ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ರಾಜ್ಯದ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು ಚುನಾವಣಾ ಅಪರಾಧ ಮಾಡಿದ್ದು, ಅವರ ವಿರುದ್ಧ ಸೆಕ್ಷನ್ 171 ಬಿ, 171ಸಿ, 171 ಇ, 171 ಎಫ್ ಪ್ರಕಾರ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಬಿಜೆಪಿಯವರು ಭಾನುವಾರ ಎಲ್ಲ ಶಾಸಕರನ್ನು ಬೆಂಗಳೂರಿನ ಹೊಟೇಲ್ ಗೆ ಕರೆಸಿ ಆಹಾರ, ಪಾನೀಯ, ಮನರಂಜನೆ ನೀಡಿದ್ದಾರೆ. ಇದೆಲ್ಲದರ ವೆಚ್ಚವನ್ನು ಮುಖ್ಯಮಂತ್ರಿ ಹಾಗೂ ಬಿಜೆಪಿ ವಹಿಸಿಕೊಂಡಿದ್ದು, ಅವರಿಗೆ ಇದೇ ರೀತಿ ಮತದಾನ ಮಾಡಬೇಕು ಎಂದು ತರಬೇತಿ ನೀಡಲಾಗಿದೆ. ಜತೆಗೆ ಅವರನ್ನು ಕರೆದೊಯ್ಯಲು ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಆರೋಪಿಸಿದ್ದಾರೆ.
ಗ್ರಾಮ ಪಂಚಾಯತಿ ಮತದಾರರನ್ನು ಬಸ್ ನಲ್ಲಿ ಕೆರೆದೊಯ್ದಿದ್ದರೆ ಅವರ ವಿರುದ್ಧ ಕೇಸ್ ದಾಖಲಾಗುತ್ತಿತ್ತು. ಎನ್ ಡಿಎ ಅಭ್ಯರ್ಥಿ ಸಮ್ಮತಿ ಆಧಾರದ ಮೇಲೆ ಇದನ್ನು ಮಾಡಿದ್ದು, ಈ ವಿಚಾರವಾಗಿ ಪ್ರಕರಣ ದಾಖಲಿಸಬೇಕು. ಹೀಗಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಅಲ್ಲದೆ ರಾಜ್ಯ ವಿಧಾನಸೌದದಲ್ಲಿ ನಡೆದ ಮತದಾನದಲ್ಲಿ ಎನ್ ಡಿಎ ಅಭ್ಯರ್ಥಿಗೆ ದಾಖಲಾಗಿರುವ ಎಲ್ಲ ಮತಗಳನ್ನು ಅಸಿಂಧು ಎಂದು ಪರಿಗಣಿಸಬೇಕು. ಇಲ್ಲಿನ ಸಿಇಒ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಮ್ಮ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ರೀತಿ ಮಾಡುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ಚುನಾವಣಾ ಪ್ರಕ್ರಿಯೆಗೆ ಅಪಚಾರ ಎಸಗಲಾಗಿದೆ. ಸರ್ವಾಧಿಕಾರಿ ಮನಸ್ಥಿತಿ ಮೂಲಕ ಚುನಾವಣೆಯನ್ನು ತಮ್ಮ ಮೂಗಿನ ನೇರಕ್ಕೆ ತಿರುಗಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿಯು ಶಾಸಕರನ್ನು ಕರೆಸಿ ಹೊಟೇಲ್ ನಲ್ಲಿ ಇಟ್ಟಿರುವ ವಿಚಾರವಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ. ಯಾವ ಹೊಟೇಲ್ ನಲ್ಲಿ ಕೊಠಡಿ ಮಾಡಿದ್ದಾರೆ, ಅದರ ದಾಖಲೆಗಳನ್ನು ಪರಿಶೀಲಿಸಬಹುದು. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವಂತೆ ಮಾಧ್ಯಮಗಳು ಪ್ರಸಾರ ಮಾಡಿರುವ ಎಲ್ಲ ದಾಖಲೆಗಳನ್ನು ನಾವು ಸಲ್ಲಿಸಿದ್ದೇವೆ. ಅಧಿಕಾರಿಗಳು ಇದನ್ನು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸುತ್ತಾರೆ ಎಂದು ಭಾವಿಸಿದ್ದೇವೆ ಎಂದು ಹೇಳಿದ್ದಾರೆ.