ಕೇದಾರನಾಥ: ಜಲಪ್ರಳಯದಿಂದಾಗಿ 2013ರಲ್ಲಿ ಹಾನಿ ಗೀಡಾಗಿದ್ದ ಕೇದಾರನಾಥ ಪವಿತ್ರ ಕ್ಷೇತ್ರದ ಪುನರುತ್ಥಾನದ ಕಾರ್ಯಕ್ಕೆ ಕೈ ಜೋಡಿಸುವ ತಮ್ಮ ಪ್ರಯತ್ನವನ್ನು ಆಗ, ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆರಂಭದಲ್ಲೇ ಚಿವುಟಿ ಹಾಕಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಹಿಮಾಲಯದಲ್ಲಿರುವ ಈ ಪವಿತ್ರ ತಾಣಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಐದು ಬೃಹತ್ ಯೋಜನೆಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇವು ಗಳಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸೌಕರ್ಯ ನೀಡುವ ಯೋಜನೆ ಒಂದಾದರೆ, ಮತ್ತೂಂದು ಪ್ರವಾಹ ದಿಂದ ವರ್ಷಕ್ಕೊಮ್ಮೆ ಉಕ್ಕಿ ಹರಿಯುವ ಮಂದಾಕಿನಿ ಹಾಗೂ ಸರಸ್ವತಿ ನದಿಗಳ ಸಮೀಪವೇ ಹಾದು ಹೋಗುವ ಕೇದಾರ ನಾಥ ಸಂಪರ್ಕ ರಸ್ತೆಯನ್ನು ರಕ್ಷಿಸುವ ರಕ್ಷಣಾ ಗೋಡೆ, ಆದಿ ಗುರು ಶಂಕರಾಚಾರ್ಯರ ಸಮಾಧಿಯುಳ್ಳ ಕಟ್ಟಡಗಳ ಜೀರ್ಣೋದ್ಧಾರಗಳೂ ಸೇರಿವೆ. ಇದೇ ವರ್ಷ ಮೇ ತಿಂಗ ಳಲ್ಲೂ ಇಲ್ಲಿಗೆ ಆಗಮಿಸಿದ್ದ ಮೋದಿ, ಆಗಲೂ ಐದು ಮಹತ್ವದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಶುಕ್ರವಾರ, ಇಲ್ಲಿನ ಮಹಾಶಿವನ ದೇಗುಲದಲ್ಲಿ ರುದ್ರಾಭಿ ಷೇಕದಲ್ಲಿ ಅವರು ಪಾಲ್ಗೊಂಡರು. ಬಳಿಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮೋದಿ, ಹಿಮಾಲಯದ ತಪ್ಪಲಿನಲ್ಲಿರುವ ಈ ಪುಣ್ಯಕ್ಷೇತ್ರಕ್ಕೆ ಆಗಮಿಸಿರುವುದರಿಂದ ತಮ್ಮಲ್ಲಿನ ದೇಶಸೇವೆಯ ಇಚ್ಛಾಶಕ್ತಿ ಇಮ್ಮಡಿಸಿದೆ ಎಂದು ಬಣ್ಣಿಸಿದರು. ಆನಂತರ, ತಮ್ಮ ಮಾತುಗಳನ್ನು ಕಾಂಗ್ರೆಸ್ ಕಡೆಗೆ ತಿರುಗಿಸಿದ ಅವರು, 2013ರಲ್ಲಿ ಪ್ರವಾಹಕ್ಕೆ ತುತ್ತಾಗಿ ತೀವ್ರವಾಗಿ ಹಾನಿಗೀಡಾಗಿದ್ದ ಕೇದಾರನಾಥ್‌ನ ಜೀರ್ಣೋದ್ಧಾರಕ್ಕೆ ಯತ್ನಿಸಿದ್ದರ ಬಗ್ಗೆ ತಿಳಿಸಿದರು.
“”2013ರಲ್ಲಿ ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದೆ. ಆಗ, ಕೇದಾರನಾಥ್‌ಗೆ ಬಂದೊದಗಿದ ದುಸ್ಥಿತಿಗೆ ಮರುಗಿ, ಅಂದಿನ ಉತ್ತರಾಖಂಡ ಸಿಎಂ ಜತೆ ಮಾತನಾಡಿ, ದೇಗುಲ ಪುನರುತ್ಥಾನಕ್ಕೆ ಅಗತ್ಯ ನೆರವು ಕೊಡುವುದಾಗಿ ತಿಳಿಸಿದೆ. ಇಲ್ಲಿನ ಮುಖ್ಯ ದೇಗುಲದ ಸುತ್ತಲಿನ ಕಟ್ಟಡಗಳ ಮರು ನಿರ್ಮಾಣದ ಹೊಣೆಯನ್ನು ಗುಜರಾತ್ ಸರ್ಕಾರವೇ ಹೊರುವುದಾಗಿಯೂ ತಿಳಿಸಿದ್ದೆ” ಎಂದರು.
“”ಮಾಧ್ಯಮಗಳಲ್ಲಿ ಈ ವಿಚಾರ ಬಿತ್ತರವಾದ ಕೂಡಲೇ ನವದೆಹಲಿಯಲ್ಲಿ ಸಂಚಲನ ಉಂಟಾಯಿತು. ಕೇದಾರನಾಥ ಪುನರುತ್ಥಾನದಲ್ಲಿ ನಾನು (ಮೋದಿ) ಕೈ ಜೋಡಿಸುವುದನ್ನು ರಾಜಕೀಯವಾಗಿ ತೆಗೆದುಕೊಂಡ ಯುಪಿಎ, ಉತ್ತರಾಖಂಡ ದಲ್ಲಿ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸಿಎಂ ವಿಜಯ ಬಹುಗುಣ (ಈಗ ಅವರು ಬಿಜೆಪಿಯಲ್ಲಿದ್ದಾರೆ) ಮೇಲೆ ಒತ್ತಡ ಹೇರಿ, ಆ ಬೃಹತ್ ಯೋಜನೆಯಿಂದ ನನ್ನನ್ನು ದೂರ ಇಡುವಂತೆ ನೋಡಿಕೊಂಡಿತು” ಎಂದು ಆರೋಪಿಸಿದರು.
ಬಾಬಾ ಇಚ್ಛೆ ಬೇರೆಯೇ ಆಗಿತ್ತು
ರಾಜಕೀಯಕ್ಕೆ ಬರುವುದಕ್ಕೂ ಮುನ್ನ ತಾವು ಕೇದಾರನಾಥ್‌ನ ಗರುಚಟ್ಟಿಯಲ್ಲಿ ಕಾಲ ಕಳೆದಿದ್ದನ್ನು ಮೋದಿ ನೆನಪಿಸಿಕೊಂಡರು. ಇಲ್ಲಿನ ಬಾಬಾ (ಶಿವ) ಅವರ ಪಾದತಲದಲ್ಲೇ ಅವರ ಸೇವೆ ಮಾಡಿಕೊಂಡು ಜೀವನವನ್ನು ಮುಡುಪಾಗಿಡಲು ನಿರ್ಧರಿಸಿದ್ದೆ. ಆದರೆ, ಬಾಬಾ ಅವರ ಇಚ್ಛೆ ಬೇರೆಯೇ ಆಗಿತ್ತು. ಅವರು ಹಾಗೆ ಇಚ್ಛೆ ಪಟ್ಟಿರಲಿಲ್ಲವೆಂದರೆ ನಾನು ಇಂದು 125 ಕೋಟಿ ಜನರ ಸೇವೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ನನ್ನ ಈಗಿನ ಸೇವೆಯೇ ದೇವರ ಸೇವೆಯೆಂದು ತಿಳಿಯುತ್ತೇನೆ ಎಂದರು.