Advertisement

ಇಂದಿರಾ ನೆನೆಯಲು ಕಾಂಗ್ರೆಸ್‌ಗೆ ನೈತಿಕತೆಯಿಲ್ಲ

11:20 AM Jul 23, 2017 | |

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರು ಹೇಳಲು ಕಾಂಗ್ರೆಸ್‌ಗೆ ನೈತಿಕತೆಯಿಲ್ಲ ಎಂದು ದಲಿತ ನಾಯಕ ಲೋಲಾಕ್ಷ ಅಭಿಪ್ರಾಯಪಟ್ಟಿದ್ದಾರೆ. ಅಂಬೇಡ್ಕರ್‌ ಅವರ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ “ರಾಜಕೀಯ ಅಧಿಕಾರ ಮತ್ತು ಸಾಮಾಜಿಕ ನ್ಯಾಯ’ ವಿಷಯದ ಮೇಲೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್‌ನವರು ಇಂದಿರಾ ಗಾಂಧಿ ಸಿದ್ದಾಂತದಿಂದ ಬಹಳ ದೂರ ಬಂದಿದ್ದಾರೆ. ಹಳೆ ಕಾಂಗ್ರೆಸ್ಸಿಗರು ಈಗಿನ ನಾಯಕರನ್ನು ಆತಂಕದಿಂದ ನೋಡುತ್ತಿದ್ದಾರೆ ಎಂದು ಹೇಳಿದರು.

Advertisement

ಜಾತಿವಾದಿಯಾಗಿದ್ದ ಗಾಂಧಿ: ದೇಶದಲ್ಲಿ ಮೋದಿಯಂತಹ ವ್ಯಕ್ತಿಗಳು ಬೆಳೆಯಲು ಕಾಂಗ್ರೆಸ್‌ ಮನಸ್ಥಿತಿ ಕಾರಣ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಕಾಂಗ್ರೆಸ್‌ ಸಂವಿಧಾನವನ್ನು ಜಾರಿಗೆ ತರುವ ಪ್ರಯತ್ನ ಮಾಡಲಿಲ್ಲ. ಬಂಡವಾಳ ಶಾಹಿ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಬಂದಿತು. ಅಲ್ಲದೇ, 1985 ರ ವರೆಗೂ ಕಾಂಗ್ರೆಸ್‌ ಅಂಬೇಡ್ಕರ್‌ ಅವರ ಪುಸ್ತಕಗಳು ಹೊರಗೆ ಬರದಂತೆ ನೋಡಿಕೊಂಡಿದೆ.

ಕಾಂಗ್ರೆಸ್‌ ಅಂಬೇಡ್ಕರ್‌ ಅವರನ್ನು ಶೋಷಿಸಿದೆ. ಅಂಬೇಡ್ಕರ್‌ ಯಾವಾಗಲೂ ಮೀಸಲಾತಿ ಪ್ರತಿಪಾದಕರಾಗಿರಲಿಲ್ಲ. ಮಹಾತ್ಮಾ ಗಾಂಧಿ ಹಾಗೂ ಅಂಬೇಡ್ಕರ್‌ ಸಿದ್ದಾಂತ ಯಾವಾಗಲೂ ಹೋಲಿಕೆಯಾಗುವುದಿಲ್ಲ. ದಲಿತರಿಗೆ ವಿಶೇಷ ಮತದಾನದ ಹಕ್ಕು ನೀಡಬೇಕೆಂದು ಅಂಬೇಡ್ಕರ್‌ ಸೈಮನ್‌ ಕಮಿಷನ್‌ ಮುಂದೆ ವಾದ ಮಾಡಿದಾಗ ಮಹಾತ್ಮಾ ಗಾಂಧಿ ಅದರ ವಿರುದ್ಧ ಉಪವಾಸ ಮಾಡಿ, ಅದನ್ನು ತಡೆದರು.ಮಹಾತ್ಮಾ ಗಾಂಧಿ ಜಾತಿವಾದಿಯಾಗಿದ್ದರು ಎಂದರು. 

ಪರಮೇಶ್ವರ ದಲಿತರ ಪರ ಹೇಗೆ ಹೋರಾಡ್ತಾರೆ?: ಅಂಬೇಡ್ಕರ್‌ ಸಾಮಾಜಿಕ ನ್ಯಾಯಕ್ಕಾಗಿ ದಲಿತರನ್ನೂ ಅಲ್ಪ ಸಂಖ್ಯಾರಂತೆ ಪರಿಗಣಿಸಿ ಎಂದು ವಾದಿಸಿದರು. ಆದರೆ, ಗಾಂಧಿಜಿ ಅದನ್ನು ವಿರೋಧಿಸಿದರು. ಸಾಮಾನ್ಯ ವರ್ಗದ ಕ್ಷೇತ್ರದಲ್ಲಿ ದಲಿತ ವ್ಯಕ್ತಿ ಮಲ್ಲಿಕಾರ್ಜುನ ಖರ್ಗೆ ನಿಂತು ಗೆಲ್ಲುವಂತಹ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ ಎಂದರೆ, ಎಪ್ಪತ್ತು ವರ್ಷಗಳಾದರೂ ನಮ್ಮ ಸಮಾಜ ಅಷ್ಟೊಂದು ಕೊಳಕಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರಂತಹ ಕೋಟ್ಯಾಧಿಪತಿಗಳು ದಲಿತರ ಪರವಾಗಿ ಯಾವ ರೀತಿಯ ಹೋರಾಟ ಮಾಡುತ್ತಾರೆ ಎಂದು ಪ್ರಶ್ನಿಸಿದರು. 

ಅಂಬೇಡ್ಕರ್‌ರನ್ನು ಈಗ ನೆನೆಯುತ್ತಿರುವುದೇಕೆ?: ಕಾಂಗ್ರೆಸ್‌ ಸ್ವಾತಂತ್ರ್ಯ ಪೂರ್ವದಲ್ಲಿ ಅಂಬೇಡ್ಕರ್‌ನ್ನು ದೂರ ಇಟ್ಟಿದ್ದು, ಈಗ ಏಕಾ ಏಕಿ ನೆನಪಿಸಿಕೊಂಡಿರುವುದು ಯಾವ ಉದ್ದೇಶಕ್ಕೆ ಎಂದು ತಿಳಿಯುತ್ತಿಲ್ಲ. ಇದುವರೆಗೂ ತಾನು ಮಾಡಿರುವ ತಪ್ಪಿಗೆ ಪಶ್ಚಾತಾಪ ಪಟ್ಟುಕೊಳ್ಳಲು ಈ ಕಾರ್ಯಕ್ರಮ ಮಾಡುತ್ತಿದೆಯೋ ಅಥವಾ ಚುನಾವಣೆಯ ದೃಷ್ಠಿಯಿಂದ ಅಂಬೇಡ್ಕರ್‌ ಜಪ ಮಾಡುತ್ತಿದೆಯೋ ಗೊತ್ತಿಲ್ಲ. ಆದರೆ, ಅಂಬೇಡ್ಕರ್‌ಗೆ ಕಾಂಗ್ರೆಸ್‌ನಿಂದಲೇ ಹೆಚ್ಚಿನ ಅನ್ಯಾಯವಾಗಿದೆ. ದೇಶದಲ್ಲಿ ಸಮಾಜಿಕ ನ್ಯಾಯಕ್ಕಾಗಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕಿದೆ ಎಂದು ವಾದಿಸಿದರು. 

Advertisement

ಅವರ ವಾದ ಮಂಡನೆ ನಂತರ  ಕೆಲವರು ಆಕ್ಷೇಪ ವ್ಯಕ್ತಪಿಡಿಸಿ, ಕಾಂಗ್ರೆಸ್‌ ಪಕ್ಷದ ಬಗ್ಗೆ ನೇರವಾಗಿ ಆರೋಪ ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ಬಿ.ಎಲ್‌. ಶಂಕರ್‌ ಸಭಿಕರನ್ನು ಸಮಾಧಾನ ಪಡಿಸಿದರು. ಅಲ್ಲದೇ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಕಾಂಗ್ರೆಸ್‌ ಪಕ್ಷ ಸಿದ್ದಾಂತದ ಗೊಂದಲದಲ್ಲಿದೆ. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್‌ ಎಡ ಪಂಥವನ್ನು ಅಳವಡಿಸಿಕೊಂಡಿತ್ತು, ಪಿ.ವಿ. ನರಸಿಂಹರಾವ್‌ ಅವರ ಅವಧಿಯಲ್ಲಿ ಬಲ ಪಂಥವನ್ನು ಅಳವಡಿಸಿಕೊಂಡಿತ್ತು. ಈಗಿನ ಕಾಂಗ್ರೆಸ್‌ ಎರಡರಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎಂಬ ಗೊಂದಲದಲ್ಲಿದೆ ಎಂದು ಹೇಳಿದರು. 

ಮೀಸಲಾತಿಯ ಬಗ್ಗೆ ನಮ್ಮ ದೇಶದಲ್ಲಿ ಸಾಕಷ್ಟು ಗೊಂದಲಗಳಿವೆ. ಮೀಸಲಾತಿಗೆ ಯಾರು ಅರ್ಹರು, ಯಾರು ಅನರ್ಹರು ಎನ್ನುವುದೇ ಇನ್ನೂ ಗೊಂದಲವಾಗಿದೆ. ಮೀಸಲಾತಿಯನ್ನು ಗುರುತಿಸುವಿಕೆ ಮತ್ತು ಪುನರ್‌ ವಿಂಗಡಿಸುವ ಕಾರ್ಯ ನಡೆಯಬೇಕಿದೆ. ದೇಶದ ಅರ್ಧದಷ್ಟು ಇರುವ ಮಹಿಳೆಯರನ್ನು ಹೊರತು ಪಡಿಸಿ ಮೀಸಲಾತಿ ಸರಿಪಡಿಸಲು ಸಾಧ್ಯವಿಲ್ಲ. ಅತಿ ಹೆಚ್ಚು ಶೋಷಣೆಗೊಳಗಾದವರು ಮಹಿಳೆಯವರು. ಮಹಿಳೆಯರಿಗೆ ಪಂಚಾಯತಿಯಿಂದ ಸಂಸತ್ತಿನವರೆಗೂ ಸಮಾನ ಅವಕಾಶ ದೊರೆತಾಗ ಸಮ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next