ವಿಜಯಪುರ: ದುಡ್ಡು ಹಂಚಿ ಗೆದ್ದಿರುವ ಚುನಾವಣೆ ಇದು. ದುಡ್ಡು ಪ್ರಭಾವ ಬೀರಿದೆ. ಆಡಳಿತ ಯಂತ್ರದ ದುರ್ಬಳಕೆ ಮಾಡಿಕೊಂಡು ಬಿಜೆಪಿ ಗೆಲುವು ಸಾಧಿಸಿದೆ ಎಂದು ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಸಿಂದಗಿ ಉಪ ಚುನಾವಣೆ ಫಲಿತಾಂಶದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ಕ್ಷೇತ್ರದಲ್ಲಿ ಅಧಿಕಾರದ ದುರ್ಬಳಕೆ, ಹಣ ಬಲವನ್ನೆಲ್ಲ ಮೀರಿ ಕಾಂಗ್ರೆಸ್ ಪರ ಮತ ಹಾಕಿದ ಕ್ಷೇತ್ರದ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಿಂದಗಿ ಕಾಂಗ್ರೆಸ್ ಪಕ್ಷದ ಭಿನ್ನಾಭಿಪ್ರಾಯಕ್ಕಿಂತ ಬಿಜೆಪಿ ಆಡಳಿತ ಯಂತ್ರದ ದುರ್ಬಳಕೆ ನಮ್ಮ ಸೋಲಿಗೆ ಕಾರಣವಾಗಿದೆ. ಕೆಪಿಸಿಸಿ ಇಡೀ ತಂಡ ಕೆಲಸ ಮಾಡಿದ್ದರಿಂದ ಹಿಂದಿನ 3-4 ಚುನಾವಣೆಯಲ್ಲಿ 23 ಸಾವಿರ ಮತ ಪಡೆಯುತ್ತಿದ್ದ ನಾವು, ಉಪ ಚುನಾವಣೆಯಲ್ಲಿ 60 ಸಾವಿರ ಮತಕ್ಕೆ ಏರಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸುಲಭವಾಗಿಸಿದೆ ಎಂದರು.
ಇದನ್ನೂ ಓದಿ: ಪಟ್ಟಣ ಪಂಚಾಯಿತಿ ಚುನಾವಣಾ ಸ್ಪರ್ಧಿಗಳ ಅಪಹರಣ – ಆರೋಪ..!
ಎಲ್ಲ ಸಂದರ್ಭದಲ್ಲಿ ಅನುಕಂಪ ಕೆಲಸ ಮಾಡುವುದಿಲ್ಲ. ಸಿಂದಗಿ ಕ್ಷೇತ್ರದಲ್ಲಿ ಶಾಸಕರಾಗಿದ್ದ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿಗೆ ಅನುಕಂಪ ಕೆಲಸ ಮಾಡಿಲ್ಲ ಎಂಬ ವಿಶ್ಲೇಷಣೆ ಸರಿಯಲ್ಲ. ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಪತ್ನಿ ಕೇವಲ 4 ಸಾವಿರ ಅಂತರದಲ್ಲಿ ಗೆದ್ದಿರುವುದು ಅನುಕಂಪದ ಅಲೆಯೇ ಎಂದು ಪ್ರಶ್ನಿಸಿದರು.