ಹೊಸದಿಲ್ಲಿ: ಇಂಡಿಯಾ ಹೆಸರಿನಲ್ಲಿ ಪ್ರತಿಪಕ್ಷಗಳು ಎನ್‌ಡಿಎ ವಿರುದ್ಧ ಪೈಪೋಟಿಗೆ ಇಳಿದಿವೆ. ಇದರ ಬೆನ್ನಲ್ಲೇ ಭಿನ್ನಮತಗಳೂ ಜೋರಾಗಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯಯಲ್ಲಿ ಎಲ್ಲ 7 ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಹಾಕಲಿದೆ ಎಂದು ನಾಯಕಿ ಅಲ್ಕಾ ಲಾಂಬಾ ಹೇಳಿದ್ದಾರೆ. ಇದು ಆಮ್ ಆದ್ಮಿ ಪಕ್ಷಕ್ಕೆ ಸಿಟ್ಟು ತರಿಸಿದೆ. ಇಂಡಿಯಾ ಸಭೆಗಳಲ್ಲಿ ಭಾಗವಹಿಸುವುದರಲ್ಲಿ ಯಾವುದೇ ಅರ್ಥವೂ ಇಲ್ಲ ಎಂದು ಆಪ್ ನಾಯ ಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಕಾಂಗ್ರೆಸ್ ದಿಲ್ಲಿಯ ಘಟಕ ಬುಧವಾರ 3 ಗಂಟೆಗಳ ದೀರ್ಘ ಸಭೆ ನಡೆಸಿತ್ತು. ಆ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ದೀಪಕ್ ಬಬರಿಯ ಪಾಲ್ಗೊಂಡಿದ್ದರು. ಸುದೀರ್ಘ ಮಾತುಕತೆಯ ನಂತರ, ಎಲ್ಲ 7 ಸ್ಥಾನಗಳಿಗೆ ಸ್ಪರ್ಧಿಸಲು ಸೂಚಿಸಲಾಗಿದೆ. ಆ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮವಹಿಸಬೇಕೆಂದು ತಿಳಿಸಲಾಗಿದೆ ಎಂದು ಅಲ್ಕಾ ಹೇಳಿದ್ದಾರೆ.
ಇದರಿಂದ ಸಿಟ್ಟಾಗಿರುವ ಆಪ್ ನಾಯಕಿ ಪ್ರಿಯಾಂಕಾ ಕಕ್ಕರ್, ಕಾಂಗ್ರೆಸ್ ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ತೀರ್ಮಾನಿಸಿದ್ದರೆ, ಮುಂದಿನ ಇಂಡಿಯಾ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ಯಾವುದೇ ಅರ್ಥವಿಲ್ಲ. ನಮ್ಮ ಅಗ್ರ ನಾಯಕರು ಇಂಡಿಯಾ ಸಭೆಯಲ್ಲಿ ಪಾಲ್ಗೊಳ್ಳಬೇಕೆ, ಬೇಡವೇ ಎಂದು ತೀರ್ಮಾನಿಸಲಿದ್ದಾರೆ ಎಂದಿದ್ದಾರೆ.
ಆದರೆ ಈ ಬಗ್ಗೆ ಕಾಂಗ್ರೆಸ್ ಅಗ್ರ ನಾಯಕತ್ವ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಕಾಂಗ್ರೆಸ್ ಈ ನಿರ್ಧಾರ ಮಾಡಿದ್ದೇ ಆದರೆ, ಇಂಡಿಯಾ ಮೈತ್ರಿಕೂಟದಲ್ಲಿ ದೊಡ್ಡ ಬಿರುಕುಂಟಾಗಬಹುದು. ಅದು ಅಪಾಯದಲ್ಲೂ ಸಿಲುಕಬಹುದು.