ಬೆಂಗಳೂರು: ರಾಜ್ಯದಲ್ಲಿ ಜನರನ್ನು ನೆಮ್ಮದಿಯಿಂದ ಬದುಕಲು ಬಿಡದ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ಪಕ್ಷದ ಹೋರಾಟ ನಿಲ್ಲದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದಲ್ಲಿ ನಡೆಯುತ್ತಿರುವ ಬೆಂಗಳೂರು ಉಳಿಸಿ ಪಾದಯಾತ್ರೆಯಲ್ಲಿ ಗುರುವಾರ ಮಲ್ಲೇಶ್ವರ ಮತ್ತು ಹೆಬ್ಟಾಳ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಶಾಂತಿಯ ರಾಜಧಾನಿಯಾಗಿದ್ದ ಬೆಂಗಳೂರಿನಲ್ಲೀಗ ರಾತ್ರಿಯಾಗುತ್ತಿದ್ದಂತೆ ಓಡಾಡಲು ಭೀತಿಯ ವಾತಾವರಣ ನಿರ್ಮಾಣವಾಗಿದೆ ಹೀಗಾಗಿ ಕಾಂಗ್ರೆಸ್ ಆದಷ್ಟು ಬೇಗ ತೊಲಗಬೇಕಿದೆ. ಲೋಕಾಯುಕ್ತಕ್ಕೆ ರಕ್ಷಣೆ ಇಲ್ಲದಿರುವಾಗ ಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದ ಅವರು, ಅಧಿಕಾರ ನಡೆಸುವ ವ್ಯಕ್ತಿಗಳು ತಮ್ಮ ಅಧಿಕಾರ ಇರುವುದು ಜನರ ರಕ್ಷಣೆಗಾಗಿ ಎಂದು ಭಾವಿಸಿ ಕೆಲಸ ಮಾಡಿದರೆ ಇಂತಹ ಅನಾಹುತ ನಡೆಯಲು ಸಾಧ್ಯವಿಲ್ಲ ಎಂದರು.
ಆದಿತ್ಯನಾಥ್‌ರಂಥ ಸರ್ಕಾರ ಬೇಕು: ದೇಶದಲ್ಲೇ ಗೂಂಡಾ ರಾಜ್ಯ ಎಂದು ಕರೆಸಿಕೊಳ್ಳುತ್ತಿದ್ದ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಮೇಲೆ ಸಾವಿರಕ್ಕೂ ಹೆಚ್ಚು ಗೂಂಡಾಗಳನ್ನು ಹತ್ತಿಕ್ಕಿ ಗೂಂಡಾ ರಾಜ್ಯಕ್ಕೆ ಅಂತ್ಯ ಹಾಡಿದ್ದಾರೆ. ಆದರೆ, ಅಂತಹ ವ್ಯಕ್ತಿಯ ಬಗ್ಗೆಯೇ ಸಿಎಂ ಸಿದ್ದರಾಮಯ್ಯ ಟೀಕಿಸುವುದು ನಾಚಿಕೆಗೇಡು ಎಂದರು.
ಮಲ್ಲೇಶ್ವರದಲ್ಲಿ ನಡೆದ ಪಾದಯಾತ್ರೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿದರು. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಶಾಸಕರಾದ ಅರವಿಂದ ಲಿಂಬಾವಳಿ, ಡಾ.ಸಿ.ಎನ್.ಅಶ್ವತ್ಥನಾರಾಯಣ, ವೈ.ಎ.ನಾರಾಯಣಸ್ವಾಮಿ, ನಗರ ಜಿಲ್ಲೆ ಮತ್ತು ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಾದಯಾತ್ರೆ ವೇಳೆ ಕಾಂಗ್ರೆಸ್ ವಿರುದ್ಧ ಆರೋಪವಿರುವ ಕರಪತ್ರಗಳನ್ನು ವಿತರಿಸಲಾಯಿತು.
ಫೆ. 2ರಿಂದ ಬೆಂಗಳೂರು ಉಳಿಸಿ ಪಾದಯಾತ್ರೆ ಆರಂಭವಾದ ಮೇಲೆ ಮಾಜಿ ಡಿಸಿಎಂ ಆರ್.ಅಶೋಕ್ ತೂಕ ನಾಲ್ಕು ಕೆ.ಜಿ. ಕಡಿಮೆಯಾಗಿದೆಯಂತೆ. ನನ್ನ ತೂಕ ಹತ್ತು ಕೆ.ಜಿ.ಕಮ್ಮಿಯಾದರೂ ಪರವಾಗಿಲ್ಲ, ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ಹೋರಾಟ ಮುಂದುವರಿಸುತ್ತೇನೆ ಎಂದು ನನ್ನಲ್ಲಿ ಅಶೋಕ್ ಹೇಳಿದ್ದಾರೆ.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ