಅವರಿಗೆ ಆಪ್ತರಾಗಿದ್ದ ಖಾದ್ರಿ, ಈಗ “ಕೈ’ ತೊರೆದು “ತೆನೆ’ ಹೊತ್ತಿದ್ದಾರೆ. ಬಸವಣ್ಣನ ಕರ್ಮಭೂಮಿಯಲ್ಲಿ ಕಮಲ ಅರಳಿಸಲೇಬೇಕು ಎಂದು ಪ್ರತಿಷ್ಠೆಯಾಗಿ ಪಡೆದಿರುವ ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಇದರಿಂದ ಸಹಜವಾಗಿ ಕಮಲ ಚಿಹ್ನೆ ಮೇಲೆ ಸ್ಪ  ರ್ಧಿಸಲು ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ವರಿಷ್ಠರು ಸಹ ಗೆಲ್ಲುವ ಕುದರೆ ಕಣಕ್ಕಿಳಿಸಲು ಮುಂದಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next