Advertisement

Congress ಇಂದು ಸಿಇಸಿ ಸಭೆ; ಮೊದಲ ಪಟ್ಟಿ ಅಂತಿಮ?: ಅಮೇಠಿಯಿಂದ ರಾಹುಲ್‌

12:44 AM Mar 07, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಬಿಜೆಪಿಯು 195 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಳಿಕ, ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಪಕ್ಷದ ಕೇಂದ್ರ ಚುನಾವಣ ಸಮಿತಿ(ಸಿಇಸಿ) ಸಭೆಯನ್ನು ಗುರುವಾರ ಆಯೋಜಿಸಲಾಗಿದೆ. ಈ ವೇಳೆ, ಪಕ್ಷವು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲಿದೆ.

Advertisement

“”ಕಾಂಗ್ರೆಸ್‌ ಕೇಂದ್ರ ಚುನಾವಣ ಸಮಿತಿ ಸಭೆಯು ಗುರುವಾರ ನಡೆಯ­ಲಿದ್ದು, ಲೋಕಸಭೆಗೆ ಅಭ್ಯರ್ಥಿಗಳನ್ನು ನಿರ್ಧರಿಸಲಿದೆ” ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಸಂವ­ಹನ ವಿಭಾಗದ ಮುಖ್ಯಸ್ಥ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾಂಗ್ರೆಸ್‌ ಇದೂವರೆಗೆ ಯಾವುದೇ ಅಭ್ಯರ್ಥಿಗಳನ್ನು ಹೆಸರಿಸಿಲ್ಲ. ಕರ್ನಾಟಕವು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಲಾಗುತ್ತಿದ್ದು, ಅಂತಿಮವಾಗಿ ಕೇಂದ್ರ ಚುನಾವಣ ಸಮಿತಿಯು ಪಟ್ಟಿಯನ್ನು ಬಿಡುಗಡೆ ಮಾಡಲಿದೆ.

ಅಮೇಠಿಯಿಂದ ರಾಹುಲ್‌ ಗಾಂಧಿ ಸ್ಪರ್ಧೆ
ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಕೇರಳದ ವಯನಾಡ್‌ ಮತ್ತು ಉ.ಪ್ರ.ದ ಅಮೇಠಿಯಿಂದಲೂ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಜತೆಗೆ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡುವುದು ನಿಚ್ಚಳವಾಗಿದೆ. ದಿಲ್ಲಿಯಲ್ಲಿ ಕಾಂಗ್ರೆಸ್‌ ವರಿಷ್ಠರ ಜತೆಗೆ ಸಭೆ ನಡೆಸಿದ ಅಮೇಠಿಗೆ ವಾಪಸಾದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪ್ರದೀಪ್‌ ಸಿಂಘಾಲ್‌ ಈ ಘೋಷಣೆ ಮಾಡಿದ್ದಾರೆ. ರಾಹುಲ್‌ ಗಾಂಧಿ 2002ರಿಂದ ಅಮೇಠಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದರೆ 2019 ಸ್ಮತಿ ಇರಾನಿ ಎದುರು ಸೋಲು ಕಂಡಿದ್ದರು.

Advertisement

ರಾಹುಲ್‌ಗೆ ಇ.ಸಿ. ಎಚ್ಚರಿಕೆ

ಸಾರ್ವಜನಿಕ ಸಭೆ, ರ್ಯಾಲಿಗಳಲ್ಲಿ ನೀಡುವ ಹೇಳಿಕೆ ಬಗ್ಗೆ ಜಾಗರೂಕತೆ ವಹಿಸಿ, ಇಲ್ಲವಾದಲ್ಲಿ ತಕ್ಕ ಪರಿಣಾಮ ಎದುರಿಸಬೇಕಾ­ಗು­ತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಚುನಾವಣೆ ಆಯೋಗ (ಇ.ಸಿ) ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಈ ಹಿಂದೆ ರಾಹುಲ್‌ ಪನೌತಿ (ಕೆಟ್ಟ ಶಕುನ), ಪಿಕ್‌ಪಾಕೆಟ್‌ ಪದಗಳನ್ನು ಬಳಸಿದ್ದ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ ಎಂದೂ ತಿಳಿದುಬಂದಿದೆ. ರಾಜ­ಕೀಯ ಪಕ್ಷಗಳಿಗೆ ಹಾಗೂ ಈ ಹಿಂದೆ ವಿವಾ­ದಾತ್ಮಕ ಹೇಳಿಕೆಗಳನ್ನು ನೀಡಿ, ಆಯೋಗದಿಂದ ನೋಟಿಸ್‌ ಜಾರಿಗೊ ಳಿಸಲಾಗಿದ್ದ ರಾಜಕೀಯ ನಾಯಕರಿಗೆ ಮಾ.1ರಂದು ಚುನಾವಣೆ ಆಯೋಗ ಈ ಎಚ್ಚರಿಕೆಗಳನ್ನು ರವಾನಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಪನೌತಿ- ಪಿಕ್‌ಪಾಕೆಟ್‌ ವಿಚಾರವಾಗಿ ರಾಹುಲ್‌ ಅವರಿಗೆ ಇ.ಸಿ. ನೋಟಿಸ್‌ ಜಾರಿಗೊಳಿಸಿತ್ತು.

ಅಮೇಠಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಅಂತಿಮಗೊಳಿಸಲು ವಿಳಂಬ ಮಾಡುತ್ತಿದೆ. ಇದು ಕಾಂಗ್ರೆಸ್‌ನ ಸೋಲಿನ ಮುನ್ಸೂಚನೆಯಾಗಿದೆ.
ಸ್ಮತಿ ಇರಾನಿ, ಅಮೇಠಿ ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next