Advertisement

ರೈತರ ಸಾಲ ಮನ್ನಾಗೆ ಸನಿಹ

06:00 AM Jun 30, 2018 | |

ಬೆಂಗಳೂರು: ರೈತರ ಸಾಲ ಮನ್ನಾ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸುವ ಸಮಿತಿಯೂ ಒಮ್ಮತಕ್ಕೆ ಬಂದಿದ್ದು, 2018 ರ ಮೇ 31 ರವರೆಗೆ ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಬೆಳೆಸಾಲ ಮನ್ನಾ ಮಾಡಲು ಶಿಫಾರಸು ಮಾಡಿದೆ.

Advertisement

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎಂ.ವೀರಪ್ಪ ಮೊಯಿಲಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸುವ ಸಮಿತಿ ಸಭೆಯಲ್ಲಿ ಈ ಕುರಿತು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದ್ದು,  ಈ ತೀರ್ಮಾನವನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿಗೆ ವರದಿ ಒಪ್ಪಿಸಲಿದೆ. ಭಾನುವಾರ ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳಲಿದ್ದು, ಬಜೆಟ್‌ನಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ.

ಸಭೆಯ ನಂತರ ಮಾತನಾಡಿದ ಸಮಿತಿ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ, ಮೂರನೇ ಬಾರಿಗೆ ಸಿಎಂಪಿ ಸಭೆ ನಡೆಸಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಜಾರಿಯಾಗಬೇಕಿರುವ ಕಾರ್ಯಕ್ರಮಗಳ ಕುರಿತು ಅಂತಿಮ ಸಮಾಲೋಚನೆ ನಡೆಸಲಾಗಿದೆ. ರೈತರ ಸಾಲ ಮನ್ನಾ ಮಾಡುವ ಕುರಿತು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. 2018 ರ ಮೇ 31 ರ ವರೆಗೆ ರೈತರು ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ಪಡೆದ ಬೆಳೆ ಸಾಲ ಮನ್ನಾ ಮಾಡಲು ಸಮಿತಿ ಒಮ್ಮತದ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರಣಾಳಿಕೆಗಳಲ್ಲಿನ ಕಾರ್ಯಕ್ರಮಗಳನ್ನು ಸಮತೋಲನ ಮಾಡಿ ಚರ್ಚಿಸಲಾಗಿದೆ. ಸಾಲ ಮನ್ನಾ ವಿಷಯದಲ್ಲಾಗಲಿ, ಪಕ್ಷದ ಕಾರ್ಯಕ್ರಮ ಸೇರಿಸುವ ವಿಷಯದಲ್ಲಾಗಲಿ ಇಬ್ಬರ ನಡುವೆ ಯಾವುದೇ ಸಂಘರ್ಷ ಇಲ್ಲ. ನಮ್ಮ ಕಾರ್ಯಕ್ರಮಗಳನ್ನು ಜೆಡಿಎಸ್‌ನವರು ಒಪ್ಪಿಕೊಂಡಿದ್ದಾರೆ. ಜೆಡಿಎಸ್‌ ಕಾರ್ಯಕ್ರಮಗಳನ್ನು ನಾವು ಒಪ್ಪಿದ್ದೇವೆ. ಯೋಜನೆಗಳಿಗೆ ಹಣಕಾಸು ಹೊಂದಾಣಿಕೆ ಮಾಡುವ ತೀರ್ಮಾನವನ್ನು ಮುಖ್ಯಮಂತ್ರಿಗೆ ಬಿಡಲಾಗಿದೆ. ಐದು ವರ್ಷಕ್ಕೆ ಅನ್ವಯವಾಗುವಂತೆ ಎರಡೂ ಪ್ರಣಾಳಿಕೆಗಳಲ್ಲಿನ ಯೋಜನೆಗಳನ್ನು ಜಾರಿಗೊಳಿಸಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ವರದಿಯನ್ನು ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಸಚಿವರಾದ ಡಿ.ಕೆ. ಶಿವಕುಮಾರ್‌, ಆರ್‌.ವಿ.ದೇಶಪಾಂಡೆ, ಎಚ್‌.ಡಿ. ರೇವಣ್ಣ ಹಾಗೂ ಬಂಡೆಪ್ಪ ಕಾಶಂಪೂರ್‌ ಪಾಲ್ಗೊಂಡಿದ್ದರು.

Advertisement

ಇದಕ್ಕೂ ಮೊದಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್‌ ಪಕ್ಷದ ಯೋಜನೆಗಳು ಏನಿರಬೇಕು ಎನ್ನುವ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹಾಗೂ ಸಿಎಂಪಿ ಸಮಿತಿ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿ ಚರ್ಚಿಸಿದರು.

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಜಾರಿಗೊಳಿಸಿರುವ ಜನಪ್ರಿಯ ಯೋಜನೆಗಳನ್ನು ಮುಂದುವರೆಸುವಂತೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಭೆಯಲ್ಲಿ ಪಟ್ಟು ಹಿಡಿಯಲು ಸೂಚಿಸಲಾಗಿತ್ತು. ಅಲ್ಲದೇ ರೈತರ ಸಾಲ ಮನ್ನಾ ಮಾಡುವ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಷರತ್ತು ವಿಧಿಸಲು ಸಭೆಯಲ್ಲಿ ಸೂಚಿಸಲಾಗಿತ್ತು. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿರುವುದರಿಂದ ಕಾಂಗ್ರೆಸ್‌ ಪಕ್ಷಕ್ಕೆ ಮತ ತಂದು ಕೊಡುವ ಜನಪ್ರಿಯ ಯೋಜನೆಗಳು ಸೇರಿಸಲು ಸಲಹೆ ನೀಡಲಾಯಿತು.

ವೃದ್ಧಾಪ್ಯ ವೇತನ ಹೆಚ್ಚಳಕ್ಕೆ ಬ್ರೇಕ್‌
ಈ ಮಧ್ಯೆ ಜೆಡಿಎಸ್‌ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಹಿರಿಯ ನಾಗರಿಕರಿಗೆ 6 ಸಾವಿರ ವೃದ್ಧಾಪ್ಯ ವೇತನ ನೀಡುವ ಭರವಸೆಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿಯಲ್ಲಿ ತಡೆಯೊಡ್ಡಲಾಗಿದೆ ಎಂದು ತಿಳಿದು ಬಂದಿದೆ. ಜೆಡಿಎಸ್‌ ಪ್ರಣಾಳಿಕೆಯಲ್ಲಿನ ಪ್ರಮುಖ ರೈತರ ಸಾಲ ಮನ್ನಾ, ಗರ್ಭಿಣಿ ಮಹಿಳೆಯರಿಗೆ 6 ಸಾವಿರ ಮಾಸಾಶನ ಹಾಗೂ ಹಿರಿಯ ನಾಗರಿಕರಿಗೆ 6 ಸಾವಿರ ವೃದ್ಧಾಪ್ಯ ವೇತನ ನೀಡುವ ಭರವಸೆಗಳಲ್ಲಿ ಎರಡು ಭರವಸೆಗಳನ್ನು ಒಪ್ಪಿಕೊಂಡಿದ್ದು, ಹಿರಿಯ ನಾಗರಿಕರಿಗೆ ಮಾಸಿಕ 6 ಸಾವಿರ ವೃದ್ಧಾಪ್ಯ ವೇತನ ನೀಡುವ ಕಾರ್ಯಕ್ರಮವನ್ನು ಈ ವರ್ಷದ ಬಜೆಟ್‌ನಲ್ಲಿ ಘೋಷಣೆ ಮಾಡದಿರಲು ನಿರ್ಧರಿಸಲಾಗಿದೆ.

ಅಲ್ಲದೇ ಬೃಹತ್‌ ನೀರಾವರಿ ಯೋಜನೆಗಳಿಗೆ ಎರಡೂ ಪಕ್ಷಗಳು ಐದು ವರ್ಷದಲ್ಲಿ ಹಣ ಮೀಸಲಿಡಲು ಘೋಷಿಸಿರುವ ಭರವಸೆಯಲ್ಲಿ ವ್ಯತ್ಯಾಸ ಆಗಿದ್ದು,  ಜೆಡಿಎಸ್‌ ಐದು ವರ್ಷದಲ್ಲಿ 1.50 ಲಕ್ಷ ಕೋಟಿ ನೀಡುವುದಾಗಿ ಭರವಸೆ ನೀಡಿತ್ತು. ಕಾಂಗ್ರೆಸ್‌ 1 ಲಕ್ಷ ಕೋಟಿ ಹಣ ಮೀಸಲಿಡುವುದಾಗಿ ಹೇಳಿತ್ತು. ಹೀಗಾಗಿ ಸಿಎಂಪಿ ಸಭೆಯಲ್ಲಿ ಎರಡೂ ಪಕ್ಷಗಳ ಪ್ರಣಾಳಿಕೆಗಳನ್ನು ಹೊಂದಾಣಿಕೆ ಮಾಡಿ ಐದು ವರ್ಷದಲ್ಲಿ ನೀರಾವರಿ ಯೋಜನೆಗಳಿಗೆ 1.25 ಲಕ್ಷ ರೂಪಾಯಿ ಮೀಸಲಿಡಲು ತೀರ್ಮಾನಿಸಲಾಗಿದೆ. ಇದಲ್ಲದೆ ಹಿಂದಿನ ಸರ್ಕಾರದ ಎಲ್ಲ ಯೋಜನೆಗಳನ್ನು ಯಥಾ ಸ್ಥಿತಿಯಲ್ಲಿ ಮುಂದುವರೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ರೇವಣ್ಣ ಸಲಹೆ
2017 ಡಿಸೆಂಬರ್‌ವರೆಗೆ ರೈತರು ಮಾಡಿರುವ ಬೆಳೆ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧರಿಸಿದ್ದರು. ಆದರೆ, ಸಿಎಂಪಿ ಸಭೆಯಲ್ಲಿ 2018ರ ಮಾರ್ಚ್‌ 31 ರ ವರೆಗೆ ರೈತರು ಪಡೆದ ಸಾಲವನ್ನು ಮನ್ನಾ ಮಾಡಲು ಚಿಂತನೆ ನಡೆಸಲಾಗಿತ್ತು. ಆದರೆ, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ 2018 ರ ಮೇ 31 ರ ವರೆಗೂ ಅವಧಿ ವಿಸ್ತರಿಸುವಂತೆ ಸಲಹೆ ನೀಡಿದರು ಎನ್ನಲಾಗಿದೆ. ಹೀಗಾಗಿ 2018 ರ ಮೇ 31 ರ ವರೆಗೂ ರೈತರು ಪಡೆದ ಬೆಳೆ ಸಾಲ ಮನ್ನಾ ಮಾಡಲು ಸಮಿತಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ಮುಂದುವರೆಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಆರ್ಥಿಕ ಹೊರೆಯಾಗುತ್ತಿದ್ದರೆ ಅಂತಹ ಯೋಜನೆಗಳ ಬಗ್ಗೆ ಸಮನ್ವಯ ಸಮಿತಿಯಲ್ಲಿ ಚರ್ಚಿಸುತ್ತೇವೆ. ರಾಜಕೀಯ ವಿಚಾರಗಳನ್ನು ಪಕ್ಕಕ್ಕಿಟ್ಟು ಅಭಿವೃದ್ಧಿ ದೃಷ್ಠಿಯಿಂದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ.
– ಡಾ.ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ

ಕಾಂಗ್ರೆಸ್‌ ಪಕ್ಷದ ಯಾವುದೇ ಕಾರ್ಯಕ್ರಮಗಳು ಬದಲಾಗುವುದಿಲ್ಲ. ಪ್ರಣಾಳಿಕೆಯಲ್ಲಿರುವ ಅಂಶಗಳು ಜಾರಿಯಾಗಲಿವೆ. ಅದರ ಬಗ್ಗೆ ಯಾವುದೇ ಅನುಮಾನ ಬೇಡ. ಶಾಸಕಾಂಗ ಪಕ್ಷದ ನಾಯಕರ ಬದಲಾವಣೆ ಮಾಡುತ್ತಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು.
– ಆರ್‌.ವಿ. ದೇಶಪಾಂಡೆ, ಕಂದಾಯ ಸಚಿವ.

ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ  ಸರ್ಕಾರ ಯಾವುದೇ ತಾರತಮ್ಯ ಮಾಡಿಲ್ಲ. ಸರ್ಕಾರ ಎಲ್ಲರನ್ನೂ ಸಮಾನವಾಗಿಯೇ ಕಾಣುತ್ತದೆ. ಕುರುಬ ಸಮಾಜದ ಸ್ವಾಮೀಜಿಗಳ ಆರೋಪದಲ್ಲಿ ಹುರುಳಿಲ್ಲ.
– ಡಿ.ಕೆ. ಶಿವಕುಮಾರ್‌, ಜಲ ಸಂಪನ್ಮೂಲ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next