ಹೈದರಾಬಾದ್ : 2018ರ ತೆಲಂಗಾಣ ಅಸೆಂಬ್ಲಿ ಚುನಾವಣೆ ಸಂಬಂಧ ಇಂದು ಶುಕ್ರವಾರ ಮತದಾನ ನಡೆಯುತ್ತಿದ್ದು ಎಐಎಂಐಎಂ ನ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಅವರು ಕಾಂಗ್ರೆಸ್ ಪಕ್ಷ ಮತಗಟ್ಟೆಯೊಳಗೆ ಮತದಾರರಿಗೆ ಲಂಚ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್‌ನ ನಂಪಳ್ಳಿ ಅಭ್ಯರ್ಥಿ ಮತಗಟ್ಟೆಯೊಳಗೆ ಮತದಾರರಿಗೆ ಲಂಚ ನೀಡುತ್ತಿದ್ದಾರೆ ಎಂದು ಓವೈಸಿ ತಮ್ಮ ಟ್ವೀಟ್ ನಲ್ಲಿ ಆರೋಪಿಸಿದ್ದಾರೆ. ಕಾಂಗ್ರೆಸ್ ನಿಂದ ಈ ಬಗ್ಗೆ ಈ ತನಕ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಚುನಾವಣೆಗಳಲ್ಲಿ ಹಣ ಮತ್ತು ಹೆಂಡ ವ್ಯಾಪಕವಾಗಿ ಹರಿಯುವುದು ದೇಶದ್ಯಾಂತ ಸಾಮಾನ್ಯ ಸಂಗತಿಯಾಗಿರುವ ಹೊರತಾಗಿಯೂ ಶಾಂತಿಯುತ ಮತ್ತು ಶಿಸ್ತುಬದ್ಧ ಚುನಾವಣೆಗಳು ನಡೆಯುತ್ತಿರುವುದು ಸಮಾಧಾನದ ಸಂಗತಿಯಾಗಿದೆ.
ಶಾಂತಿಯುತವಾಗಿ ನಡೆಯತ್ತಿರುವ ತೆಲಂಗಾಣ ಮತದಾನ ಪ್ರಕ್ರಿಯೆಯಲ್ಲಿ ಇಂದು 2.80 ಕೋಟಿ ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಗೇ ಮತದಾನ ಆರಂಭವಾಗಿದ್ದು ಸಂಜೆ 5 ಗಂಟೆಗೆ ಮುಗಿಯಲಿದೆ.
ರಾಜ್ಯದಲ್ಲಿ ಟಿಆರ್‌ಎಸ್, ಕಾಂಗ್ರೆಸ್ ನೇತೃತ್ವದ ವಿಪಕ್ಷ ಮೈತ್ರಿ ಕೂಟ ಮತ್ತು ಬಿಜೆಪಿ ನಡುವೆ ತ್ರಿಕೋಣ ಸ್ಪರ್ಧೆ ನಡೆಯುತ್ತಿದೆ. ಕಣದಲ್ಲಿ 1,821 ಅಭ್ಯರ್ಥಿಗಳಿದ್ದಾರೆ. ರಾಜ್ಯದಲ್ಲಿ ಒಟ್ಟು 119 ಅಸೆಂಬ್ಲಿ ಸೀಟುಗಳಿವೆ.