Advertisement

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

10:27 PM Mar 26, 2024 | Team Udayavani |

ಶಿವಮೊಗ್ಗ: ಕಾಂಗ್ರೆಸ್‌ನ ಕುಟುಂಬ ಸಂಸ್ಕೃತಿ ಆವರಿಸಿ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತಿದೆ. ಪಕ್ಷ ಕಟ್ಟಿದವರಿಗೆ ನೋವಾಗಿದೆ. ಅದನ್ನು ಸರಿ ಮಾಡಲು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ನಗರ ಮತ್ತು ಗ್ರಾಮಾಂತರ ಕ್ಷೇತ್ರದ ಬೂತ್‌ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಮಾವೇಶದಲ್ಲಿ ಪಾಲ್ಗೊಂಡು ಮನೆಗೆ ಹೋದಾಗ ನಿಮಗೆ ಫೋನ್‌ ಬರಬಹುದು. ಬೇರೆ ಬೇರೆ ರೂಪದ ಭಯ ಹುಟ್ಟಿಸಬಹುದು. ಹೆದರಿಕೊಂಡು ಕೆಲವರು ಮನೆಯಲ್ಲಿ ಇದ್ದಾರೆ. ಇನ್ನೂ ಕೆಲವರು ಪ್ರಾಣ ಹೋದರೂ ನಿಮ್ಮನ್ನು ಗೆಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ಕಾಂಗ್ರೆಸ್‌ನವರು ಸಹ ನಮ್ಮ ಮನೆ ದೇವರಾಣೆಗೂ ಗೆಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ 108 ಸ್ಥಾನದವರೆಗೆ ಗೆಲುವು ಸಾಧಿಸಿತ್ತು. ನಮಗೆ ಯಾವತ್ತೂ ಪೂರ್ಣ ಬಹುಮತ ಸಿಗಲಿಲ್ಲ. ಆದರೆ 108ರಿಂದ ಈ ಬಾರಿ 66ಕ್ಕೆ ಕುಸಿಯಲು ಕಾರ್ಯಕರ್ತರು ಕಾರಣ ಅಲ್ಲ. ರಾಜ್ಯದ ನಾಯಕರು ಕಣ್ಣೀರು ಹಾಕುತ್ತಿದ್ದಾರೆ. ಈ ಪಕ್ಷದಲ್ಲಿ ಶಿಸ್ತಿನಿಂದ ನಡೆದುಕೊಂಡು ಬಂದಿದ್ದೇ ತಪ್ಪಾ? ಎಂದು ಕೇಳುತ್ತಿದ್ದಾರೆ ಎಂದರು.

ಅವರ ಮಗನಿಗೆ ಬೇಕು;
ನನ್ನ ಮಗನಿಗೆ ಬೇಡವೇ?
ಈಶ್ವರಪ್ಪನ ಮಂತ್ರಿ ಮಾಡಿದರೆ ವಿಜಯೇಂದ್ರನನ್ನು ಸಹ ಮಂತ್ರಿ ಮಾಡಬೇಕು ಎಂದು ಯಡಿಯೂರಪ್ಪ ಬೊಮ್ಮಾಯಿ ಬಳಿ ಹೇಳಿದ್ದರಂತೆ. ಯಡಿಯೂರಪ್ಪನವರ ಒಬ್ಬ ಮಗ ಎಂಪಿ. ಇನ್ನೊಬ್ಬ ರಾಜ್ಯಾಧ್ಯಕ್ಷ. ನನ್ನ ಮಗ ಏನು ತಪ್ಪು ಮಾಡಿದ್ದ?. ಬೊಮ್ಮಾಯಿ ಫೇಲ್ಯೂರ್‌ ಮುಖ್ಯಮಂತ್ರಿ ಎಂದು ವಿಜಯೇಂದ್ರ ಹೇಳಿಲ್ಲ ಅಂತ ಹೇಳಲಿ. ಯತ್ನಾಳ್‌ ಬೆಳೆದರೆ ಇನ್ನೊಬ್ಬ ಲಿಂಗಾಯತ ನಾಯಕ ಬೆಳಿತಾನೆ ಅಂತ ತುಳಿದರು. ಸಿ.ಟಿ. ರವಿ ಪಕ್ಷ ಸಂಘಟಿಸಿದವರು. ಅವರಿಗೆ ಯಾಕೆ ಟಿಕೆಟ್‌ ಕೊಡಲಿಲ್ಲ. ಹಿಂದುತ್ವದ ಹುಲಿಗಳಿಗೆ ಯಾಕೆ ಟಿಕೆಟ್‌ ಕೊಡಲಿಲ್ಲ. ನೀವೆಲ್ಲ ಈಶ್ವರಪ್ಪ ಎಂದು ಬಂದಿಲ್ಲ. ಹಿಂದೂ ಹುಲಿ ಎಂದು ಬಂದಿದ್ದೀರಿ. ನಾನು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಅದೇ ಬೇರೆಯವರು ನನ್ನ ಮಕ್ಕಳ ಆಣೆಗೂ ಜಾತಿ ರಾಜಕಾರಣ ಮಾಡಲ್ಲ ಅಂತ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಕರ್ನಾಟಕದ ಬಿಜೆಪಿಯಲ್ಲಿ ಕಾಂಗ್ರೆಸ್‌ನ ಕುಟುಂಬ ಸಂಸ್ಕೃತಿ ಬಂದಿದೆ ಎಂದು ವಾಗ್ಧಾಳಿ ನಡೆಸಿದರು.

ಹೊಂದಾಣಿಕೆ ಮಾಡಿದ್ದರು
ವಿಧಾನಸಭೆ ಚುನಾವಣೆಯಲ್ಲಿ ವರುಣಾ, ಶಿಕಾರಿಪುರದಲ್ಲಿ ಹೊಂದಾಣಿಕೆ ಮಾಡಿಕೊಂಡರು. ಈಗ ಕಾಂಗ್ರೆಸ್‌ನಲ್ಲಿ ಶಕ್ತಿ ಇಲ್ಲದ ಡಮ್ಮಿ ಕ್ಯಾಂಡಿಡೇಟ್‌ ಹಾಕಿಸಿಕೊಂಡು ಬಂದಿದ್ದಾರೆ. ಗಂಡಸುತನ ಇರೋ ವ್ಯಕ್ತಿ ಜತೆ ಮಧು ಬಂಗಾರಪ್ಪ ಹೊಂದಾಣಿಕೆ ಮಾಡಿಕೊಂಡರೆ ನಾನು ಎಲ್ಲಿಂದ ಟಿಕೆಟ್‌ ತರಲಿ ಎಂದ ಅವರು, ಚುನಾವಣೆಯಲ್ಲಿ ಗೆದ್ದು ಗಂಡಸುತನ ತೋರಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ತಿರುಗೇಟು ನೀಡಿದರು.

Advertisement

12ರಂದು ನಾಮಪತ್ರ ಸಲ್ಲಿಕೆ
ಬ್ರಹ್ಮ ಬಂದರೂ ಚುನಾವಣೆಯಲ್ಲಿ ನಿಲ್ಲುವವನೇ. ಕನಿಷ್ಠ 25 ಸಾವಿರ ಜನರ ಬೆಂಬಲದೊಂದಿಗೆ ಎ. 12ರಂದು ನಾಮಪತ್ರ ಸಲ್ಲಿಸುತ್ತೇನೆ. ಹಿಂದುತ್ವದ ಜಯಕ್ಕಾಗಿ ಅಂದು ದೊಡ್ಡ ಸಂಖ್ಯೆಯಲ್ಲಿ ಜನ ಬರಬೇಕು. ದುಡ್ಡು ಕೊಟ್ಟು, ಕೂಲಿ ಕೊಟ್ಟು ಜನರನ್ನು ಕರೆದುಕೊಂಡು ಬರುತ್ತಾರೆ. ನನ್ನ ಜತೆ ಬರುವವರು ಸ್ವಾಭಿಮಾನಿಗಳು. ಅವರ ಜತೆ ಹೋಗುವವರು ಕೂಲಿ ಕಾರ್ಮಿಕರು. 12ರಂದು ಶಕ್ತಿ ಪ್ರದರ್ಶನ ಮಾಡೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next