Advertisement

ಇಂಡಿ ಪುರಸಭೆ ಕಾಂಗ್ರೆಸ್‌ ಮಡಿಲಿಗೆ

07:24 PM Oct 30, 2020 | Suhan S |

ಇಂಡಿ: ಇಲ್ಲಿನ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಕೈ ಪಾಲಾಗಿದ್ದು, ಬಿಜೆಪಿಗೆ ಭಾರೀ ಮುಖಭಂಗವಾಗಿದೆ.

Advertisement

ಜೆಡಿಎಸ್‌ನ ಶೈಲಜಾ ಪೂಜಾರಿ ಹಾಗೂ ಪಕ್ಷೇತರ ಸದಸ್ಯ ಇಸ್ಮಾಯಿಲ್‌ ಅರಬ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಗೊಂಡ ನಂತರ ನಾಮಪತ್ರ ಸಲ್ಲಿಸಿದ್ದು, ಪ್ರತಿಸ್ಪರ್ಧಿಯಾಗಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ತಹಶೀಲ್ದಾರ್‌ ಚಿದಂಬರ ಕುಲಕರ್ಣಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಬಹುಮತವಿಲ್ಲದಿದ್ದರೂ ಪುರಸಭೆಯ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. 23 ಸದಸ್ಯರ ಬಲ ಹೊಂದಿದ ಪುರಸಭೆಗೆ 11 ಬಿಜೆಪಿ ಸದಸ್ಯರು, 8 ಕಾಂಗ್ರೆಸ್‌ ಸದಸ್ಯರು, ಎರಡು ಜೆಡಿಎಸ್‌ ಸದಸ್ಯರು, ಎರಡು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು.

ಜೆಡಿಎಸ್‌ನ ಶೈಲಜಾ ಪೂಜಾರಿ ಹಾಗೂ ಪಕ್ಷೇತರ ಸದಸ್ಯ ಇಸ್ಮಾಯಿಲ್‌ ಅರಬ ಅಧಿಕೃತವಾಗಿ ಶಾಸಕ ಯಶವಂತ್ರಾಯಗೌಡ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಅಭ್ಯರ್ಥಿ ಭಾಗೀರಥಿ ಕುಂಬಾರ ಸಹ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್‌ನ ದಾರಿ ಸುಗಮವಾಗಿ ಅವಿರೋಧವಾಗಿ ಆಯ್ಕೆ ನಡೆದಿದೆ. ಸ್ಥಳೀಯ ಶಾಸಕ ಯಶವಂತ್ರಾಯಗೌಡ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್‌ ಪದಾಧಿಕಾರಿಗಳು ಕಮಲಕ್ಕೆ ಅಪರೇಶನ್‌ ಮಾಡಿದ್ದಾರೆ. ಓರ್ವ ಬಿಜೆಪಿ ಸದಸ್ಯೆಯನ್ನೇ ತಮ್ಮ ಪಕ್ಷಕ್ಕೆ ಸೆಳೆದುಕೊಂಡು ಕಾಂಗ್ರೆಸ್‌ ಗದ್ದುಗೆ ಹಿಡಿದಿದೆ.

ಬಿಜೆಪಿಯಲ್ಲಿ ಕನಿಷ್ಠ 10 ಜನ ಶಾಸಕ ಸ್ಥಾನದ ಆಕಾಂಕ್ಷಿಗಳಿದ್ದು, ಅವರೆಲ್ಲರೂ ಹೊಂದಾಣಿಕೆ ಇಲ್ಲದ ಕಾರಣಕ್ಕೆ ಈ ರೀತಿಯಾಗುತ್ತಲಿದೆ. ಈ ಹಿಂದೆಯೂ ಬಿಜೆಪಿ ಅನೇಕ ಸದಸ್ಯರು ಬೇರೆ ಪಕ್ಷಕ್ಕೆ ಬೆಂಬಲಿಸಿದ್ದ ಉದಾಹರಣೆಗಳೂ ಇವೆ. ಬಿಜೆಪಿಯ ಇನ್ನೂ ಇಬ್ಬರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಬಹುದಿತ್ತು. ನಾಮಪತ್ರ ಸಲ್ಲಿಸಬಹುದಿತ್ತು. ಆದರೆ ಹೊಂದಾಣಿಕೆ ಇಲ್ಲದ ಕಾರಣವೋ ಅಥವಾ ಕಾಂಗ್ರೆಸ್‌ ಜೊತೆಗಿನ ಒಳ ಒಪ್ಪಂದದಿಂದಲೋ ಅವರು ನಾಮಪತ್ರ ಸಲ್ಲಿಸಲೇ ಇಲ್ಲ. ಇದರಿಂದ ಬಾಹ್ಯವಾಗಿ ಕಾಂಗ್ರೆಸ್‌ಗೆ ಬಿಜೆಪಿ ಬೆಂಬಲ ಸೂಚಿಸಿದಂತಾಗಿದೆ.

ಪುರಸಭೆ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಶಾಸಕ ಯಶವಂತ್ರಾಯಗೌಡ ಪಾಟೀಲ ಯಶಸ್ಸು ಕಂಡಿದ್ದಾರೆ. ತಮ್ಮ ಕಾರ್ಯಕರ್ತರ ಶ್ರಮವೇ ಈಗ ನಾವು ಅಧಿಕಾರದ ಗದ್ದುಗೆ ಹಿಡಿಯಲು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಅವಿರೋಧ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಂಭ್ರಮಾಚರಣೆಯಲ್ಲಿ ಶಾಸಕ ಪಾಟೀಲ ಭಾಗಿಯಾದರು.

Advertisement

ಕೋರಂ ಸಂದರ್ಭದಲ್ಲಿ ಶಾಸಕ ಪಾಟೀಲ, ಶೈಲಜಾ ಪೂಜಾರಿ, ಇಸ್ಮಾಯಿಲ್‌ ಅರಬ, ರೇಖಾ ಮೂರಮನ್‌, ಅನಸೂಬಾಯಿ ಕಾಲೇಬಾಗ, ಜಾಂಗೀರ ಮೈಬೂಸಾಬ ಸೌದಾಗರ, ಭಾಗೀರಥಿ ನಾಗಪ್ಪ ಕುಂಬಾರ, ಸಂಗೀತಾ ಕರಿಕಟ್ಟಿ, ಮುಸ್ತಾಕ್‌ ಅಹ್ಮದ್‌ ಅಲ್ಲಾಭಕ್ಷ ಇಂಡೀಕರ, ಶಬ್ಬಿರ ಖಾಜಿ, ಅಸ್ಲಾಂ ಕಡಣಿ, ಅಯೂಬ ಬಾಗವಾನ, ಉಮೇಶ ದೇಗಿನಾಳ, ಲಿಂಬಾಜಿ ರಾಠೊಡ ಇದ್ದರು.

ಸಂಭ್ರಮಾಚರಣೆಯಲ್ಲಿ ತಾಪಂ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಸಂಭಾಜಿ ಮಿಸಾಳೆ, ಭೀಮಾಶಂಕರ ಮುರಗುಂಡಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಇಲಿಯಾಸ್‌ ಬೋರಾಮಣಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ದೇವು ಕಂಠೀಕರ, ಅವಿನಾಶ ಬಗಲಿ, ಜಾವೀದ್‌ ಮೋಮಿನ್‌, ಧರ್ಮರಾಜ ವಾಲೀಕಾರ, ಜೀತಪ್ಪ ಕಲ್ಯಾಣಿ, ಸತೀಶ ಕುಂಬಾರ, ಯಲಗೊಂಡ ಪೂಜಾರಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next