Advertisement

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

02:34 PM Jan 03, 2025 | Team Udayavani |

ಬೆಳಗಾವಿ: ಬೆಂಗಳೂರಿನಲ್ಲಿ ನಮ್ಮ ನಿವಾಸದಲ್ಲಿ ನಡೆದ ಔತಣಕೂಟ ಮತ್ತು ಸಭೆಗೆ ಯಾವುದೇ ರಾಜಕೀಯ ಮಹತ್ವ ನೀಡಬೇಕಾದ ಅಗತ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

Advertisement

ಬೆಳಗಾವಿಯಲ್ಲಿ ಶುಕ್ರವಾರ (ಜ.03) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಔತಣಕೂಟ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ ಸಾಕಷ್ಟು ಸಲ ಇಂತಹ ಸಭೆ ಮಾಡಿದ್ದೇವೆ. ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದೇವೆ. ಹೀಗಿರುವಾಗ ಈ ಸಭೆಗೆ ಮಹತ್ವ ನೀಡಬೇಕಿಲ್ಲ ಎಂದರು.

ಮುಖ್ಯಮಂತ್ರಿಗಳು ನಮ್ಮ ಮನೆಗೆ ಬರುವುದು ಹೊಸದೇನಲ್ಲ. ನಾವು ಅವರ ಮನೆಗೆ ಹೋಗುತ್ತೇವೆ. ಅವರು ನಮ್ಮ ಮನೆಗೆ ಬರುತ್ತಾರೆ. ಮುಖ್ಯಮಂತ್ರಿಗಳ ಜೊತೆಗೆ ಎಲ್ಲ ಸಚಿವರು ಮಾತನಾಡಬೇಕು ಎಂದರು. ಹಾಗಾಗಿ ಹೊಸ ವರ್ಷದ ಸಂದರ್ಭದಲ್ಲಿ ಸೇರಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ಸಭೆಯಲ್ಲಿ ರಾಜ್ಯದ ಆಡಳಿತ ವ್ಯವಸ್ಥೆ ಸುಧಾರಿಸಿ, 2028ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ವಿಚಾರವಾಗಿ ಚರ್ಚಿಸಲಾಗಿದೆ. ಸಂಪುಟ ಪುನರ್‌ರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸಭೆಯಲ್ಲಿ ಅಹಿಂದ ನಾಯಕರಷ್ಟೆ ಸೇರಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಈ ಸಭೆ ತುರ್ತಾಗಿ ನಿಗದಿಯಾಯಿತು. ತಕ್ಷಣಕ್ಕೆ ಲಭ್ಯವಿರುವ ಕೆಲವರು ಮಾತ್ರ ಸೇರಿದೆವು. ಪ್ರವಾಸ ಮೊದಲಾದ ಕಾರಣಕ್ಕೆ ಕೆಲವರಿಗೆ ಹಾಜರಾಗಲು ಸಾಧ್ಯವಿಲ್ಲ. ಹಾಗಾಗಿ ಇದಕ್ಕೆ ರಾಜಕೀಯ ಹೆಚ್ಚು ಮಹತ್ವ ನೀಡಬೇಕಿಲ್ಲ ಎಂದು ಹೇಳಿದರು.

Advertisement

ಸಂಪುಟ ಪುನರ್‌ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅನೇಕ ನಾಯಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಈ ಬಗ್ಗೆ ಪಕ್ಷದ ಹೈಕಮಾಂಡ್‌, ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ನಿರ್ಣಯ ಕೈಗೊಳ್ಳುತ್ತಾರೆ. ಸದ್ಯಕ್ಕೆ ಅಂತಹ ಯಾವುದೇ ಬೆಳವಣಿಗೆ ಇಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಜಾರಕಿಹೊಳಿ, ಒಬ್ಬರಿಗೆ ಒಂದೇ ಹುದ್ದೆ ಎಂಬುದು ಇದೆ. ಆದರೆ ಆಯಾ ನಾಯಕನ ಸಾಮರ್ಥ್ಯ ಮತ್ತು ಅನಿವಾರ್ಯತೆಗೆ ಅನುಗುಣವಾಗಿ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಕೆಲವೊಮ್ಮೆ ಒಬ್ಬರಿಗೆ ಎರಡು ಹುದ್ದೆ ಕೊಟ್ಟ ಉದಾಹರಣೆಗಳಿವೆ. ಯಾರಿಗೆ ಎಷ್ಟು ಹುದ್ದೆ ಕೊಡಬೇಕು ಎಂಬುದರ ಬಗ್ಗೆ ಪಕ್ಷ ನಿರ್ಧರಿಸುತ್ತದೆ. ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಚರ್ಚೆಯೇ ಆಗಿಲ್ಲ.  ಸದ್ಯ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಸಮಯ ಬಂದಾಗ ಅದರ ಬಗ್ಗೆ ಚರ್ಚಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next