ಬೆಂಗಳೂರು: ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಬಳಕೆಯಲ್ಲಿ ಕಾಂಗ್ರೆಸ್ ಮುಂದಿದೆ.
ಏಪ್ರಿಲ್ 23ರಂದು ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಬಳಕೆಗೆ ಅನುಮತಿ ಕೋರಿ ವಿವಿಧ ಪಕ್ಷಗಳಿಂದ ಒಟ್ಟು 69 ಮನವಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ ಅತಿ ಹೆಚ್ಚು 24 ಮನವಿಗಳು ಕಾಂಗ್ರೆಸ್‌ನಿಂದ ಬಂದಿವೆ. ಈ ಪೈಕಿ 4 ಮನವಿಗಳನ್ನು ತಿರಸ್ಕರಿಸಲಾಗಿದ್ದು, 20 ಮನವಿಗಳಿಗೆ ಅನುಮತಿ ನೀಡಲಾಗಿದೆ.
ಅದೇ ರೀತಿ, ಬಿಜೆಪಿಯಿಂದ 19 ಮನವಿಗಳು ಬಂದಿದ್ದು, 9 ಮನವಿಗಳನ್ನು ತಿರಸ್ಕರಿಸಲಾಗಿದೆ. 10 ಮನವಿಗಳಿಗೆ ಅನುಮತಿ ನೀಡಲಾಗಿದೆ. ಜೆಡಿಎಸ್ ಪಕ್ಷಕ್ಕೆ 6 ಹೆಲಿಕಾಪ್ಟರ್‌ಗಳ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಾಹಿತಿ ನೀಡಿದೆ.
ರ್ಯಾಲಿ, ಜಾಥಾ, ಬಹಿರಂಗ ಸಭೆ, ರೋಡ್ ಶೋ, ಧ್ವನಿವರ್ಧಕ ಬಳಕೆ ಸೇರಿದಂತೆ ವಿವಿಧ ರೀತಿಯ ಚುನಾವಣಾ ಪ್ರಚಾರಕ್ಕಾಗಿ ಅನುಮತಿ ಕೋರಿ “ಸುವಿಧಾ’ ಆ್ಯಪ್‌ನಲ್ಲಿ ಇಲ್ಲಿತನಕ 5,688 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 5,161 ಅರ್ಜಿಗಳನ್ನು ಅಂಗೀಕರಿಸಲಾಗಿದೆ.
51 ಅರ್ಜಿಗಳ ವಿಲೇವಾರಿ ಪ್ರಗತಿಯಲ್ಲಿದ್ದು, 476 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸ್ವೀಕೃತವಾದ ಅರ್ಜಿಗಳ ಪೈಕಿ ಅತಿ ಹೆಚ್ಚು 2,612 ಬಿಜೆಪಿಯಿಂದ ಸ್ವೀಕೃತವಾಗಿವೆ. ಉಳಿದಂತೆ ಕಾಂಗ್ರೆಸ್‌ನಿಂದ 2,020, ಜೆಡಿಎಸ್‌ನಿಂದ 584, ಬಿಎಸ್‌ಪಿಯಿಂದ 120, ಪಕ್ಷೇತರರಿಂದ 135, ಸಿಪಿಐ 1, ಸಿಪಿಎಂ 6 ಹಾಗೂ ಇತರರಿಂದ 210 ಅರ್ಜಿಗಳನ್ನು ಸ್ವೀಕರಿಸಲಾಗಿದೆ.