ಕೋಲಾರ: ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ ಮತ್ತು ಕರ್ನಾಟಕ ಕಾಂಗ್ರೆಸ್ ಮುಕ್ತವಾಗಲಿದೆ. ಬಿಜೆಪಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಭವಿಷ್ಯ ನುಡಿದರು.
ನಗರದ ಹೊರವಲಯದ ಕೋಗಿಲಹಳ್ಳಿಯಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಸೋಲು ಕಟ್ಟಿಟ್ಟ ಬುತ್ತಿ ಎಂದರು. ಪ್ರತಿ ಜಿಲ್ಲೆಯಲ್ಲೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪಕ್ಷಕ್ಕೆ ಕಚೇರಿ ಅಗತ್ಯವಿದೆ, ಈ ಹಿನ್ನಲೆಯಲ್ಲಿ ಹೊಸ ಕಚೇರಿ ತಲೆಯೆತ್ತಿದ್ದು, ಇದರಿಂದ ಕಾರ್ಯಕರ್ತರಲ್ಲು ಹುರುಪು ಬಂದಿದೆ ಎಂದರು.
ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಸದೃಢವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಹುಮತ ಸಾಧಿಸಿ ಆಡಳಿತ ಹಿಡಿಯಲಿದೆ ಎಂದರು.
ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕೆ ಕಚ್ಚಾಟ: ಎಐಸಿಸಿ ಅಧ್ಯಕ್ಷರಿಗೆ ವಯಸ್ಸಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಭಿನ್ನಮತ ದೆಹಲಿಯ ಕದ ತಟ್ಟಿದ್ದು ಮೊನ್ನೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರರನ್ನು ಕರೆಸಿ ಛೀಮಾರಿ ಹಾಕಿ ಒಗ್ಗಟ್ಟು ಕಾಪಾಡಲು ಬುದ್ದಿ ಹೇಳಿ ಕಳುಹಿಸಿದ್ದರೂ ಸಿದ್ದರಾಮಯ್ಯ ರಾಜ್ಯಕ್ಕೆ ಕಾಲಿಡುತ್ತಲೆ ಡಿ.ಕೆ. ಶಿವಕುಮಾರ್ ವಿರುದ್ಧ ಜಂಡಾ ಎತ್ತಿ ಕಾಲೆಳೆದಿದ್ದಾರೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಮಿತ್ ಷಾ ರಾಜ್ಯಕ್ಕೆ ಬರುತ್ತಿದ್ದಾರೆಂಬ ಮಾಹಿತಿ ತಿಳಿದು ಕಾಂಗ್ರೆಸ್ ಪಕ್ಷದವರಿಗೆ ನಡುಕ ಆರಂಭವಾಗಿದೆ ಎಂದರು.
ನರೇಂದ್ರ ಮೋದಿ ಅಧಿಕಾರಕ್ಕೆ ಬಾರದಿದ್ದರೆ ಕಾಂಗ್ರೆಸ್ ನಿಂದ ವ್ಯಾಕ್ಸಿನ್ ಹಾಕಿಸುತ್ತಿರಲಿಲ್ಲ. ಅದೆಷ್ಟು ಜನರನ್ನು ಬಲಿ ನೀಡುತ್ತಿದ್ದರೋ ತಿಳಿಯದು. ಮೋದಿ ಅಡಳಿತದಲ್ಲಿ ಹಲವು ಏರ್‌ಪೋರ್ಟ್‌ಗಳು, ರೈಲ್ವೆ ಮಾರ್ಗಗಳು, ಹೆದ್ದಾರಿಗಳು ಅಭಿವೃದ್ಧಿಯಾಗಿವೆ. ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಕಂಪನಿಗಳು ಹೆಚ್ಚಾಗುತ್ತಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಭಾರತವು ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್. ಮುನಿಸ್ವಾಮಿ, ಸರ್ಕಾರದ ಮುಖ್ಯಸಚೇತಕ ವೈ.ಎ.ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಬಿ.ಪಿ.ಮುನಿವೆಂಕಟಪ್ಪ, ಮಂಜುನಾಥ್‌ಗೌಡ, ವೈ. ಸಂಪಂಗಿ, ವರ್ತೂರು ಪ್ರಕಾಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಕೆ.ಯು.ಡಿ.ಎ. ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾವು ಅಭಿವೃದ್ಧಿ ಮಂಡಳಿ ವಾಸುದೇವ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಮಾಗೇರಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಅಪ್ಪಿ ನಾರಾಯಣಸ್ವಾಮಿ, ಪಿ.ಎಸ್. ಸತ್ಯನಾರಾಯಣರಾವ್ ಇತರರಿದ್ದರು.