Advertisement

21ಕ್ಕೆ ತುಮಕೂರಿನಲ್ಲಿ ಕಾಂಗ್ರೆಸ್‌ ಜನಜಾಗೃತಿ ಅಭಿಯಾನ

06:22 PM Nov 17, 2021 | Team Udayavani |

ತುಮಕೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಂದಿದ್ದು, ಈ ಅವಧಿಯಲ್ಲಿ ದೇಶದಲ್ಲಿ ಕಾಂಗ್ರೆಸ್‌ ಮಾಡಿರುವ ಜನಪರ ಕಾರ್ಯಕ್ರಮ, ಅಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ಸಾಧನೆಗಳನ್ನು ಜನರಿಗೆ ತಲುಪಿಸಲು ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ರಾಜ್ಯ ಮಟ್ಟದ ಜನಜಾಗೃತಿ ಅಭಿಯಾನವನ್ನು ನಗರದಲ್ಲಿ ನ.21 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ಅಂದು ಬೆಳಗ್ಗೆ 11.30ಕ್ಕೆ ಜನಜಾಗೃತಿ ನಡೆಯಲಿದೆ ಎಂದು ಹೇಳಿದರು. ಕೆಪಿಸಿಸಿ ವತಿಯಿಂದ ನಡೆಯುತ್ತಿರುವ ಈ ಜನ ಜಾಗೃತಿ ಕಾರ್ಯಕ್ರಮ ರಾಜ್ಯಮಟ್ಟದ್ದಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಸೇರಿದಂತೆ ಪಕ್ಷದ ಅನೇಕ ನಾಯಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆಂದರು.

ಅಂದು ಬೆಳಗ್ಗೆ 11 ಗಂಟೆಗೆ ನಗರದ ಟೌನ್‌ಹಾಲ್‌ ವೃತ್ತದಲ್ಲಿ ಎಲ್ಲಾ ನಾಯಕರು ಸಮಾವೇಶಗೊಂಡು ಅಲ್ಲಿಂದ ಅಮಾನಿಕೆರೆ ಗಾಜಿನ ಮನೆವರೆಗೆ ಪಾದ ಯಾತ್ರೆ ನಡೆಸಲಾಗುವುದು. ತದ ನಂತರ ಜನಜಾಗೃತಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್‌ ಕೇಂದ್ರ ಮತ್ತು ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ, ಸಾಮಾಜಿಕ ಕಾರ್ಯಕ್ರಮ, ಜನಪರ ಕಾರ್ಯಕ್ರಮಗಳ ಸಾಧನೆ ಜನರಿಗೆ ಮುಟ್ಟಿಸಲಾಗುತ್ತಿದೆ ಎಂದರು.

ಪಂಚಾಯತ್‌ ಮಟ್ಟದಲ್ಲಿಯೂ ಜನಜಾಗೃತಿ: ತುಮಕೂರಿನಲ್ಲಿ ರಾಜ್ಯಮಟ್ಟದ ಜನಜಾಗೃತಿ ಕಾರ್ಯ ಕ್ರಮಕ್ಕೆ ಚಾಲನೆ ನೀಡುವ ಮೂಲಕ ಪ್ರತಿ ಗ್ರಾಪಂ, ಬೂತ್‌ ಮಟ್ಟ ಹಾಗೂ ತಾಲೂಕು ಕೇಂದ್ರಗಳಲ್ಲೂ ಜನಜಾಗೃತಿ ಅಭಿಯಾನ ನಡೆಸುವಂತೆ ಸೂಚನೆ ನೀಡಿದೆ ಎಂದರು. ಈ ಜನಜಾಗೃತಿ ಅಭಿಯಾನಕ್ಕೆ 10 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ. ಇದು ಕಾಂಗ್ರೆಸ್‌ ಶಕ್ತಿ ಪ್ರದರ್ಶನವಲ್ಲ, ಪಕ್ಷದ ಸಂಘಟನೆ ಕಾರ್ಯಕ್ರಮ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಂಬರುವ 2022ರ ಸೆಪ್ಟೆಂಬರ್‌ ಒಳಗೆ ಎಐಸಿಸಿ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು, ಎಲ್ಲ ಜಿಲ್ಲಾಧ್ಯಕ್ಷರು, ಬ್ಲಾಕ್‌ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಸದಸ್ಯತ್ವ ನೋಂದಣಿ ಅಭಿಯಾನ ಚುರುಕುಗೊಳಿಸು ವಂತೆ ಎಐಸಿಸಿಯಿಂದ ಸೂಚನೆ ಬಂದಿದೆ. ಈಗಾಗಲೇ ನ.14 ರಂದು ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.

Advertisement

ಕಾಂಗ್ರೆಸ್‌ ತತ್ವ ಸಿದ್ದಾಂತ ಒಪ್ಪಿ ಯಾರೇ ಬಂದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. 5ರೂ. ಶುಲ್ಕ ನೀಡಿ ಸದಸ್ಯತ್ವ ಪಡೆಯಬಹುದಾಗಿದೆ ಎಂದು ತಿಳಿಸಿದರು. ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಡಾ. ಎಸ್‌.ರಫಿಕ್‌ ಅಹಮದ್‌, ಮುರಳೀಧರ ಹಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.

“ವಿಧಾನ ಪರಿಷತ್‌ ಚುನಾವಣೆಗೆ ನಮ್ಮ ಪಕ್ಷದಿಂದ 5 ಜನ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ವರಿಷ್ಠರಿಗೆ ಕಳುಹಿಸಲಾಗಿದೆ. ಗೆಲ್ಲುವವರನ್ನು ವರಿಷ್ಠರು ತೀರ್ಮಾನಿಸಿ ಟಿಕೇಟ್‌ ನೀಡಲಿದ್ದಾರೆ. ಯಾರಿಗೆ ಟಿಕೇಟ್‌ ನೀಡಿದರೂ ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ.” -ಡಾ.ಜಿ.ಪರಮೇಶ್ವರ್‌, ಮಾಜಿ ಡಿಸಿಎಂ

 ಮುಖಂಡರ ಸಭೆ

 ತುಮಕೂರಿನಲ್ಲಿ ನ.21 ರಂದು ಕಾಂಗ್ರೆಸ್‌ನಿಂದ ಏರ್ಪಡಿಸಿರುವ ರಾಜ್ಯಮಟ್ಟದ ಜನಜಾಗೃತಿ ಕಾರ್ಯಕ್ರಮ ಯಶಸ್ವಿಗೊಳಿಸಲು ಪಕ್ಷದ ಮುಖಂಡರ ಸಭೆ ನಡೆಸಿದರು. ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕರಾದ ಕೆ.ಎನ್‌.ರಾಜಣ್ಣ, ಎಸ್‌. ಷಫೀಅಹಮದ್‌, ಕೆ.ಷಡಕ್ಷರಿ, ಡಾ.ಎಸ್‌.ರಫಿಕ್‌ ಅಹಮದ್‌, ಮುರಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ, ಮುಖಂಡರಾದ ಹೊನ್ನಗಿರಿಗೌಡ, ಎಚ್‌ .ವಿ.ವೆಂಕಟೇಶ್‌, ಸಾಸಲು ಸತೀಶ್‌, ರಾಯಸಂದ್ರ ರವಿಕುಮಾರ್‌ ಮತ್ತಿತರರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು. ಜಿಲ್ಲೆಯ ಎಲ್ಲಾ ಭೂತ್‌ ಮಟ್ಟದಿಂದಲೂ ಕಾರ್ಯಕರ್ತರು ಬರುವ ವ್ಯವಸ್ಥೆ ಮಾಡಬೇಕು ಎಂದು ಸಭೆಯಲ್ಲಿ ನಿರ್ಧರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next