ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಐದು ವರ್ಷದಲ್ಲಿ ಜನಪರ ಕೆಲಸ ಮಾಡದೆ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಯೋಜನೆಗಳಿಗೆ ಒಲವು ತೋರುವ ಮೂಲಕ ಗುತ್ತಿಗೆದಾರ ಸ್ನೇಹಿ ಸರ್ಕಾರವೆನಿಸಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಆರೋಪಿಸಿದರು.
ಗುರುವಾರ ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ ಯುವಜನತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ರಾಜ್ಯ ಕಾಂಗ್ರೆಸ್ ಸರ್ಕಾರ ಜನಹಿತಕ್ಕೆ ಕಾರ್ಯ ನಿರ್ವಹಿಸುವುದಕ್ಕಿಂತ ಗುತ್ತಿಗೆದಾರರ ಅನುಕೂಲಕ್ಕೆ ಕಾರ್ಯ ನಿರ್ವಹಿಸಿದೆ. ಗುತ್ತಿಗೆದಾರರ ಲಾಬಿ ಸೃಷ್ಟಿಯಾಗಿದ್ದು, ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ ವ್ಯಾಪಿಸಿದೆ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ಸೇರಿದಂತೆ ಹಲವು ಭಾಗ್ಯ ಯೋಜನೆಗಳ ಲಾಭ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಆದರೆ ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಫಲಾನುಭವಿಗಳಿಗೆ ತಲುಪುತ್ತಿದೆ. ಕೇಂದ್ರ ಸರ್ಕಾರವು ಮೂರ್‍ನಾಲ್ಕು ವರ್ಷಗಳಲ್ಲಿ ಉತ್ತಮ ಆಡಳಿತ ನೀಡಿದ್ದು, ಉತ್ತಮ ಆಡಳಿತವು ಕೇಂದ್ರದ ಕಾರ್ಯಸೂಚಿಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿರುವ ಬಿಜೆಪಿಗೆ ರೈತರ ಸಮಸ್ಯೆಗೆ ಸ್ಪಂದಿಸಿ ಅವರ ಆದಾಯ ದ್ವಿಗುಣಗೊಳಿಸಿ, ಆತ್ಮಹತ್ಯೆ ತಡೆಯುವುದು ಮುಖ್ಯ ಕಾರ್ಯಸೂಚಿಯಾಗಲಿದೆ. ನೀರಾವರಿ ಕ್ಷೇತ್ರಕ್ಕೆ ಒಂದು ಲಕ್ಷ ಕೋಟಿ ರೂ. ಮೀಸಲಿಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಪ್ರಕಟಿಸಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರವು ರೈತರ ಕಲ್ಯಾಣಕ್ಕೆ ಕಾಯ್ದಿರಿಸಿದ ನಿಧಿಯನ್ನೂ ದುರುಪಯೋಗಪಡಿಸಿಕೊಂಡಿದೆ ಎಂದು ತಿಳಿಸಿದರು.
ರಾಜ್ಯದೆಲ್ಲೆಡೆ ಭಯದ ವಾತಾವರಣ ಸೃಷ್ಟಿಯಾಗಿದ್ದು, ಜನ ಮನೆಯಿಂದ ಹೊರಬರಲು ಆತಂಕಪಡಬೇಕಾದ ಸ್ಥಿತಿ ಇದೆ. ಕಾಂಗ್ರೆಸ್ ಪಕ್ಷವು ದೇಶ ವಿರೋಧಿ ನಿಲುವಿನ ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿಯು ಭಯೋತ್ಪಾದಕ ಜಾಲವನ್ನು ನಿರ್ನಾಮ ಮಾಡಿ ದೇಶ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕುವ ಏಕೈಕ ಪಕ್ಷ ಎಂದು ಹೇಳಿದರು.