ಬೆಂಗಳೂರು: ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಟಾರ್ ಬಿಜೆಪಿ ತೊರೆಯುವ ಸಾಧ್ಯತೆ ದಟ್ಟವಾಗಿದ್ದು, ಅಲ್ಲದೆ ಬಿಜೆಪಿಯ ಒಂದು ಡಜನ್‌ಗೂ ಹೆಚ್ಚು ಮಾಜಿ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.
ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಈ ತಂತ್ರಗಾರಿಕೆ ಆರಂಭಿಸಿದೆ. ಆದರೆ ಹಾಲಿ ಶಾಸಕರನ್ನು ಕರೆತರಲು ಪಕ್ಷದ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ಸಚಿವರಿಂದಲೂ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ ಎನ್ನಲಾಗಿದೆ.
ಸೋಮಶೇಖರ್ ಹಾಗೂ ಹೆಬ್ಟಾರ್ ಅವರನ್ನು ಬೇರೆ ಬೇರೆ ಕಾರಣಗಳಿಂದ ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ನ ಉನ್ನತ ವಲಯದ ಒಪ್ಪಿಗೆ ಇದೆ. ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್ ಶಾಸಕರಿಗೆ ಹೆಬ್ಟಾರ್ ಅನ್ನು ಮರಳಿ ಕಾಂಗ್ರೆಸ್‌ಗೆ ಕರೆ ತಂದು ಲೋಕಸಭಾ ಚುನಾವಣೆಗೆ ನಿಲ್ಲಿಸುವ ಲೆಕ್ಕಾಚಾರಗಳು ಇವೆ. ಅದೇ ಸೂತ್ರ ಸೋಮಶೇಖರ್‌ಗೂ ಅನ್ವಯಿಸಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಮಾಜಿ ಶಾಸಕರು ಹಾಗೂ ಸ್ಥಳೀಯವಾಗಿ ಪ್ರಭಾವ ಹೊಂದಿರುವ ಮುಖಂಡರನ್ನು ಪಕ್ಷಕ್ಕೆ ಕರೆತಂದು ಲೋಕಸಭಾ ಚುನಾವಣೆಯಲ್ಲಿ ಸರಾಸರಿ ಮತ ಗಳಿಕೆ ಹೆಚ್ಚಿಸಿಕೊಳ್ಳಬೇಕೆಂಬ ತಂತ್ರವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹೆಣೆದಿದ್ದಾರೆ. ಬೈಂದೂರಿನ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಸುಮಾರು ಒಂದು ಡಜನ್ ನಾಯಕರನ್ನು ಡಿಕೆಶಿ ಈಗಾಗಲೇ ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಪರೇಷನ್ ಹಸ್ತ ಕಾಂಗ್ರೆಸ್‌ಗೆ ಮುಳುವಾಗುತ್ತದೆ. ಆಪರೇಷನ್ ಹಸ್ತಕ್ಕೆ ಸಿಲುಕಿದವರ ಪರಿಸ್ಥಿತಿ ಲೋಕಸಭೆ ಚುನಾವಣೆ ಬಳಿಕ ನಾಯಿ ಪಾಡಾಗಲಿದೆ. ಈಗಲೇ ಅಲ್ಲಿ 136 ಜನ ಶಾಸಕರಿದ್ದಾರೆ. ಈಗ ಕಾಂಗ್ರೆಸ್ಸಿಗೆ ಹೋದವರನ್ನು ಮತ್ತೆ ಲಾಸ್ಟ್ ಬೆಂಚ್‌ನಲ್ಲಿ ಕುಳ್ಳರಿಸುತ್ತಾರೆ. ಇದನ್ನು ಗೃಹ ಸಚಿವ ಜಿ. ಪರಮೇಶ್ವರ್ ಅವರೇ ಹೇಳಿದ್ದಾರೆ. ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಟಿಕೆಟ್ ಕೊಡುತ್ತೇವೆ ಎಂದು ಯಾರೂ ಹೇಳಿಲ್ಲ. ಈ ಕುರಿತು ಸೆ.9ರಂದು ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಚರ್ಚಿಸುತ್ತೇವೆ. ಹಿಂದೆ ಸಿದ್ದರಾಮಯ್ಯ ಸಿಎಂ ಇದ್ದಾಗಲೂ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವರ್ಷ ಮತ್ತೆ ರೈತರ ಆತ್ಮಹತ್ಯೆಗಳು ಪ್ರಾರಂಭವಾಗಿದ್ದು, ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ. 5 ಲಕ್ಷ ರೂ. ಪರಿಹಾರ ಕೊಡಲು ಆರಂಭಿಸಿದ ಬಳಿಕ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ ಎಂಬ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಖಂಡನೀಯ. ಜೆಡಿಎಸ್-ಬಿಜೆಪಿ ಮೈತ್ರಿ ಸ್ವಾಗತಾರ್ಹ.
-ಬಿ.ಸಿ.ಪಾಟೀಲ್, ಮಾಜಿ ಸಚಿವ