Advertisement

5 ವರ್ಷದ ಹಿಂದೆ ಕಳೆದುಕೊಂಡ ಅರಶಿನ-ಕುಂಕುಮವನ್ನು ಮತದ ರೂಪದಲ್ಲಿ ಭಿಕ್ಷೆಯಾಗಿ ನೀಡಿ: ಕುಸುಮಾ

10:32 PM Nov 01, 2020 | sudhir |

ಬೆಂಗಳೂರು: ನಾನು ಐದು ವರ್ಷಗಳ ಹಿಂದೆ ಕಳೆದುಕೊಂಡಿರುವ ಅರಶಿನ-ಕುಂಕುಮವನ್ನು ಮತದ ಸ್ವರೂಪದಲ್ಲಿ ಭಿಕ್ಷೆಯಾಗಿ ನೀಡಿ. ನನ್ನ ಉಳಿದ ಬದುಕನ್ನು ನಿಮ್ಮ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ರಾಜರಾಜೇಶ್ವರಿ ನಗರ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಂದನೆ, ಅಪನಿಂದನೆಗಳಿಂದ ನೊಂದಿರುವ ಈ ವಿದ್ಯಾವಂತ ನಿಮ್ಮ ಮನೆ ಮಗಳನ್ನು 3ರಂದು ನೀವೆಲ್ಲರೂ ಉಡಿ ತುಂಬಿ ಹಾರೈಸಲಿದ್ದೀರಿ ಎಂಬ ನಂಬಿಕೆ ನನಗಿದೆ. ನನ್ನ ಜೀವನವನ್ನು ನಿಮ್ಮ ಸೇವೆಗೆ ಮೀಸಲಿಟ್ಟು ತೀರಿಸುವೆ ಎಂದು ಕುಸುಮಾ ಭಾವುಕರಾಗಿ ಹೇಳಿದರು.

ಕಳೆದ 20 ದಿನಗಳಿಂದ ನನ್ನ ಜೀವನದಲ್ಲಿ ಆಗಿರುವ ಬದಲಾವಣೆಗಳು ಎಲ್ಲರಿಗೂ ಗೊತ್ತಿದೆ. ನನ್ನ ಹೆಸರು ಚುನಾವಣೆ ಕಣದ ಮುನ್ನಲೆಗೆ ಬಂದ ಕ್ಷಣದಿಂದಲೂ ನನ್ನ ಮೇಲೆ ನಿರಂತರ ವಾಗ್ಧಾಳಿಗಳು, ಗದಾಪ್ರಹಾರ ನಡೆಯುತ್ತಲೇ ಇದೆ. ನನ್ನ ಗಂಡನ ಹೆಸರು ಬಳಸಬಾರದು ಅಂತೀರಿ. ನನ್ನ ಮೇಲೆ ಸುಳ್ಳು ಎಫ್ ಐಆರ್‌ ಹಾಕುತ್ತೀರಿ, ಪ್ರಚಾರಕ್ಕೆ ಅಡ್ಡಿಪಡಿಸಿದ್ದೀರಿ. ಅಲ್ಲದೆ ನಾನು ಪ್ರಚಾರಕ್ಕೆ ಹೋದ ಕೆಲವು ಮನೆಗಳಲ್ಲಿ, ನೀವು ನನ್ನ ಬಗ್ಗೆ ಆಡಿರುವ ಮಾತುಗಳು, ಬಳಸಿರುವ ಭಾಷೆ ಯಾವುದೇ ಹೆಣ್ಣು ಕೇಳುವಂಥದ್ದಲ್ಲ. ಅಂಥ ಚುಚ್ಚು ಮಾತುಗಳನ್ನು ಆಡಿದ್ದೀರಿ. ನಾನು ನಿಮಗೇನು ಅನ್ಯಾಯ ಮಾಡಿದ್ದೇ ಮುನಿರತ್ನ ಅಣ್ಣನವರೇ.?ಗಂಡ ಸತ್ತ ಮುಂಡೆಗೆ ಯಾಕೆ ರಾಜಕೀಯ ಅಂತಾ ಕೇಳಿದ್ದೀರಿ. ಗಂಡನನ್ನು ತಿಂದವಳಿಗೆ ಯಾಕೆ ರಾಜಕೀಯ ಅಂತಾ ಹೇಳಿದ್ದೀರಿ. ಇದು ನಿಮಗೆ ಶೋಭೆ ತರುತ್ತದೆಯೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಕೋವಿಡ್ ಪ್ರಕರಣದಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ! 3,652 ಹೊಸ ಪ್ರಕರಣ ಪತ್ತೆ

ಮಾಧ್ಯಮಗಳ ಮೂಲಕ ಮುನಿರತ್ನರನ್ನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ನಿಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.  ನನಗೆ ಬಂದ ಪರಿಸ್ಥಿತಿ ಆ ಮಕ್ಕಳಿಗೆ ಬರುವುದು ಬೇಡ. ಒಂದು ವೇಳೆ ಅವರಿಗೆ ಈ ಪರಿಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದಿರಿ? ಅವರಿಗೂ ಹೀಗೆ ನಿಂದಿಸುತ್ತಿದ್ದಿರಾ ? ನಾನು ಯಾವ ತಪ್ಪು ಮಾಡಿದ್ದೇನೆ? ಗಂಡ ಸತ್ತ ನಂತರ ಯಾವ ಹೆಣ್ಣು ಬದುಕಬಾರದಾ? ರಾಜಕೀಯಕ್ಕೆ ಬರಬಾರದಾ? ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬಾರದಾ? ಜನರ ನೋವಿಗೆ ಸ್ಪಂದಿಸಬಾರದಾ? ಸಮಾಜದಲ್ಲಿ ಒಬ್ಬ ಸುಶಿಕ್ಷಿತ ಹೆಣ್ಣಿಗೆ ಇಷ್ಟು ಕೆಟ್ಟ ಪದ ಬಳಸುತ್ತೀರಿ ಎಂದರೆ ಬೇರೆ ಹೆಣ್ಣುಗಳ ಕಥೆ ಏನು? ಅವರನ್ನು ನೀವು ಹೇಗೆ ನಡೆಸಿಕೊಂಡಿರಬೇಡಾ ಎಂದು ವಾಗ್ಧಾಳಿ ಡನೆಸಿದರು.

Advertisement

ಎರಡು ಬಾರಿ ಶಾಸಕರಾಗಿರುವ ನೀವು ಈ ರೀತಿ ಮಾತನಾಡಿದರೆ ಜನರನ್ನು ಹೇಗೆ ರಕ್ಷಿಸುತ್ತೀರಿ? ಹೆಣ್ಣು ಮಕ್ಕಳ ಕತೆ ಏನು? ನನ್ನ ಅನುಭವ ಪ್ರಶ್ನೆ ಮಾಡುತ್ತೀರಿ. ನನ್ನ ತಂದೆಯವರ ರಾಜಕಾರಣವನ್ನು ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದಿದ್ದೇನೆ. ಗಂಡನ ಜತೆ ಬೇರೆ, ಬೇರೆ ಪ್ರದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಜನರ ಸಮಸ್ಯೆ ನೋಡಿದ್ದೇನೆ. ನನ್ನ ತಂದೆ, ತಾಯಿಗೆ ಹೊರೆಯಾಗದೆ ನನ್ನ ಕಾಲಿನ ಮೇಲೆ ನಾನೇ ನಿಂತುಕೊಂಡು ಜೀವಿಸುತ್ತಿದ್ದೇನೆ. ಆಗಬಾರದ ವಯಸ್ಸನಲ್ಲೇ ನನಗಾದ ಆಘಾತದಿಂದ ಹೊರಬರಲು ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದು, ಇಲ್ಲಿ ಮಕ್ಕಳಿಗೆ ಪಾಠ ಹೇಳಿ ಬದುಕುತ್ತಿದ್ದೇನೆ. ನನ್ನದೇ ಗುರುತು ಹೊಂದಲು ಹೊರಟಿದ್ದೇನೆ. ನನ್ನ ಅನುಭವ ಏನು ಎಂದು ಜನರಿಗೆ ಗೊತ್ತಿದೆ. ನಿಮ್ಮ ಅನುಭವ ಏನು ಅಂತಾ ಹೇಳಿ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ನಮ್ಮಿಂದಲೇ ಬೆಳೆದ ಕೆಲವು ಮುಸ್ಲಿಂ ನಾಯಕರು ನಮ್ಮನ್ನೇ ವಿಲನ್‌ ಮಾಡಿದರು: ದೇವೆಗೌಡ

ನಾನು ಐದು ವರ್ಷಗಳ ಹಿಂದೆ ಕಳೆದುಕೊಂಡ ಅರಿಶಿನ, ಕುಂಕುಮವನ್ನು ನನ್ನ ಜನ ಉಡಿ ತುಂಬಿ ಕೊಡುತ್ತಾರೆ. ಹೂವು ಮುಡಿಸುತ್ತಾರೆ. ಈ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸುತ್ತಾರೆ. ನವೆಂಬರ್‌ 3ರಂದು ಅವರಿಂದ ಮತದ ಸ್ವರೂಪದಲ್ಲಿ ಅರಿಶಿನ, ಕುಂಕುಮ ಭಿಕ್ಷೆ ಪಡೆಯುತ್ತೇನೆ. ನನ್ನ ಕ್ಷೇತ್ರ ಹಾಗೂ ಜನರ ಅಭಿವೃದ್ಧಿಗೆ ನಾನು ಅಂದುಕೊಂಡಿರುವುದನ್ನು ಮಾಡೇ ಮಾಡುತ್ತೇನೆ. ನನ್ನ ಜೀವನ ರಾಜಕೀಯ ಹಾಗೂ ಜನರ ಸೇವೆಗೆ ಮುಡಿಪಾಗಿ ಇಡುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next