Advertisement

ರಾಜ್ಯದಲ್ಲಿನ್ನು ಕಾಂಗ್ರೆಸ್ಸಿಗಿಲ್ಲ ಅಧಿಕಾರ: ಬಿಎಸ್‌ವೈ

03:45 AM Jul 14, 2017 | |

ಉಡುಪಿ: ರಾಜ್ಯ ಸರಕಾರ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದು, ಕಾಂಗ್ರೆಸ್‌ ಅಧಿಕಾರಕ್ಕೇರಿದ 4 ವರ್ಷಗಳಲ್ಲಿ 24 ಹಿಂದೂಗಳ ಹತ್ಯೆಯಾಗಿದೆ. ಆದರೂ ಯಾರೊಬ್ಬರನ್ನು ಬಂಧಿಸಿಲ್ಲ. ಜನ ಇದನ್ನು ಗಮನಿಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ನ್ನು ಕಿತ್ತೂಗೆದು ಬಿಜೆಪಿಯನ್ನು ಅಧಿಕಾರಕ್ಕೇರಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಉಡುಪಿಯ ಬಸ್‌ ನಿಲ್ದಾಣ ಬಳಿ ಶರತ್‌ ಮಡಿವಾಳ ಹತ್ಯೆ, ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯ ಖಂಡಿಸಿ ನಡೆದ ಬೃಹತ್‌ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.

ಪೊಲೀಸರನ್ನು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲು ಬಿಡುತ್ತಿಲ್ಲ. ಕೋಮು ಗಲಭೆಗೆ ವ್ಯವಸ್ಥಿತ
ವಾದ ಪಿತೂರಿಯನ್ನು ಸರಕಾರವೇ ರೂಪಿಸುತ್ತಿದೆ. ಕೇರಳದ ವೇಣುಗೋಪಾಲ್‌ ರಾಜ್ಯಕ್ಕೆ ಕಾಂಗ್ರೆಸ್‌ ಉಸ್ತುವಾರಿ ಆಗಿ ಬಂದ ಬಳಿಕ ದ.ಕ. ಜಿಲ್ಲೆಯಲ್ಲಿ ಗಲಭೆ ಪ್ರಕರಣ ಹೆಚ್ಚುತ್ತಿದ್ದು, ಆದರೆ ಇದು ಕೇರಳ ಅಲ್ಲ. ಕರ್ನಾಟಕ ಎನ್ನುವುದು ಅವರಿಗೆ ನೆನಪಿರಲಿ ಎಂದು ಎಚ್ಚರಿಸಿದರು.

ಕಾಂಗ್ರೆಸ್‌ಗೆ ಮಾತ್ರ ಎಸ್‌ಪಿ ಯಾ?
ಸಿಎಂ ಸಿದ್ದರಾಮಯ್ಯ ಅವರ ಹೃದಯ ಹಾಗೂ ತಲೆಗೆ ಸಂಪರ್ಕವೇ ಇಲ್ಲ. ಇದ್ದಿದ್ದರೆ ಶರತ್‌ ಸಾವನ್ನು ಘೋಷಿಸದೆ, ಅದನ್ನು ಮುಚ್ಚಿಟ್ಟು ಕಾಂಗ್ರೆಸ್‌ ಸಮಾವೇಶ ಮಾಡುತ್ತಿರಲಿಲ್ಲ. ಬಿಜೆಪಿ ಬೈಕ್‌ ರ್ಯಾಲಿಗೆ ಜಿಲ್ಲಾ ಪೊಲೀಸ್‌ ಇಲಾಖೆ ಅನುಮತಿಯಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ಗೊಂದು ನೀತಿ. ಬಿಜೆಪಿಗೊಂದು ನೀತಿ ಇದೆ. ಉಡುಪಿಗೆ ಬಂದೂ ಇಷ್ಟು ದಿನವಾದರೂ ಇನ್ನೂ ಎಸ್‌ಪಿ ಮುಖದರ್ಶನವಾಗಿಲ್ಲ. ಅವರು ಕಾಂಗ್ರೆಸ್‌ಗೆ ಮಾತ್ರ ಎಸ್‌ಪಿ ಯಾ ? ಅಥವಾ ಜಿಲ್ಲೆಗೆ ಎಸ್‌ಪಿಯಾಗಿದ್ದಾರಾ? ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಪೊಲೀಸ್‌ ಇಲಾಖೆಗೆ ಸ್ವಾತಂತ್ರ್ಯವಿಲ್ಲ. ಗೃಹಖಾತೆ ನಿಷ್ಕ್ರಿಯವಾಗಿದೆ. ಕಾಂಗ್ರೆಸ್‌ ಸರಕಾರ ಕರಾವಳಿಯನ್ನು ಕಾಶ್ಮೀರ ಮಾಡಿದ್ದು, ಅಲ್ಲಿ ಸೈನಿಕರ ಮೇಲೆ ಕಲ್ಲೆಸೆ ದಂತೆ ಇಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗ ಳಾಗುತ್ತಿವೆ ಎಂದು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.

Advertisement

ಶಾಸಕ ಸುನಿಲ್‌ ಕುಮಾರ್‌ ಮಾತನಾಡಿ, ರಾಜ್ಯ ದಲ್ಲಿ ಹಿಂದೂ ಸಮಾಜಕ್ಕೆ ರಕ್ಷಣೆಯಿಲ್ಲ ಎಂದರು.

ರೌಡಿಗಳ ಪೋಷಣೆ
ಮಾಜಿ ಶಾಸಕ ರಘುಪತಿ ಭಟ್‌ ಮಾತನಾಡಿ, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ರೌಡಿಗಳನ್ನು ಪೋಷಣೆಯನ್ನು ಕಾಂಗ್ರೆಸ್‌ ಸರಕಾರ ಮಾಡುತ್ತಿದೆ. ಮರಳು ಮಾಫಿಯಾದಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದೂ ಮುಖಂಡರು, ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿರುವ ಕಾಂಗ್ರೆಸ್‌ ಸರಕಾರ ಕೋಮು ಸಂಘರ್ಷಕ್ಕೆ ವ್ಯವಸ್ಥಿತ ಪಿತೂರಿ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು. 

ಮಾಜಿ ಶಾಸಕರಾದ ಲಾಲಾಜಿ ಆರ್‌. ಮೆಂಡನ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕೆ. ಉದಯಕುಮಾರ್‌ ಶೆಟ್ಟಿ, ಬಿ.ಎಂ. ಸುಕುಮಾರ ಶೆಟ್ಟಿ, ಶ್ಯಾಮಲಾ ಕುಂದರ್‌ ಮತ್ತಿರರು ಉಪಸ್ಥಿತರಿದ್ದರು.

ಜಿಲ್ಲಾ ಪ್ರ. ಕಾರ್ಯದರ್ಶಿಗಳಾದ ಯಶ್‌ಪಾಲ್‌ ಸುವರ್ಣ ಸ್ವಾಗತಿಸಿದರು. ಕುಯಿಲಾಡಿ ಸುರೇಶ್‌ ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು. ಪ್ರತಾಪ್‌ ಹೆಗ್ಡೆ ಅವರು ವಂದಿಸಿದರು.

“ಸಾಮಾನ್ಯ ಕಾರ್ಯಕರ್ತರೇ ಸಾಕು’
ಸಚಿವರಾದ ರಮಾನಾಥ ರೈ ಹಾಗೂ ಯು.ಟಿ. ಖಾದರ್‌ ಅವರನ್ನು ಸೋಲಿಸಲು ಶೋಭಾ ಕರಂದ್ಲಾಜೆ ಹಾಗೂ ಸದಾನಂದ ಗೌಡ ಅವರೇ ಬರಬೇಕು ಅಂತಿಲ್ಲ. ಅವರ ವಿರುದ್ಧ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಲು ಬಂಟ್ವಾಳ, ಉಳ್ಳಾಲದ ಜನ ಸಜ್ಜಾಗಿದ್ದಾರೆ ಎಂದು ಬಿಎಸ್‌ವೈ ಹೇಳಿದರು. 

ತಾಕತ್ತಿದ್ದರೆ ಭಟ್‌,
ನನ್ನನ್ನು ಬಂಧಿಸಲಿ’

ನಿಷ್ಪಕ್ಷಪಾತ ತನಿಖೆಗೆ ರಾಷ್ಟ್ರೀಯ ತನಿಖಾ ದಳದ ಕಚೇರಿಯನ್ನು ಮಂಗಳೂರಿನಲ್ಲಿ ತೆರೆಯಬೇಕು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರು, ಶರತ್‌ ಶವಯಾತ್ರೆಯಲ್ಲಿ ಭಾಗಿಯಾದವರ ವಿರುದ್ಧ ಕೇಸು ದಾಖಲಿಸುವ ಸರಕಾರ, ಆರ್‌ಎಸ್‌ಎಸ್‌ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರನ್ನು ಬಂಧಿಸಲು ಸಚಿವ ರೈ ಎಸ್‌ಪಿ ಅವರಲ್ಲಿ ಹೇಳುತ್ತಾರೆ. ಈ ಸರಕಾರಕ್ಕೆ ತಾಕತ್ತಿದ್ದರೆ ಭಟ್‌ ಹಾಗೂ ನನ್ನನ್ನು ಬಂಧಿಸಲಿ ನೋಡೋಣ ಎಂದು ಶೋಭಾ ಕರಂದ್ಲಾಜೆ ಸವಾಲೆಸೆದರು.

ಉಡುಪಿ: ಬೃಹತ್‌ ಪ್ರತಿಭಟನ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್‌. ಯಡಿಯೂರಪ್ಪ  ಅವರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next