ಸಿದ್ದಾಪುರ: ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜ್ವಲಂತ ಸಮಸ್ಯೆಗಳು ಜನರನ್ನು ಇಂದಿಗೂ ಕಾಡುತ್ತಿವೆ. ಶೋಭಾ ಕರಂದ್ಲಾಜೆ ಅವರು ಹೇಳುತ್ತಾರೆ ನನ್ನನ್ನು ನೋಡಿ ಓಟು ನೀಡಬೇಡಿ, ಮೋದಿಯನ್ನು ನೋಡಿ ಓಟು ಕೊಡಿ ಎಂದು ಹೇಳುತ್ತಾರೆ. ಸಂಸದರಾಗಿದ್ದಾಗ ಏನೂ ಅಭಿವೃದ್ಧಿ ಕೆಲಸ ಮಾಡದೆ ಇರುವುದರಿಂದ ಜನರಿಗೆ ಮುಖ ತೋರಸಲಾಗದೆ, ಮೋದಿ ಮುಖ ತೋರಿಸಿ ಮತ ಕೇಳುತ್ತಾರೆ ಎಂದು ಹೇಳುತ್ತಾರೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಹೆಂಗವಳ್ಳಿ ಗ್ರಾಮದ ತೊಂಭತ್ತು ಜಯರಾಮ ಶೆಟ್ಟಿ ಅವರ ಮನೆಯಲ್ಲಿ ನಡೆದ ಅಮಾಸೆಬೈಲು ತಾ. ಪಂ. ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತ ಸಭೆಯಲ್ಲಿ ಅವರು ಮಾತನಾಡಿದರು.
ಕಸ್ತೂರಿರಂಗನ್, ಡೀಮ್ಡ್ ಫಾರೇಸ್ಟ್, ಮೀನುಗಾರರ ಸಮಸ್ಯೆ, ಯುವಕರಿಗೆ ಉದ್ಯೋಗ ಸಮಸ್ಯೆ ಹೀಗೆ ಯಾವ ಸಮಸ್ಯೆಗಳ ಬಗ್ಗೆ ಶೋಭಾ ಕರಂದ್ಲಾಜೆ ಅವರು ಚಿಂತನೆ ಮಾಡಲಿಲ್ಲ. ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತ, ಜನರನ್ನು ದಾರಿ ತಪ್ಪಿಸುತ್ತ ಐದು ವರ್ಷಗಳ ಕಾಲ ಕಾಲಕಳೆದರು. ಮೋದಿ ಮುಖ ನೋಡಿ ಮತ ಕೊಡುವುದಾದರೆ, ಮೋದಿ ಚುನಾವಣೆಗೆ ನಿಂತ ವಾರಣಾಸಿಯಲ್ಲಿ ಮತ ಕೊಡಬೇಕು. ಆದರೆ ಇದು ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ. ಆದ್ದರಿಂದ ಇಲ್ಲಿಯ ಅಭ್ಯರ್ಥಿ ಹಾಗೂ ಅಭಿವೃದ್ಧಿಯನ್ನು ನೋಡಿ ಮತ ನೀಡಬೇಕು. ಸುಳ್ಳು ಭರವಸೆಯನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಬೇಕೋ ಅಥವಾ ಅಭಿವೃದ್ಧಿಯ ಹರಿಕಾರ ಎಂದು ಕರೆಸಿಕೊಂಡಿರುವ ಪ್ರಮೋದ್ ಮಧ್ವರಾಜ್ ಬೇಕೋ ಜನತೆ ತೀರ್ಮಾನಿಸಲಿ ಎಂದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ನಿಯೋಜಿತ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಬಿದ್ಕಲ್‌ಕಟ್ಟೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ. ಸತೀಶ ಕಿಣಿ ಬೆಳ್ವೆ, ಮುಖಂಡ ಮುಸ್ತಕ್ ಸಾಹೇಬ್, ಹೆಂಗವಳ್ಳಿ ಗ್ರಾ. ಪಂ. ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷ ಬಿ. ರಘರಾಮ ರೈ, ಉದ್ಯಮಿ ಜಯರಾಮ ಶೆಟ್ಟಿ ತೊಂಭತ್ತು, ಹಿಂದುಳಿದ ಮೋರ್ಚದ ಅಧ್ಯಕ್ಷ ಕೃಷ್ಣ ಪೂಜಾರಿ ಕೊೃಲಾಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಛಿತಾರ್ಥ ಶೆಟ್ಟಿ, ಕುಂದಾಪುರ ಬ್ಲಾಕ್ ಐಟಿ ಸೇಲ್ ಚಂದ್ರ ಶೆಟ್ಟಿ, ಮುಖಂಡ ವಿಕಾಸ್ ಹೆಗ್ಡೆ ಬಸೂÅರು ಮೊದಲಾದವರು ಉಪಸ್ಥಿತರಿದ್ದರು.
ಹೆಂಗವಳ್ಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ವಸುಂಧರ ಹೆಗ್ಡೆ ನಿರೂಪಿಸಿದರು.
ವಕೀಲರ ಮತ ಯಾಚಿಸಿದ ಪ್ರಮೋದ್
ಕುಂದಾಪುರ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಇಲ್ಲಿನ ಕೋರ್ಟ್ ಕಟ್ಟಡದಲ್ಲಿರುವ ವಕೀಲರ ಸಂಘದ ಕಚೇರಿಗೆ ಭೇಟಿ ನೀಡಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ್, ಕಳೆದ 5 ವರ್ಷಗಳಲ್ಲಿ ಸಂಸದರಾಗಿದ್ದ ಶೋಭಾ ಅವರು ಈ ಕ್ಷೇತ್ರದ ಅನೇಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಮರಳು ಸಮಸ್ಯೆಗೂ ಪರಿಹಾರ ಸಿಕ್ಕಿಲ್ಲ. ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು. ಬಾರ್ ಅಸೋಸಿಯೇಶನ್ ಅಧ್ಯಕ್ಷ ನಿರಂಜನ್ ಹೆಗ್ಡೆ ಸಳ್ವಾಡಿ, ಪ್ರ. ಕಾರ್ಯದರ್ಶಿ ಪ್ರಮೋದ್ ಹಂದೆ, ಪದಾಧಿಕಾರಿಗಳು, ಸದಸ್ಯರು, ವಕೀಲರು, ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಶ್ಯಾಮಲಾ ಭಂಡಾರಿ ಉಪಸ್ಥಿತರಿದ್ದರು.