ಗುಂಡ್ಲುಪೇಟೆ: ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ಗಣೇಶಪ್ರಸಾದ್ ಗೆಲುವು ಸಾಧಿಸುತ್ತಿದ್ದಂತೆ ಕ್ಷೇತ್ರಾದ್ಯಂತ ಕಾಂಗ್ರೆಸ್ ಕಾರ್ಯ ಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
ಶನಿವಾರ ಬೆಳಗ್ಗೆ 10 ಗಂಟೆ ಸುಮಾರು ಹಲವು ಸುತ್ತುಗಳ ಮತ ಎಣಿಕೆಯಲ್ಲಿ ಎಚ್. ಎಂ.ಗಣೇಶಪ್ರಸಾದ್ ಮುನ್ನಡೆ ಸಾಧಿಸುತ್ತಿದ್ದಂತೆ ಪಟ್ಟಣದ ಕಾಂಗ್ರೆಸ್ ಕಚೇರಿಯತ್ತ ಸಾವಿರಾರು ಕಾರ್ಯಕರ್ತರು ಧಾವಿಸಿ ಪಟಾಕಿ ಸಿಡಿ, ಕಾಂಗ್ರೆಸ್ ಬಾವುಟ ಹಾರಿಸಿ ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ, ಗಣೇಶಪ್ರಸಾದ್ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ಗಣೇಶಪ್ರಸಾದ್ ಪ್ರತಿ ಸ್ಪರ್ಧಿ ಸಿ.ಎಸ್ .ನಿರಂಜನಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದಾರೆ ಎಂಬ ಮಾಹಿತಿ ಹೊರ ಬಿದ್ದ ಕೂಡಲೇ ಕಾಂಗ್ರೆಸ್ ಕಚೇರಿ ಮುಂದೆ ಡಿ.ಜೆ. ಹಾಕಿ ಮಹಿಳೆಯರು, ವಯಸ್ಕರು, ಯುವ ಕಾಂಗ್ರೆಸ್ ಕಾರ್ಯಕರ್ತರು ಬಣ್ಣ ಹಾಕಿಕೊಂಡು ಕುಣಿದು ಕುಪ್ಪಳಿಸಿದರು. ಬಾವುಟ ಹಿಡಿದು ಕಾಂಗ್ರೆಸ್ ಪರ ಘೋಷಣೆ: ಗಣೇಶಪ್ರಸಾದ್ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ಹಾಗೂ ಕಾರುಗಳಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಬೀಸುತ್ತ ಸಾಗುವ ಮೂಲಕ ಕಾಂಗ್ರೆಸ್ ಪಕ್ಷದ ಪರ ಘೋಷಣೆ ಕೂಗಿ ಸಂಭ್ರಮಿ ಸಿದರು. ಜೊತೆಗೆ ತಾಲೂಕಿನ ಹಲವು ಗ್ರಾಮಗಳ ಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸುವ ಮೂಲಕ ಗೆಲುವನ್ನು ಸಂಭ್ರಸಿದರು.
ಗಣೇಶಪ್ರಸಾದ್‌ಗೆ ಅದ್ಧೂರಿ ಸ್ವಾಗತ: ವಿಧಾನ ಸಭಾ ಚುನಾವಣೆಯಲ್ಲಿ ಎಚ್.ಎಂ.ಗಣೇಶಪ್ರಸಾದ್ ಗೆಲುವು ಸಾಧಿಸಿ ತಾಲೂಕಿಗೆ ಆಗಮಿಸುತ್ತಿದ್ದಂತೆ ತೆರಕಣಾಂಬಿಯಲ್ಲಿ ಮಳೆಯ ನಡುವೆಯೂ ಕಾಂಗ್ರೆಸ್ ಮುಖಂಡರು ಪಟಾಕಿ ಸಿಡಿಸಿ ಹೂ ಮಳೆಗೈಯುವ ಮೂಲಕ ಅದ್ಧೂರಿಯಿಂದ ಸ್ವಾಗತ ಕೋರಿ ಬರಮಾಡಿಕೊಂಡರು. ನಂತರ ಪಟ್ಟಣಕ್ಕೆ ಆಗಮಿಸಿದ ಗಣೇಶಪ್ರಸಾದ್ ಅವರಿಗೆ ಕೋಡಹಳ್ಳಿ ಸರ್ಕಲ್ ಬಳಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಬೃಹತ್ ಹೂವಿನ ಹಾರ ಹಾಕಿ ಪಟಾಕಿ ಸಿಡಿಸಿ ಸ್ವಾಗತಿಸಿದರು.
ತದ ನಂತರ ತೆರೆದ ವಾಹನದಲ್ಲಿ ಗಣೇಶಪ್ರಸಾದ್ ತಮ್ಮ ಅಪಾರ ಬೆಂಬಲಿಗರೊಂದಿಗೆ ರಾಷ್ಟ್ರೀಯ ಹೆದ್ದಾರಿ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಹಾಗು ಹಳೇ ಬಸ್ ನಿಲ್ದಾಣದ ಮೂಲಕ ಮೆರವಣಿಗೆ ನಡೆಸಿ ಕಾಂಗ್ರೆಸ್ ಕಚೇರಿಗೆ ಧಾವಿಸಿದರು.