ಹುಬ್ಬಳ್ಳಿ: ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದಾಗ ಕರ್ನಾಟಕದಿಂದಲೇ ಮರುಜೀವ ಪಡೆದ ಇತಿಹಾಸವಿದೆ. ಇದೀಗ ಅಂತಹ ಪರಿಸ್ಥಿತಿ ಎದುರಾಗಿದ್ದು, ಮುಂದಿನ ಚುನಾವಣೆಯಲ್ಲಿ ಕರ್ನಾಟಕ ಅಧಿಕಾರಕ್ಕೆ ಬರುವ ಮೂಲಕ ಕಾಂಗ್ರೆಸ್‌ಗೆ ಮರುಜೀವ ದೊರೆಯಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಬೆಳಗಾವಿ ವಿಭಾಗದ ಉಸ್ತುವಾರಿ ಪಿ.ಸಿ.ವಿಷ್ಣುನಾಥ ಹೇಳಿದರು.
ಆ. 2 ರಂದು ರಾಹುಲ್ ಗಾಂಧಿ ನಗರಕ್ಕೆ ಭೇಟಿ, ಆ.3ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಜನ್ಮದಿನ ಪ್ರಯುಕ್ತ ಸಮಾವೇಶ ಹಾಗೂ ಬೆಂಗಳೂರಿನಲ್ಲಿ ನಡೆಯುವ ಸ್ವಾತಂತ್ರ್ಯ ನಡಿಗೆ ಕುರಿತು ಶುಕ್ರವಾರ ಇಲ್ಲಿನ ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಕಾಂಗ್ರೆಸ್ ಇನ್ನೇನು ಮುಳುಗಿತು ಎನ್ನುವ ಹಂತದಲ್ಲಿದ್ದಾಗ ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಹಾಗೂ ದೇಶದ ಕಾಳಜಿ ಮೆಚ್ಚಿ ಮರು ಜೀವ ನೀಡಿದ್ದರು. ಅಂದು ಇಂದಿರಾಗಾಂಧಿ ಪಕ್ಷವನ್ನು ಮುನ್ನಡೆಸಿದ್ದರು. ಇಂದು ಸೋನಿಯಾ ಗಾಂಧಿ ಅವರು ಪಕ್ಷದ ನೇತೃತ್ವದ ವಹಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ದೇಶಾದ್ಯಂತ ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೂತ್ ಮಟ್ಟದ ಕಾರ್ಯಕರ್ತರಿಂದ ಹಿಡಿದು ನಾಯಕರವರೆಗೂ ಸಂಘಟಿಸಬೇಕು. ರಾಹುಲ್ ಗಾಂಧಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಬೇಕು. ಬೆಂಗಳೂರಿನಲ್ಲಿ ನಡೆಯುವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ 1ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳಬೇಕು. ಈ ಕುರಿತು ಕ್ಷೇತ್ರ, ಬೂತ್ ಮಟ್ಟದಲ್ಲಿ ಮಾಹಿತಿ ನೀಡುವುದು, ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳುವಂತಾಗಬೇಕು ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಮೂರು ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸಬೇಕು. ಯಾವುದೇ ಗೊಂದಲಗಳು ಆಗದಂತೆ ಯೋಜನೆ ರೂಪಿಸಬೇಕು. ಪ್ರತಿಯೊಂದು ಕ್ಷೇತ್ರದಿಂದ ಜನರು ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಕ್ಕೆ, ಬಡವರಿಗೆ ನೀಡಿದ ಯೋಜನೆಗಳನ್ನು ಸಾಧನೆಗಳನ್ನು ಸ್ಮರಿಸುವ ಕಾಲವಿದು. ಕಾಂಗ್ರೆಸ್ ಸರಕಾರದ ಯೋಜನೆ ಪಡೆದ ಕುಟುಂಬಗಳಿಂದ ಓರ್ವ ಸದಸ್ಯರು ಬಂದರೆ ದಾವಣಗೆರೆ ನಗರ ಸಾಲಲ್ಲ. ಅಷ್ಟೊಂದು ಜನರು ಪಾಲ್ಗೊಳ್ಳಲಿದ್ದಾರೆನ್ನುವ ವಿಶ್ವಾಸವಿದೆ. ಬೆಂಗಳೂರಿನ ಕಾರ್ಯಕ್ರಮ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ಸುವರ್ಣಾವಕಾಶ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಪಿ.ವಿ.ಮೋಹನ ಮಾತನಾಡಿ, ಬೆಂಗಳೂರು ಬಿಟ್ಟರೆ ದೇಶದ ಜನರ ಗಮನ ಸೆಳೆಯುವುದು ಹುಬ್ಬಳ್ಳಿ-ಧಾರವಾಡ. ಮುಂದಿನ 3 ಕಾರ್ಯಕ್ರಮಗಳಿಗೆ ಪಕ್ಷ ಪೂರ್ಣ ಪ್ರಮಾಣದ ತಯಾರಿ ಮಾಡಿಕೊಳ್ಳಬೇಕು. ಮುಂದಿನ ಚುನಾವಣೆಗೆ ಸನದ್ಧರಾಗಬೇಕು. ಪ್ರತಿಯೊಬ್ಬ ನಾಯಕರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ರಾಜ್ಯದಲ್ಲಿ ಬಿಜೆಪಿಯನ್ನು ಮೂಲೆಗಟ್ಟುವುದು ಕಷ್ಟವೇನಲ್ಲ. ಸ್ವಾತಂತ್ರ್ಯ ನಡಿಗೆ ಮುಂದಿನ ರಾಜಕಾರಣಕ್ಕೆ ವೇದಿಕೆ ಕಲ್ಪಿಸಲಿದೆ. ಈ ನಡಿಗೆಯಲ್ಲಿ ಪಾಲ್ಗೊಳ್ಳುವವರು ಮೊದಲೇ ನೋಂದಣಿ ಮಾಡಿಕೊಳ್ಳಬಹುದು ಎಂದರು.
ಕೆಪಿಸಿಸಿ ವತಿಯಿಂದ ನಡೆಯುವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವೆಬ್ ಪೋರ್ಟಲ್‌ಗೆ ಮುಖಂಡರು ಚಾಲನೆ ನೀಡಿದರು. ನಡಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರು www. fredommarch.in ಇದರಲ್ಲಿ ನೋಂದಣಿ ಮಾಡಿಕೊಂಡರೆ ಊಟ, ವಸತಿ ಸೇರಿದಂತೆ ಪಕ್ಷದ ನೀಡುವ ಇತರೆ ಸೌಲಭ್ಯ ದೊರೆಯಲಿದೆ ಎಂದು ಮಾಹಿತಿ ನೀಡಲಾಯಿತು.
ಜಿಲ್ಲಾಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರು, ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ಎ.ಎಂ.ಹಿಂಡಸಗೇರಿ, ಎನ್.ಎಚ್. ಕೋನರಡ್ಡಿ, ಎಂ.ಎಸ್.ಅಕ್ಕಿ, ಸದಾನಂದ ಡಂಗನವರ, ದೀಪಾ ಗೌರಿ, ಶಿವಾನಂದ ಕರಿಗಾರ, ಪರ್ವೇಜ್ ಕೊಣ್ಣೂರು ಸೇರಿದಂತೆ ವಿವಿಧ ತಾಲೂಕಿನಿಂದ ಆಗಮಿಸಿದ್ದ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.