ಬೆಂಗಳೂರು: ಐತಿಹಾಸಿಕ ಪ್ರಮಾದಗಳನ್ನು ಸರಿಪಡಿಸುವ ಮೂಲಕ ಭಾರತ ಬದಲಾಗುತ್ತಿದ್ದು, ಪ್ರಧಾನಿ
ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ಭಾರತ ಬಲಿಷ್ಠವಾಗುತ್ತಿದೆ. ಇದನ್ನು ಸಹಿಸದ
ಕಾಂಗ್ರೆಸ್ ದೇಶದ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಜೆ.ಪಿ. ನಡ್ಡಾ ದೂರಿದರು.
ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆಯು ಎಚ್ ಎಸ್‌ಆರ್ ಲೇಔಟ್‌ನ ಆಕ್ಸ್‌ಫರ್ಡ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಸಂದರ್ಭದಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾಗಿದ್ದು ದೊಡ್ಡ ದುರಂತ. ಇದನ್ನು ಎಲ್ಲರೂ ಒಪ್ಪಿಕೊಳ್ಳಲಿದ್ದು, ಶತಮಾನದ ಲೋಪ ಎನ್ನಬಹುದು. ಈ ನಿರ್ಧಾರದಿಂದ ಲಕ್ಷಾಂತರ ಜನ ಸಂಕಷ್ಟಕ್ಕೆ ಸಿಲುಕಿದರು. ಪಾಕಿಸ್ತಾನ, ಬಾಂಗ್ಲಾದಲ್ಲಿ ಹಿಂದೂಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಪ್ರಧಾನಿ ಮೋದಿಯವರ ರಾಜಕೀಯ ಇಚ್ಛಾಶಕ್ತಿಯಿಂದಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು, ಪಾಕಿಸ್ತಾನ, ಬಾಂಗ್ಲಾದಲ್ಲಿನ ಅಲ್ಪ ಸಂಖ್ಯಾತ ಹಿಂದೂಗಳು ದೇಶದ ಪೌರತ್ವ ಪಡೆದು ಭಾರತದ ಪ್ರಜೆಗಳಾಗಲಿದ್ದಾರೆ ಎಂದು ಹೇಳಿದರು.
ಸಿಎಎ ಕಾಯ್ದೆ ವಿರೋಧಿಸುತ್ತಿದ್ದ ಕಾಂಗ್ರೆಸ್ ಇದೀಗ ರಾಗ ಬದಲಿಸಿದೆ. ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ಅವರು ಸಿಎಎ ಬಗ್ಗೆ ಆಕ್ಷೇಪವಿಲ್ಲ ಎಂದಿದ್ದಾರೆ. ಹಾಗಾದರೆ ಆರಂಭದಿಂದಲೂ ವಿರೋಧಿಸಿದ್ದು ಏಕೆ. ಇದು ಕಾಂಗ್ರೆಸ್‌ನ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಅಮೆರಿಕ ಅಧ್ಯಕ್ಷರು ಭಾರತ ಪ್ರವಾಸದಲ್ಲಿದ್ದ ಸಂದರ್ಭದಲ್ಲೇ ಗದ್ದಲ ಎಬ್ಬಿಸಿ ಜಾಗತಿಕ ಮಟ್ಟದಲ್ಲಿ ದೇಶದ ವರ್ಚಸ್ಸು ಕುಂದಿಸುವ ಪ್ರಯತ್ನ ನಡೆಯಿತು ಎಂದು ಪ್ರಶ್ನಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಅಲ್ಲಿನ ಜನ ಸಂತೋಷದಲ್ಲಿದ್ದು, ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಪ್ರತಿಪಕ್ಷಗಳು, ಮಾಧ್ಯಮಗಳು ಏನೇ ಹೇಳಿದರೂ ತಳ ಮಟ್ಟದಲ್ಲಿ ನೋಡಿದರೆ ಜನ ಸಂತುಷ್ಟರಾಗಿದ್ದಾರೆ ಎಂದು ಘಂಟಾಘೋಷವಾಗಿ ಹೇಳುತ್ತೇನೆ. ಏಕೆಂದರೆ ಆರು ವರ್ಷಗಳ ಆ ರಾಜ್ಯದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದು, ಆ ಜನ ನಾಡಿಮಿಡಿತದ ಅರಿವಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ
ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಮುರಳೀಧರರಾವ್, ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಎಂ.ಸತೀಶ್‌ರೆಡ್ಡಿ, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಇದ್ದರು.