ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕಾಂಗ ಪಕ್ಷದ ನಾಯಕ
ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯಪಾಲರಿಗೆ ಕಾಂಗ್ರೆಸ್ ನಾಯಕರು ದೂರು ಸಲ್ಲಿಸಿದ್ದಾರೆ .
ವಿಧಾನಸಭೆ ಕಲಾಪದಲ್ಲಿ ಯತ್ನಾಳ್ ವಿರುದ್ಧ ಚರ್ಚೆಗೆ ಅವಕಾಶ ನೀಡುವಂತೆ ಧರಣಿ ನಡೆಸಿದ್ದ
ಕಾಂಗ್ರೆಸ್ ನಾಯಕರ ಬೇಡಿಕೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಂದಿಸದಿದ್ದರಿಂದ ರಾಜ್ಯಪಾಲರಿಗೆ ದೂರು ನೀಡಿ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರನ್ನು ನಕಲಿ ಹೋರಾಟಗಾರ ಮತ್ತು ಪಾಕಿಸ್ಥಾನದ ಏಜೆಂಟ್ ಎಂದು ಕರೆದಿರುವ ಬಸನಗೌಡ ಯತ್ನಾಳ್ ಅವರ ಹೇಳಿಕೆಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡಲಾಗಿತ್ತು. ಈ ಕುರಿತು ನಿಯಮದ ಪ್ರಕಾರ ನೋಟಿಸ್ ನೀಡಿದರೆ ಚರ್ಚಿಸಲು ಅವಕಾಶ ನೀಡುವುದಾಗಿ ಹೇಳಿದ್ದ ಸ್ಪೀಕರ್ ಅನಂತರ ಚರ್ಚೆಗೆ ಅವಕಾಶ ನಿರಾಕರಿಸಿದ್ದಾರೆ.
ಬಸನ ಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ. ಅವರನ್ನು ಸದನದಿಂದ ಉಚ್ಚಾಟನೆ ಮಾಡಬೇಕೆನ್ನುವುದು ನಮ್ಮ ಆಗ್ರಹವಾಗಿದೆ. ಆದರೆ ಸ್ಪೀಕರ್ ಈ ಕುರಿತು ಚರ್ಚೆಗೆ ಅವಕಾಶ ನೀಡದಿರುವುದರಿಂದ ಶಾಸಕಾಂಗದ ಮುಖ್ಯಸ್ಥರಾಗಿರುವ ತಾವು ಈ ಕುರಿತು ಸೂಕ್ತ ಕ್ರಮ ಕೈಗೊಂಡು ಬಸನ ಗೌಡ ಪಾಟೀಲ್ ಯತ್ನಾಳ್ ರನ್ನು ವಿಧಾನಸಭೆ ಸದಸ್ಯತ್ವದಿಂದ ಉಚ್ಚಾಟಿಸಿ ಸೂಕ್ತ ಸಂದೇಶ ರವಾನೆ ಮಾಡಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯಪಾಲರ ಭೇಟಿಯ ಅನಂತರ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಯತ್ನಾಳ್ ಶಾಸಕರಾಗಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ಬಿಜೆಪಿ ನಾಯಕರು ಅವರನ್ನು ಸಮರ್ಥಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಸ್ವಾತಂತ್ರ್ಯದ ಬಗ್ಗೆ ಬಿಜೆಪಿಯವರಿಗೆ ಎಳ್ಳಷ್ಟೂ ಗೌರವ ಇಲ್ಲ. ಇದೊಂದು ಷಡ್ಯಂತ್ರ ಎನ್ನುವ ಅನುಮಾನ ಇದೆ. ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ.
ರಾಜ್ಯಪಾಲರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸಂವಿಧಾನಾತ್ಮಕ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯದ ಹಿತದೃಷ್ಟಿಯಿಂದ ಮತ್ತು ಬಿಜೆಪಿ ಸರಕಾರದ ಲೂಟಿ ತಡೆಯುವ ದೃಷ್ಟಿಯಿಂದ ವಿಧಾನ ಮಂಡಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದ್ದೇವೆ. ಸ್ಪೀಕರ್ ವಿರುದ್ಧ ಯಾವುದೇ ದೂರು ನೀಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಡಾ| ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಹಿತ ಹಿರಿಯ ನಾಯಕರು ನಿಯೋಗದಲ್ಲಿದ್ದರು.