Advertisement

ಬಾರ್‌ ಮಾಲಕರಿಗೆ ಸೇರಿದ ಕಟ್ಟಡದಲ್ಲಿ ಕಾಂಗ್ರೆಸ್‌ ಚುನಾವಣಾ ಕಚೇರಿ

10:56 AM Apr 05, 2019 | Team Udayavani |

ಮಂಗಳೂರು : ಮಂಗಳೂರಿನಲ್ಲಿ ಬಾರ್‌, ವೈನ್‌ಶಾಪ್‌ ವ್ಯವಹಾರ ನಡೆಸುತ್ತಿರುವ ವ್ಯಕ್ತಿಯೊಬ್ಬರಿಗೆ ಸೇರಿದ ಬೆಂದೂರ್‌ವೆಲ್‌ನ ಕಟ್ಟಡದಲ್ಲಿ ಕಾಂಗ್ರೆಸ್‌ ತನ್ನ ಚುನಾವಣಾ ಕಚೇರಿಯನ್ನು ಆರಂಭಿಸುವ ಮೂಲಕ ಮತ್ತೂಮ್ಮೆ ತನ್ನ ನೈಜ ಸಂಸ್ಕೃತಿಯನ್ನು ಜನರ ಮುಂದೆ ಪ್ರದರ್ಶಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಟೀಕಿಸಿದ್ದಾರೆ.

Advertisement

ನಗರದ ಬಂಟ್ಸ್‌ಹಾಸ್ಟೇಲ್‌ ಬಳಿಯ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬೆಂದೂರ್‌ವೆಲ್‌ನಲ್ಲಿ ವ್ಯಕ್ತಿಯೊಬ್ಬರು ಮದ್ಯ ಮಾರಾಟದ ಮಳಿಗೆಯನ್ನು ಹೊಂದಿದ್ದಾರೆ. ಅವರ ಕಟ್ಟಡಲ್ಲಿ ಚುನಾವಣಾ ಕಚೇರಿಯನ್ನು ತೆರೆಯುವ ಮೂಲಕ ಕಾಂಗ್ರೆಸ್‌ ಪಕ್ಷ ಸಾರ್ವಜನಿಕರಿಗೆ ಯಾವ ಸಂದೇಶ ನೀಡಲು ಹೊರಟಿದೆ ಎಂಬುದು ಸಾಬೀತಾಗಿದೆ. ನಮ್ಮ ಸಂಸ್ಕೃತಿ, ಪರಂಪರೆ, ಅಭಿವೃದ್ಧಿಯ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಚುನಾವಣಾ ಸಂದರ್ಭದಲ್ಲಿಯೇ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಶೋಭೆಯುಂಟು ಮಾಡುವ ವಿಚಾರವಲ್ಲ ಎಂದವರು ಹೇಳಿದರು.

ಕಟ್ಟಡಕ್ಕೆ ಕಂಪ್ಲೀಶನ್‌ ಸರ್ಟಿಫಿಕೇಟ್‌ ಇಲ್ಲ
ಕಾಂಗ್ರೆಸ್‌ ಚುನಾವಣಾ ಕಚೇರಿ ತೆರೆದಿರುವ ಕಟ್ಟಡಕ್ಕೆ ಮಂಗಳೂರು ಮಹಾನಗರ ಪಾಲಿಕೆಯಿಂದ ಕಂಪ್ಲೀಶನ್‌ ಸರ್ಟಿಫಿಕೇಟನ್ನು ಇನ್ನೂ
ನೀಡಿಲ್ಲ. ಕಂಪ್ಲೀಶನ್‌ ಸರ್ಟಿಫಿಕೇಟ್‌ ನೀಡದ ಕಟ್ಟಡದಲ್ಲಿ ಯಾವುದೇ ಚಟುವಟಿಕೆಗಳನ್ನು ಅಧಿಕೃತವಾಗಿ ಮಾಡುವಂತಿಲ್ಲ. ಆದರೂ ಕಾಂಗ್ರೆಸ್‌ ತನ್ನ ಚುನಾವಣಾ ಕಚೇರಿಯನ್ನು ಈ ಕಟ್ಟಡದಲ್ಲಿ ಆರಂಭಿಸಿ ಕಾನೂನು ಉಲ್ಲಂಘಿಸಿದೆ. ಇದು ಕಾನೂನುಬಾಹಿರ ಹಾಗೂ ಅಕ್ರಮವಾಗಿದೆ ಎಂದು ಆರೋಪಿಸಿದ ಅವರು, ಚುನಾವಣಾ ಸಂದರ್ಭದಲ್ಲಿಯೇ ಈ ರೀತಿಯ ಚಟುವಟಿಕೆ ಮಾಡುವ ಕಾಂಗ್ರೆಸ್‌ಗೆ ಮತ್ತೆ ಅಧಿಕಾರ ಕೊಟ್ಟರೆ ಯಾವ ರೀತಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು, ಅಕ್ರಮ ಚಟುವಟಿಕೆ ಮಾಡಬಹುದು ಎಂಬುವುದನ್ನು ನಾಗರಿಕರು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರಿದ್ದಾರೆ. ಕಾಂಗ್ರೆಸ್‌ನ ಇಂತಹ ಅಕ್ರಮಗಳನ್ನು ಜನರೇ ನಿಯಂತ್ರಿಸಲಿದ್ದಾರೆ ಎಂದವರು ಹೇಳಿದರು.

ನಳಿನ್‌ ಸಾಧನೆ ರಾಹುಲ್‌ಗಿಂತ ಮೇಲು:
ಕಾಂಗ್ರೆಸ್‌ ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವ ರಾಹುಲ್‌ ಗಾಂಧಿಗಿಂತ ನಳಿನ್‌ ಕುಮಾರ್‌ ಕಟೀಲು ಅವರ ಸಾಧನೆ ಸಾವಿರ ಪಾಲು ಮೇಲು. ಅಭಿವೃದ್ಧಿಯಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿರುವ ಅಮೇಠಿ ಕ್ಷೇತ್ರವನ್ನು ನೋಡಿದರೆ ರಾಹುಲ್‌ ಯಾವ ರೀತಿ ಕೆಲಸ ಮಾಡಿದ್ದಾರೆ ಎಂದು ತಿಳಿಯುತ್ತದೆ. ಅಮೇಠಿ ಕ್ಷೇತ್ರದ ಪರಿಸ್ಥಿತಿ ಹೇಗಿದೆ ಎಂದರೆ ಅಲ್ಲಿ
ಜನರಿಗೆ ಮೂಲ ಸೌಕರ್ಯಗಳಿಲ್ಲ. ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿದೆ.

ಸಂಸದನಾಗಿ 350ನೇ
ಸ್ಥಾನ ಪಡೆದಿರುವ ಅವರು ತಮ್ಮ ಕ್ಷೇತ್ರಕ್ಕೆ ತಂದಿರುವುದು ಕೇವಲ 350 ಕೋಟಿ ರೂ ಅನುದಾನ ಎಂದು ದಾಖಲೆ ತಿಳಿಸುತ್ತದೆ. ಲೋಕಸಭೆಯಲ್ಲಿ ರಾಹುಲ್‌ ಹಾಜರಾತಿ ಶೇ. 52, ಚರ್ಚೆಯಲ್ಲಿ ಭಾಗವಹಿಸಿರುವುದು 14, ಪ್ರಶ್ನೆ ಕೇಳಿರುವುದು ಶೂನ್ಯ. ಲೋಕಸಭೆಯಲ್ಲಿ ನಳಿನ್‌ ಕುಮಾರ್‌ ಕಟೀಲು ಅವರ ಹಾಜರಾತಿ ಶೇ.92. ಅವರು 45 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. 687 ಪ್ರಶ್ನೆಗಳನ್ನು ಕೇಳಿದ್ದಾರೆ.

Advertisement

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ 16,520 ಕೋ.ರೂ. ಅನುದಾನವನ್ನು ತಂದು ದೇಶದ ಗಮನ ಸೆಳೆದಿದ್ದಾರೆ.

ಇವೆಲ್ಲ ದಾಖಲೆಯಲ್ಲಿದ್ದು ನಳಿನ್‌ ಓರ್ವ ಕ್ರಿಯಾಶೀಲ ಸಂಸದ ಎಂಬುದಕ್ಕೆ ನಿದರ್ಶನವಾಗಿದೆ ಎಂದವರು ತಿಳಿಸಿದರು.

ಕಾಂಗ್ರೆಸ್‌ ಸೋಲು ಒಪ್ಪಿಕೊಂಡಿದೆ
ಮನೆ ಮನೆ ಭೇಟಿ ಕಾರ್ಯಕ್ರಮದ ವೇಳೆ ಬಿಜೆಪಿ 6 ತಿಂಗಳ ಹಿಂದೆ ಮನೆ ಬಾಗಿಲಿಗೆ ಹಾಕಿದ್ದ ನಮೋ ಮನೆ-ನಮ್ಮ ಮನೆ ಸ್ಟಿಕ್ಕರ್‌ಗಳನ್ನು ಕಾಂಗ್ರೆಸ್‌ ದೂರು ನೀಡಿ ತೆಗೆಸುವ ಕೆಲಸ ಮಾಡುತ್ತಿದ್ದು ಇದು ಹತಾಶೆಯ ಪರಮಾವಧಿ. ವಾಹನಗಳಲ್ಲಿ ಅಳವಡಿಸಿರುವ ಮೈಭೀ ಚೌಕಿದಾರ್‌ ಸ್ಟಿಕ್ಕರನ್ನು ಕೂಡ ದೂರು ನೀಡಿ ತೆಗೆಸುವ ಕೆಲಸ ಮಾಡುತ್ತಿದ್ದು, ಇದು ಕಾಂಗ್ರೆಸ್‌ ಸೋಲೊಪ್ಪಿಕೊಂಡಿರುವುದನ್ನು ಸೂಚಿಸುತ್ತದೆ. ಒಂದು ವೇಳೆ ಸ್ಟಿಕ್ಕರ್‌
ತೆಗೆಸಿದರೆ ಹಾಕುವವರ ಸಂಖ್ಯೆ ಹೆಚ್ಚಾಗಬಹುದು ಎಂದರು.

ಮುಖಂಡರಾದ ಕಿಶೋರ್‌ ರೈ, ಪ್ರೇಮಾನಂದ ಶೆಟ್ಟಿ, ನಿತಿನ್‌ ಕುಮಾರ್‌, ಭಾಸ್ಕರ ಚಂದ್ರ ಶೆಟ್ಟಿ, ವಸಂತ ಪೂಜಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next