ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜಿಲಿಸ್-ಇ- ಇತ್ತೆಹಾ ದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಮಧುಗೌಡ್ ಯಾಷ್ಕಿ ನವದೆಹಲಿಯಲ್ಲಿ ಭಾನುವಾರ ಮಾತನಾಡಿ, ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.
ಮತಗಳು ವಿಭಜನೆಗೊಳ್ಳದೇ ಇರಲು ಎಐಎಂಐಎಂ ನಾಯಕರ ಜತೆ ಕಾಂಗ್ರೆಸ್ ಮಾತುಕತೆ ನಡೆಸಿದೆ ಎಂಬ ವರದಿಗಳೂ ಸುಳ್ಳು ಎಂದಿದ್ದಾರೆ ಯಾಷ್ಕಿ. ಕಾಂಗ್ರೆಸ್‌ಗೆ ಬರುವ ಮತಗಳನ್ನು ತಪ್ಪಿಸಲಿಕ್ಕಾಗಿಯೇ ಬಿಜೆಪಿ ಎಐಎಂಐಎಂ ಜತೆ ರಹಸ್ಯ ಮಾತುಕತೆ ನಡೆಸಿದೆ ಎಂದು ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆ ಉಸ್ತುವಾರಿ ಹೊತ್ತಿರುವ ಯಾಷ್ಕಿ ಹೇಳಿದ್ದಾರೆ. ಈ ನಡುವೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾಂಗ್ರೆಸ್ ನಾಯಕರೊಬ್ಬರು ಮಾತನಾಡಿ, ಅಲ್ಪಸಂಖ್ಯಾತರ ಮತಗಳು ಪಕ್ಷದ ಕೈತಪ್ಪದಂತೆ ವ್ಯೂಹಾತ್ಮಕ ಮಾತುಕತೆಗಳು ನಡೆದಿವೆ. ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ನ ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.
ಮುಸ್ಲಿಂ, ಒಬಿಸಿ ಮತ್ತು ಎಸ್‌ಸಿ ಸಮುದಾಯದ ಮತಗಳು ಕಾಂಗ್ರೆಸ್ ಪರವಾಗಿ ಇರುವಂತೆ ಅವರು ಬಹಳಷ್ಟು ಕೆಲಸ ಮಾಡಿದ್ದಾರೆ ಎಂದಿದ್ದಾರೆ.
ಪಿಎಂ ಮೋದಿಗೆ ರಾಹುಲ್ ಸಾಟಿ: ಬಿಜೆಪಿ ನಾಯಕ, ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೇ ಸಾಟಿ ಎಂದಿದ್ದಾರೆ ಪಕ್ಷದ ವಕ್ತಾರ ರಣದೀಪ್ ಸುಜೇìವಾಲಾ. ಕರ್ನಾಟಕ ಸೇರಿ ಚುನಾವಣೆ ನಡೆಯಲಿರುವ ಎಲ್ಲಾ ರಾಜ್ಯಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.