ರಾಯ್‌ಪುರ : ರಾಜಸ್ಥಾನ ಮತ್ತು ಮಧ್ಯ ಪ್ರದೇಶ ಮಾತ್ರವಲ್ಲದೆ ಈಗ ಛತ್ತೀಸ್‌ಗಢದಲ್ಲೂ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಕಾಂಗ್ರೆಸ್ ಹೈಕಮಾಂಡಿಗೆ ಕಗ್ಗಂಟಾಗಿ ಪರಿಣಮಿಸಿದೆ. ಹಾಗಾಗಿ ಇಂದು ಗುರುವಾರ ಸಂಜೆಯ ತನಕವೂ ಈ ಮೂರು ರಾಜ್ಯಗಳ ಮುಖ್ಯಮಂತ್ರಿಯ ಹೆಸರನ್ನು ಪ್ರಕಟಿಸಲು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಾಧ್ಯವಾಗಿಲ್ಲ ಎಂದು ವರದಿಗಳು ತಿಳಿಸಿವೆ.
ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೆ ಪಿಸಿಸಿ ಅಧ್ಯಕ್ಷ ಸಚಿನ್ ಪೈಲಟ್ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ನಡುವೆ ತೀವ್ರ ಪೈಪೋಟಿ ನಡೆದಿದೆ.
ವರದಿಗಳ ಪ್ರಕಾರ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ಅಶೋಕ್ ಗೆಹಲೋಟ್ ಗೆ ಸಿಎಂ ಪಟ್ಟ ನೀಡುವುದರ ಪರವಾಗಿ ಇದ್ದಾರೆ. ಆದರೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಒಲವು ಸಚಿನ್ ಪೈಲಟ್ ಮೇಲಿದೆ.
ಪೈಲಟ್ ಮತ್ತು ಗೆಹಲೋತ್ ಬೆಂಬಲಿಗರು ತಮ್ಮ ನಾಯಕರಿಗೆ ಸಿಎಂ ಪಟ್ಟ ನೀಡಬೇಕೆಂದು ಆಗ್ರಹಿಸಿ ಘೋಷಣೆ ಕೂಗಿ ಹೊಡೆದಾಡಿಕೊಂಡಿರುವುದು ವರದಿಯಾಗಿದೆ.
ಮಧ್ಯ ಪ್ರದೇಶದಲ್ಲೂ ಪರಿಸ್ಥಿತಿ ಹೀಗಿಯೇ ಇದೆ. ಇಲ್ಲಿ ಕಮಲ್ ನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ತೀವ್ರ ಪೈಪೋಟಿ ಇದೆ.
ಛತ್ತೀಸ್‌ಗಢದಲ್ಲಿ ಭೂಪೇಶ್ ಬಾಘೇಲ್ ಮತ್ತು ಟಿ ಎಸ್ ಸಹದೇವ್ ನಡುವೆ ತೀವ್ರ ಪೈಪೋಟಿ ಇದೆ. ಇಲ್ಲಿಯೂ ಈ ನಾಯಕರಿಬ್ಬರ ಬೆಂಬಲಿಗರು ತಮ್ಮ ನಾಯಕನಿಗೇ ಸಿಎಂ ಪಟ್ಟ ಸಿಗಬೇಕೆಂದು ಘೋಷಣೆ ಕೂಗಿ ಮಾಧ್ಯಮಗಳ ಮುಂದೆಯೇ ಹೊಡೆದಾಡಿ ಕೊಂಡಿರುವುದಾಗಿ ವರದಿಗಳು ತಿಳಿಸಿವೆ.