Advertisement

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

12:06 AM Mar 29, 2024 | Team Udayavani |

ಬೆಂಗಳೂರು: ಕೋಲಾರ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಎರಡೂ ಬಣಗಳಿಂದ ಹೊರತಾದ ಮೂರನೇ ಅಭ್ಯರ್ಥಿ ಯನ್ನು ಕಣಕ್ಕಿಳಿಸುವ ಮೂಲಕ ಭಿನ್ನಮತಕ್ಕೆ ತೆರೆ ಎಳೆಯಲು ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ.

Advertisement

ಇದರೊಂದಿಗೆ ಇಬ್ಬರ ನಡುವಿನ ಜಗಳ ಮೂರನೇ ವ್ಯಕ್ತಿಗೆ ಲಾಭ ತಂದುಕೊಡುವ ಸಾಧ್ಯತೆ ನಿಚ್ಚಳವಾಗಿದೆ. ಈ ಮೂಲಕ ಕೋಲಾರ ಬಂಡಾಯಕ್ಕೆ ಸಂಧಾನ ಸೂತ್ರ ಹೆಣೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ಕೋಲಾರದಲ್ಲಿ ಎರಡೂ ಬಣಗಳಿಂದ ಹೊರತಾದ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಿ.ಎಂ. ಮುನಿಯಪ್ಪ, ಮಾಜಿ ಮೇಯರ್‌ ವಿಜಯಕುಮಾರ್‌ ಪುತ್ರ ಗೌತಮ್‌ ಅವರ ಹೆಸರು ಇದೆ. ಇಬ್ಬರೂ ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಪೈಕಿ ಗೌತಮ್‌ ಹೆಸರು ಮುಂಚೂಣಿಯಲ್ಲಿದೆ. ರಾಜ್ಯ ನಾಯಕರು ಇದನ್ನು ಮತ್ತಷ್ಟು ಅಳೆದು-ತೂಗಿ ಹೆಸರು ಅಂತಿಮಗೊಳಿಸಿ ಹೈಕಮಾಂಡ್‌ ಅಂಗಳಕ್ಕೆ ಕಳುಹಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.

ಮತ್ತೊಂದು ಮೂಲದ ಪ್ರಕಾರ ಮುನಿಯಪ್ಪ ವಿರೋಧಿ ಬಣದ ರಾಜೀನಾಮೆ ಪ್ರಹಸನ, ಅದಕ್ಕೂ ಮುನ್ನ ನಡೆದ ಹಲವು ಪ್ರಸಂಗಗಳನ್ನು ಮನಗಂಡು ಸ್ವತಃ ಹೈಕಮಾಂಡ್‌ ಎರಡೂ ಬಣಗಳಿಂದ ಹೊರತಾದ ವ್ಯಕ್ತಿಯ ಹೆಸರು ಶಿಫಾರಸು ಮಾಡುವಂತೆ ರಾಜ್ಯ ನಾಯಕರಿಗೆ ಸೂಚಿಸಿತ್ತು. ಅದರಂತೆ ಹೊಸ ಮುಖಗಳ ಹುಡುಕಾಟ ಪ್ರಗತಿಯಲ್ಲಿದೆ.

ಸಂಧಾನ ಸಭೆ ಯಶಸ್ವಿ; ಬೈರತಿ ಸುರೇಶ್‌
ಈ ಮಧ್ಯೆ ಮುನಿಯಪ್ಪ ವಿರುದ್ಧ ಸಿಡಿದೆದ್ದು ರಾಜೀ ನಾಮೆಗೆ ಮುಂದಾಗಿದ್ದ ಸಚಿವರು, ಕಾಂಗ್ರೆಸ್‌ ಶಾಸಕ ರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌, ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ನೇತೃತ್ವದಲ್ಲಿ ಗುರುವಾರ ಸಂಧಾನ ಸಭೆ ನಡೆದಿದೆ. ಅದು ಯಶಸ್ವಿ ಕೂಡ ಆಗಿದೆ. ಅದರಂತೆ, “ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧರಾಗಿದ್ದು, ಯಾರಿಗೇ ಟಿಕೆಟ್‌ ನೀಡಿದರೂ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ತಮ್ಮದು’ ಅಂತ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Advertisement

ಸಭೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೈರತಿ ಸುರೇಶ್‌, ಸಂಧಾನ ಸಭೆ ಯಶಸ್ವಿಯಾಗಿದೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ಆದೇಶದಂತೆ ಯಾವುದೇ ಅಭ್ಯರ್ಥಿಗೆ ಟಿಕೆಟ್‌ ನೀಡಿದರೂ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆ. ಇದರೊಂದಿಗೆ ಅಸಮಾಧಾನ ಶಮನಗೊಂಡಂತಾಗಿದೆ ಎಂದರು.
ಸಚಿವ ಡಾ| ಎಂ.ಸಿ. ಸುಧಾಕರ್‌ ಮಾತನಾಡಿ, ಒಂದು ದಿನದ ಹಿಂದಷ್ಟೇ ನಾವು ರಾಜೀನಾಮೆಗೆ ಮುಂದಾಗಿದ್ದನ್ನು ಪಕ್ಷದ ನಾಯಕರು ಗಂಭೀರವಾಗಿ ಪರಿಗಣಿಸಿ, ನಮ್ಮ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಭಿನ್ನಾಭಿಪ್ರಾಯ ಸರಿಪಡಿಸುವ ಜವಾಬ್ದಾರಿ ತಮ್ಮದು ಎಂದಿದ್ದಾರೆ ಎಂದು ಹೇಳಿದರು.

ಪ್ರಚಾರ ಸಭೆ ದಿಢೀರ್‌ ಮುಂದೂಡಿಕೆ
ಬೆಂಗಳೂರು: ಬಗೆಹರಿಯದ ಕೋಲಾರ ಬಣ ರಾಜ ಕಾರಣದ ಗೊಂದಲದಿಂದಾಗಿ ಲೋಕಸಭಾ ಚುನಾವಣ ಪ್ರಚಾರ ಕಾರ್ಯಕ್ರಮ “ಪ್ರಜಾಧ್ವನಿ-2′ ದಿಢೀರ್‌ ಮುಂದೂಡುವಂತಾಗಿದೆ. ಮಾ. 29ರಿಂದ ಸಿಎಂ, ಡಿಸಿಎಂ ನೇತೃತ್ವದಲ್ಲಿ ಪ್ರಚಾರಕ್ಕೆ ಕೋಲಾರದ ಕುರುಡು ಮಲೆಯಿಂದ ಚಾಲನೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಅದೇ ಕೋಲಾರದಲ್ಲಿ ಪಕ್ಷದ ನಾಯಕರ ಭಿನ್ನಮತ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

ಚಿಕ್ಕಬಳ್ಳಾಪುರ ಬಂಡಾಯ ಬಿಸಿ
ಮ್ಯಾರಥಾನ್‌ ಸಭೆಗಳನ್ನು ನಡೆಸಿ ಕೋಲಾರ ಕಗ್ಗಂಟು ಬಿಡಿಸುವಷ್ಟರಲ್ಲಿ ಕಾಂಗ್ರೆಸ್‌ ನಾಯಕರಿಗೆ “ಚಿಕ್ಕಬಳ್ಳಾಪುರ ಬಂಡಾಯ’ದ ಬಿಸಿ ತಾಕಲು ಆರಂಭವಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಎಂ.ಆರ್‌. ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಹೆಸರು ಮುಂಚೂಣಿಯಲ್ಲಿದ್ದು, ಬಹುತೇಕ ಅಂತಿಮ ಎನ್ನಲಾಗುತ್ತಿದೆ. ಆದರೆ ಅದಕ್ಕೆ ಭಾರೀ ಪ್ರತಿರೋಧವೂ ವ್ಯಕ್ತವಾಗಿದೆ. ಅಸಮಾಧಾನದ ಹೊಗೆ ಯಾವುದೇ ಕ್ಷಣ ಭುಗಿಲೇಳುವ ಸಾಧ್ಯತೆ ಇದೆ.

ಇದಕ್ಕೆ ಪೂರಕವಾಗಿ ಈಗಾಗಲೇ ಬಾಗೇಪಲ್ಲಿ ಶಾಸಕ ಸುಬ್ಟಾರೆಡ್ಡಿ ಅವರು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೂಂದೆಡೆ ಟಿಕೆಟ್‌ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಶಿವಶಂಕರ ರೆಡ್ಡಿ ಕೂಡ ತಮ್ಮನ್ನು ಪಕ್ಷ ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಗೆ ಟಿಕೆಟ್‌ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಅವರಿಗೆ ಪಕ್ಷದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದನ್ನೇ ಮುಂದಿಟ್ಟುಕೊಂಡು ಅವರನ್ನು ಸೆಳೆಯಲು ಬಿಜೆಪಿ ತಂತ್ರ ಹೆಣೆಯುತ್ತಿದೆ.

ಇದೆಲ್ಲವೂ ಕಾಂಗ್ರೆಸ್‌ ಕೈಗೊಳ್ಳುವ ತೀರ್ಮಾನದ ಮೇಲೆ ನಿಂತಿದೆ. ಬಂಡಾಯದ ಸುಳಿವಿನ ಬೆನ್ನಲ್ಲೇ ಅದರ ಶಮನಕ್ಕೂ ಈಗ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next