Advertisement

ಕಾಂಗ್ರೆಸ್‌ ಕೋವಿಡ್‌-19 ಘಟಕ: ದಂತ ವೈದ್ಯರ ನೇತೃತ್ವಕ್ಕೆ ಆಕ್ಷೇಪ

12:53 AM Apr 27, 2020 | Sriram |

ಬೆಂಗಳೂರು: ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿರುವ ಕೋವಿಡ್- 19 ಮಹಾ ಮಾರಿ ರೋಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಕಾಂಗ್ರೆಸ್‌ ದಂತ ವೈದ್ಯರಿಗೆ ಜವಾಬ್ದಾರಿ ವಹಿಸಿದ್ದು, ಈ ಬಗ್ಗೆ ಪಕ್ಷದಲ್ಲಿಯೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

Advertisement

ರಾಜ್ಯದಲ್ಲಿ ಕೋವಿಡ್- 19 ನಿಯಂತ್ರಿಸಲು ಕಾಂಗ್ರೆಸ್‌ ಕೂಡ ತನ್ನದೇ ಆದ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದು, ಕೋವಿಡ್- 19 ನಿಯಂತ್ರಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ತೆಗೆದುಕೊಳ್ಳುವ ನಿರ್ಧಾರಗಳಿಂದ ಸಾರ್ವಜನಿಕರಿಗೆ ಎಷ್ಟು ಉಪಯೋಗವಾಗುತ್ತಿವೆ ಮತ್ತು ಸರಕಾರದ ಆದೇಶಗಳು ಜನರಿಗೆ ತಲುಪುತ್ತಿವೆಯೇ ಇಲ್ಲವೋ ಎನ್ನುವುದನ್ನು ಗಮನ ಹರಿಸಲು ವಿಧಾನಸಭೆ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಟಾಸ್ಕ್ಫೋರ್ಸ್‌ ರಚನೆ ಮಾಡಲಾಗಿದೆ.

ಅದರ ಹೊರತಾಗಿ ಯಾರಾದರೂ ಸಾರ್ವಜನಿಕರು ಆರೋಗ್ಯ ಸೇವೆಯ ಬಗ್ಗೆ ಮಾಹಿತಿ ಪಡೆಯಲು ಕೊವಿಡ್‌-19 ಗೆ ವಿಶೇಷ ಘಟಕ ಸ್ಥಾಪಿಸ ಲಾಗಿದೆ. ಈ ಟಾಸ್ಕ್ ಫೋರ್ಸ್‌ಗೆ ಕೆಪಿಸಿಸಿ ವೈದ್ಯಕೀಯ ಘಟಕದ ಅಧ್ಯಕ್ಷರಾಗಿರುವ ದಂತ ವೈದ್ಯ ಡಾ| ರಾಘವೇಂದ್ರ ಅವರ ನೇತೃತ್ವದಲ್ಲಿಯೇ ಕೋವಿಡ್- 19 ಆರೋಗ್ಯ ಸಲಹಾ ಘಟಕ ಕಾರ್ಯ ನಿರ್ವಹಿಸುತ್ತಿದೆ.

ವೈದ್ಯರ ಆಕ್ಷೇಪ
ಡಾ| ರಾಘವೇಂದ್ರ ದಂತ ವೈದ್ಯರಾಗಿರುವುದರಿಂದ ಅವರಿಗೆ ಗಂಟಲು ನೋವು, ಉಸಿರಾಟ ಸಮಸ್ಯೆ, ಶ್ವಾಸಕೋಶದ ಸಮಸ್ಯೆಗಳು, ಎದೆ ನೋವಿನ ಸಮಸ್ಯೆಗಳ ಬಗ್ಗೆ ಮಾಹಿತಿ ಇರುವುದಿಲ್ಲ ಎಂಬ ಕಾರಣಕ್ಕೆ ಅವರ ನೇತೃತ್ವದ ವೈದ್ಯಕೀಯ ಸಲಹಾ ಘಟಕದ ಬಗ್ಗೆ ವೈದ್ಯಕೀಯ ಕ್ಷೇತ್ರದಲ್ಲಿ ಎಂಬಿಬಿಎಸ್‌, ಎಂಎಸ್‌, ಎಂಡಿ ಮಾಡಿರುವ ವೈದ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೂ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ದಂತ ವೈದ್ಯರು ಬಿಡಿಎಸ್‌ ಮಾತ್ರ ಅಧ್ಯಯನ ಮಾಡುವುದರಿಂದ ಕೇವಲ ದಂತದ ಬಗ್ಗೆ ಮಾತ್ರ ಅಧ್ಯಯನ ಮಾಡಿರುತ್ತಾರೆ. ಎಂಬಿಬಿಎಸ್‌ ಸಹಿತ ಇತರ ವೈದ್ಯಕೀಯ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಅವಕಾಶ ಇಲ್ಲದಿರುವುದರಿಂದ ದೇಹದ ಇತರ ಭಾಗಗಳ ಲಕ್ಷಣಗಳು ಮತ್ತು ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಇಂಥ ಸಂದರ್ಭದಲ್ಲಿ ಕೋವಿಡ್- 19 ರೋಗದ ಲಕ್ಷಣಗಳು ಅಥವಾ ಇತರ ಆರೋಗ್ಯ ಸಮಸ್ಯೆ ಬಗ್ಗೆ ಸಾರ್ವಜನಿಕರು ಸಲಹೆ ಬಯಸಿದರೆ ಅವರಿಗೆ ತಪ್ಪು ಮಾಹಿತಿ ಹೋಗುವ ಸಾಧ್ಯತೆ ಇರುತ್ತದೆ ಎಂಬ ಆತಂಕವನ್ನು ವೈದ್ಯರು ಡಿಕೆಶಿ ಎದುರು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಬದಲಾವಣೆಗೆ ಮನವಿ
ಶಾಸಕರಾಗಿರುವ ಡಾ| ಯತೀಂದ್ರ ಸಿದ್ದರಾಮಯ್ಯ, ಡಾ| ಅಂಜಲಿ ನಿಂಬಾಳ್ಕರ್‌, ಡಾ| ಅಜಯ್‌ ಸಿಂಗ್‌, ಡಾ| ರಂಗನಾಥ್‌ತಂಥ ತಜ್ಞ ವೈದ್ಯರು ಪಕ್ಷದಲ್ಲಿರುವುದರಿಂದ ಅವರಲ್ಲಿ ಯಾರಿಗಾದರೂ ಕೋವಿಡ್- 19 ನಿಯಂತ್ರಣದ ವೈದ್ಯಕೀಯ ತಂಡದ ನೇತೃತ್ವ ವಹಿಸಿ ಅನೇಕ ತಜ್ಞ ವೈದ್ಯರ ಸೇವೆ ಬಳಸಿಕೊಳ್ಳಬಹುದು ಎಂಬ ಸಲಹೆ ನೀಡಿದ್ದಾರೆ. ವಿಶೇಷವಾಗಿ ಡಾ| ಯತೀಂದ್ರ ಸಿದ್ದರಾಮಯ್ಯ ಕೋವಿಡ್- 19 ಪರಿಣಾಮ ಬೀರುವ ಲಕ್ಷಣಗಳಿಗೆ ಸಂಬಂಧಿಸಿದ ವಿಷಯದ ಮೇಲೆಯೇ ಪೆಥಾಲಜಿಯಲ್ಲಿ ಎಂಡಿ ಮಾಡಿದ್ದಾರೆ. ಈಗಿನ ಸಂದರ್ಭದಲ್ಲಿ ರೋಗದ ಲಕ್ಷಣಗಳು ಗೊತ್ತಿರುವ ವೈದ್ಯರಿಗೆ ಪಕ್ಷದ ಕೋವಿಡ್‌-19 ಘಟಕದ ನೇತೃತ್ವ ವಹಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next