ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಚುನಾವಣೆ ಸಂದರ್ಭವಾಗಿರುವ ಕಾರಣ ಪದೇ ಪದೇ ಬರುತ್ತಿದ್ದಾರೆ. ಅವರು ಎಷ್ಟೇ ಬಾರಿ ಬಂದರೂ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಸಿ. ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಬದನಗುಪ್ಪೆ ಹಾಗೂ ಹೆಗ್ಗೊಠಾರ ಗ್ರಾಪಂ ಕೇಂದ್ರ ಮತ್ತು ಬೆಂಡರವಾಡಿ, ಮೇಗಲ ಹುಂಡಿ, ಮುತ್ತಿಗೆ, ಬಿ. ಮಲ್ಲಯ್ಯನಪುರ, ಪುಣ್ಯದ ಹುಂಡಿ ಗ್ರಾಮಗಳಲ್ಲಿ ಭಾನುವಾರ ಮನೆಮನೆಗೆ ತೆರಲಿ ಮತಯಾಚಿಸಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಅನೇಕ ಸಮೀಕ್ಷೆಗಳ ವರದಿಯನ್ನು ನೋಡಿದರು ಸಹ ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತ ದೊರೆಯಲಿದೆ ಎಂಬ ಮಾಹಿತಿ ಇದೆ. ಹೀಗಾಗಿ ಹೇಗಾದರೂ ಮಾಡಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ಪದೇ ಪದೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ್ಕೆ ಬರುತ್ತಿದ್ದಾರೆ. ಇನ್ನು ಚುನಾವಣಾ ಪ್ರಚಾರಕ್ಕೆ 20 ಬಾರಿ ಬರುತ್ತಾರೆ ಎಂಬ ಮಾಹಿತಿ ಇದೆ. ನಮ್ಮ ರಾಜ್ಯದ ಜನರು ದಡ್ಡರಲ್ಲ. ಬಿಜೆಪಿ ಭ್ರಷ್ಟ ಆಡಳಿತವನ್ನು ನೋಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂದರು.
ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷ ಟಿಕೆಟ್ ಘೋಷಣೆ ಮಾಡಿ, ಚುನಾವಣಾ ಕಣಕ್ಕೆ ಇಳಿಸಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಪ್ರಚಾರವನ್ನೂ ಸಹ ಆರಂಭಿಸಿದ್ದೇವೆ. ಆದರೆ ಉಳಿದ ಪಕ್ಷಗಳಲ್ಲಿ ಇನ್ನು ಸಹ ಟಿಕೆಟ್ ಘೋಷಣೆ ಮಾಡಲು ಮೀನಾಮೇಷ ಎಣಿಸುತ್ತಿ ದ್ದಾರೆ. ಇದರ ಅರ್ಥ ಇವರಾರು ಗೆಲ್ಲುವುದಿಲ್ಲ ಎಂದು ಆ ಪಕ್ಷಗಳ ವರಿಷ್ಠರು ಭಾವಿಸಿದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆ: ಸಂಸದರಾಗಿದ್ದ ಅವರ ಅವಧಿಯಲ್ಲಿ ದಿ. ಆರ್. ಧ್ರುವನಾರಾಯಣ ಅವರು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ನಮ್ಮ ಕಣ್ಮುಂದೆ ಇವೆ. ರಾಷ್ಟ್ರೀಯ ಹೆದ್ದಾರಿಗಳ ಮಂಜೂರಾತಿ ಮತ್ತು ಅಭಿವೃದ್ಧಿ, ಕೇಂದ್ರೀಯ ವಿದ್ಯಾಲಯ, ಕೃಷಿ ಕಾಲೇಜು, ಕಾನೂನು ಕಾಲೇಜು, ಪಾಸ್‌ಪೋರ್ಟ್ ಕೇಂದ್ರ ಸೇರಿದಂತೆ ಕೇಂದ್ರದ ವಿವಿಧ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದಾರೆ. ಅಲ್ಲದೇ, ಮೂರು ಬಾರಿ ನಾನು ಶಾಸಕನಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಚಾಮರಾಜನಗರದಲ್ಲಿ ರಸ್ತೆಗಳ ಅಗಲೀಕರಣ, ಸರ್ಕಾರಿ ವೈದ್ಯಕೀಯ ಕಾಲೇಜು, ಇಂಜಿನಿಯ ರಿಂಗ್ ಕಾಲೇಜು, ಸಿಮ್ಸ್ ಆಸ್ಪತ್ರೆ, ಹಳ್ಳಿಗಳಿಗೆ ನದಿಮೂಲದಿಂದ ಕುಡಿಯುವ ನೀರಿನ ಸೌಲಭ್ಯ, ಚಾಮರಾಜೇಶ್ವರ ದೇವಸ್ಥಾನದ ಜೀರ್ಣೋದ್ದಾರ, ನೂತನ ರಥ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ. ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನಾನು ಕೈಗೊಂಡಿರುವ ಕೆಲಸಗಳೇ ನನ್ನ ಗೆಲುವಿಗೆ ಕಾರಣವಾಗಲಿದೆ ಎಂದು ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಹಾಗೂ ವಾಟಾಳ್ ಪಕ್ಷ ತೊರೆದು ಮುಖಂಡರಾದ ಹೆಗ್ಗೊಠಾರ ಕುಮಾರ್, ರಾಮಯ್ಯ, ಬಿ. ಮಂಜು, ಧ್ರುವ, ಅಂಬಿಕಾ ವಿಲ್ಸನ್, ರವಿ ಅನೇಕರು ತಮ್ಮ ಬೆಂಬಲಿಗ ರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಪು. ಶ್ರೀನಿವಾಸನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ನಾಗೇಂದ್ರ, ನಿರ್ದೇಶಕ ಗುರುಸ್ವಾಮಿ, ಮುಖಂಡರಾದ ಪಿ.ಶೇಖರ್, ಬಸುಮರಿ, ಕೃಷ್ಣ, ಮುತ್ತಿಗೆ ದೊರೆ, ಮಹದೇವಪ್ರಸಾದ್, ನಟರಾಜು, ದೊರೆರಾಜು, ಮಹದೇವಸ್ವಾಮಿ ಇದ್ದರು.