ಮಂಗಳೂರು: ಪ್ರಜಾಪ್ರಭುತ್ವದ ಬುನಾದಿಯಲ್ಲಿ ಆಡಳಿತ ನಡೆಸಬೇಕು ಎಂದು ಸಂವಿಧಾನ ರಚನೆ ಮಾಡಲಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಸಂಸತ್ತಿನಲ್ಲಿ ವಿಪಕ್ಷ ಸಂಸದರು ಕೋಲಾಹಲ ನಡೆಸಿದ ಪರಿಣಾಮ ಬಜೆಟ್ ಅಧಿವೇಶನದ ದಿನಗಳು ವ್ಯರ್ಥವಾದುದನ್ನು ವಿರೋಧಿಸಿ ಪುರಭವನದ ಗಾಂಧಿ ಪ್ರತಿಮೆಯ ಬಳಿ ಗುರುವಾರ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಕೊಲೆ ಮಾಡಿತು. ದೇಶದಲ್ಲಿ ಬೇರೆ ಪಕ್ಷಗಳು ಆಡಳಿತಕ್ಕೆ ಬಂದಾಗ ಆಯಾ ಪಕ್ಷಗಳನ್ನು ಒಡೆಯುವ ನಿಟ್ಟಿನಲ್ಲಿ ಅದು ಸದಾ ಯೋಚಿಸುತ್ತಿದೆ. ಭಾರತವನ್ನು ಬ್ರಿಟಿಷರು ಆಳುತ್ತಿರುವ ಸಮಯದಲ್ಲಿ ನೆಮ್ಮದಿ ಇರಲಿಲ್ಲ. ಅವರು ಭಾರತ ಬಿಟ್ಟು ತೊಲಗಿದ ಬಳಿಕ ಕಾಂಗ್ರೆಸ್‌ನಿಂದ ದೇಶಕ್ಕೆ ನೆಮ್ಮದಿ ಇಲ್ಲ ಎಂದು ತಿಳಿಸಿದರು.
ಬಜೆಟ್ ಅಧಿವೇಶನದಲ್ಲಿ ಹಿಂದುಳಿದ ವರ್ಗಗಳ ಮಸೂದೆ ಚರ್ಚೆಯಾಗಬೇಕಿತ್ತು. ಆದರೆ ಇದಕ್ಕೆ ಅವಕಾಶ ಕೊಡದೆ ಹಿಂದುಳಿದ ವರ್ಗದ ಮಂದಿಗೆ ಕಾಂಗ್ರೆಸ್ ದ್ರೋಹ ಮಾಡಿದೆ. ಕಾವೇರಿ ನೀರಿನ ವಿಚಾರ ಚರ್ಚೆಯಾಗದೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಮಂದಿಗೆ ಅನ್ಯಾಯ ಎಸಗಿದ್ದಾರೆ. ದೇಶದ ಹಿತಕ್ಕಾಗಿ ಬಿಜೆಪಿಯ ಲೋಕಸಭಾ ಸದಸ್ಯರು ಎಪ್ರಿಲ್ ತಿಂಗಳ ಸಂಬಳವನ್ನು ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಇಡೀ ಜಗತ್ತು ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಆಡಳಿತವನ್ನು ಒಪ್ಪಿದೆ. ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ ಎಂದರು.
ಉಪವಾಸ ಸತ್ಯಾಗ್ರಹದಲ್ಲಿ ಗಣೇಶ್ ಕಾರ್ಣಿಕ್, ಯೋಗೀಶ್ ಭಟ್, ರುಕ್ಮಯ ಪೂಜಾರಿ, ಬಾಲಕೃಷ್ಣ ಭಟ್, ಬೃಜೇಶ್ ಚೌಟ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ನಿತಿನ್ ಕುಮಾರ್, ಪೂಜಾ ಪೈ, ಜಿತೇಂದ್ರ ಕೊಟ್ಟಾರಿ, ಹರಿಕೃಷ್ಣ ಬಂಟ್ವಾಳ, ಭರತ್ ಶೆಟ್ಟಿ, ರಾಮಚಂದ್ರ ಬೈಕಂಪಾಡಿ, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡಿ ಎಂದು ನಾನು ಕೇಂದ್ರದಲ್ಲಿ ಒತ್ತಡ ತರಲಿಲ್ಲ. ಆಕಾಂಕ್ಷಿಗಳಿಗೆ ಟಿಕೆಟ್ ಸಿಗದಿದ್ದರೂ ಪಕ್ಷ ಸಂಘಟನೆಯಲ್ಲಿ ಅವರು ದುಡಿಯುತ್ತಾರೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬಳಿಕ ಪ್ರಭಾವಿ ಕಾಂಗ್ರೆಸ್ ನಾಯಕರೊಬ್ಬರು ಬಿಜೆಪಿಗೆ ಬರಲಿದ್ದಾರೆ. ಅದು ಕೇಳಿ ಸಚಿವ ರಮಾನಾಥ ರೈ ಅವರಿಗೆ ಆಶ್ಚರ್ಯವಾಗಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿದ್ದೆ ಬಾರದೆ ಇರಬಹುದು. ಮುಂದಿನ ದಿನದಲ್ಲಿ ಚುನಾವಣಾ ಪ್ರಚಾರಕ್ಕೆ ನರೇಂದ್ರ ಮೋದಿ ಅವರು ರಾಜ್ಯ ಪ್ರವಾಸ ಮಾಡಲಿದ್ದಾರೆ. ದಿನಾಂಕ ಇನ್ನೂ ನಿಗದಿಯಾಗಲಿಲ್ಲ.
– ನಳಿನ್ ಕುಮಾರ್, ಸಂಸದ