ಕಲಬುರಗಿ: ಶಾಸಕ ಪ್ರಿಯಾಂಕ್ ಅವರ ತೇಜೋವಧೆ ಮಾಡಿರುವ ಬಿಜೆಪಿ ಮುಖಂಡ ಮಣಿಕಂಠ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹೆಸರಿನಲ್ಲಿ ರೌಡಿ ಶೀಟರ್ ದಿಂದ ದೇಣಿಗೆ ಪಡೆದಿರುವ ಕಲಬುರಗಿ ಪೊಲೀಸ್ ಆಯುಕ್ತರ ಪತ್ನಿ ವಿರುದ್ಧ ಪ್ರಕರಣ ದಾಖಲಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಹೊಂದಿರದ, ಪ್ರಮಾಣಿಕತೆಯ ಹಾಗೂ ಐಟಿಬಿಟಿ ಸಚಿವರಾಗಿದ್ದಾಗ ಇನ್ಫೋಸಿಸ್ ನ ಸುಧಾ ನಾರಾಯಣಮೂರ್ತಿ ಅವರಿಂದ ಅತ್ಯಂತ ಪ್ರಮಾಣಿಕ ಎಂಬ ಶಹಾಬ್ಬಾಸಗಿರಿ ಪಡೆದಿರುವ ಪ್ರಿಯಾಂಕ್ ಖರ್ಗೆ ವಿರುದ್ದ ಸುಪಾರಿ ಆರೋಪ ಹೊರಿಸಿರುವ ಮುಖಾಂತರ ತೇಜೋವಧೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಈ ಕೂಡಲೇ ಮಣಿಕಂಠ ವಿರುದ್ದ ಪೊಲೀಸ್ ರು ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್ ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಿದರು.
ಮಣಿಕಂಠ ಸುಫಾರಿ ಆರೋಪ ಮಾಡಿದ ತಕ್ಷಣ ರಾಜು ಕಪನೂರ ಅವರನ್ನು ಬಂಧಿಸಲಾಗಿದೆ. ಮೊದಲನೇಯದಾಗಿ ಎಫ್ಐಆರ್ ನಲ್ಲಿ ಕಪನೂರ ಹೆಸರೇ ಇಲ್ಲ.ಹೀಗಿದ್ದ ಮೇಲೂ ಪೊಲೀಸ್ ರು ಕೆಲವರ ಕೈಗೊಂಬೆಯಾಗಿ ಬಂಧಿಸಿದ್ದು, ಪೊಲೀಸ್ ರು ತಮ್ಮ ನೈತಿಕತೆ ಮರೆಯುತ್ತಿದ್ದಾರೆ ಎಂದು ಆರೋಪಿಸಿದರು.
ಮಣಿಕಂಠ ಅಕ್ಕಿ ಕಳ್ಳ ಎಂಬುದಕ್ಕೆ ಆತನ ವಿರುದ್ದ ದಾಖಲಾಗಿರುವ ಪ್ರಕರಣಗಳೇ ಸಾಕ್ಷಿಯಾಗಿವೆ. ಪ್ರಮುಖವಾಗಿ ತಾವೇ ಗಂಜ್ ದಲ್ಲಿ ಅಕ್ಕಿ ಸಮೇತ ಹಿಡಿದು ಕೊಡಲಾಗಿದೆ. ಅಂತವರು ಪ್ರಿಯಾಂಕ್ ಖರ್ಗೆ ವಿರುದ್ಧ ಇಲ್ಲ ಸಲ್ಲದನ್ನು ಮಾತನಾಡುತ್ತಾರೆ. ಪ್ರಿಯಾಂಕ್ ಖರ್ಗೆ ವಿರುದ್ದ ಮಾತನಾಡಿದರೆ ಕಾಂಗ್ರೆಸ್ ಪಕ್ಷ ಸುಮ್ಮನೇ ಕೂಡೋದಿಲ್ಲ. ಆದ್ದರಿಂದ ಮಣಿಕಂಠ ಕ್ಷಮೆ ಕೇಳಬೇಕೆಂದರು.
ಪೊಲೀಸ್ ಆಯುಕ್ತರ ಪತ್ನಿ ವಿರುದ್ದವೂ ಪ್ರಕರಣ ದಾಖಲಿಸಿ: ದಸರಾ ಸಾಂಸ್ಕೃತಿಕ ಹೆಸರಿನಲ್ಲಿ ರೌಡಿಶೀಟರ್ ನಿಂದ ಮೂರು ಲಕ್ಷ ರೂ ದೇಣಿಗೆ ಪಡೆದಿರುವ ಪೊಲೀಸ್ ಆಯುಕ್ತರ ಪತ್ನಿ ವಿರುದ್ದವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕೆಂದು ಅಲ್ಲಮಪ್ರಭು ಪಾಟೀಲ್ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಪೊಲೀಸ್ ರು ಕೆಲವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಪೊಲೀಸರು ತಮ್ಮ ನೈತಿಕತೆ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು. ಇವತ್ತು ಬಿಜೆಪಿ ಸರ್ಕಾರವಿದೆ.ನಾಳೆ ನಮ್ಮ ಕಾಂಗ್ರೆಸ್ ಸರ್ಕಾರ ಬರಬಹುದು. ಯಾರೂ ಶಾಶ್ವತವಿಲ್ಲ. ಇದನ್ನು ಪೊಲೀಸರು ಅರಿಯಬೇಕೆಂದು ಅಲ್ಲಮಪ್ರಭು ಕಿವಿ ಮಾತು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣಪ್ಪ ಕಮಕನೂರ, ಮುಖಂಡರಾದ ಸಂತೋಷ ಪಾಟೀಲ್ ದಣ್ಣೂರ, ಈರಣ್ಣ ಝಳಕಿ, ಸಚಿನ ಶಿರವಾಳ ಸೇರಿದಂತೆ ಮುಂತಾದವರಿದ್ದರು.