ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊನೆಗೂ ಕಾಂಗ್ರೆಸ್ ಪಕ್ಷ ದೆಹಲಿ ಲೋಕಸಭಾ ಕ್ಷೇತ್ರಕ್ಕೆ ಆರು ಮಂದಿ ಅಭ್ಯರ್ಥಿಗಳ ಹೆಸರನ್ನು ಸೋಮವಾರ ಪ್ರಕಟಿಸಿದ್ದು, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರು ದೆಹಲಿ ಈಶಾನ್ಯದಿಂದ ಸ್ಪರ್ಧಿಸಲಿದ್ದಾರೆ.
ಶೀಲಾ ದೀಕ್ಷಿತ್ ಅವರ ವಿರುದ್ಧ ಭಾರತೀಯ ಜನತಾ ಪಕ್ಷದ ಮನೋಜ್ ತಿವಾರಿ ಹಾಗೂ ಆಮ್ ಆದ್ಮಿ ಪಕ್ಷದ ದಿಲೀಪ್ ಪಾಂಡೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಜಯ್ ಮಕೇನ್ ನವದೆಹಲಿ ಲೋಕಸಭಾ ಅಖಾಡದಿಂದ ಕಣಕ್ಕಿಳಿಯಲಿದ್ದಾರೆ. ಮಕೇನ್ ವಿರುದ್ಧ ಆಪ್ ನ ಬ್ರಿಜಶ್ ಗೋಯಲ್ ಸ್ಪರ್ಧಿಸಲಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಶೀಲಾ ದೀಕ್ಷಿತ್ ಸ್ಪರ್ಧಿಸಲಿಲ್ಲವಾಗಿತ್ತು. ಆ ಸಂದರ್ಭದಲ್ಲಿ ದೀಕ್ಷಿತ್ ಅವರು ಕೇರಳದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. 2014ರಲ್ಲಿ ಕಾಂಗ್ರೆಸ್ ಪಕ್ಷ 7 ಲೋಕಸಭಾ ಕ್ಷೇತ್ರಗಳಲ್ಲಿಯೂ ಸೋಲನ್ನನುಭವಿಸಿತ್ತು.
ಚಾಂದಿನಿ ಚೌಕ್ ಲೋಕಸಭಾ ಕ್ಷೇತ್ರದಿಂದ ಜೆಪಿ ಅಗರ್ವಾಲ್, ಪೂರ್ವ ದೆಹಲಿಯಿಂದ ಅರವಿಂದ್ ಸಿಂಗ್ ಲವ್ಲಿ, ದೆಹಲಿ ವಾಯುವ್ಯ ಲೋಕಸಭಾ ಕ್ಷೇತ್ರದಿಂದ ರಾಜೇಶ್ ಲಿಲೋಥಿಯಾ, ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರಿಂದ ಮಹಾಬಲ್ ಮಿಶ್ರಾ ಅಖಾಡಕ್ಕಿಳಿಯಲಿದ್ದು, ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರಕ್ಕೆ ಈವರೆಗೂ ಯಾವ ಅಭ್ಯರ್ಥಿಯ ಹೆಸರನ್ನೂ ಪ್ರಕಟಿಸಿಲ್ಲ ಎಂದು ವರದಿ ತಿಳಿಸಿದೆ.