Advertisement

ಭದ್ರಕೋಟೆ ಛಿದ್ರ ಮಾಡಿಕೊಂಡ ಕಾಂಗ್ರೆಸ್‌

03:59 PM May 25, 2019 | Suhan S |

ಕೋಲಾರ: ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಸತತ 7 ಬಾರಿ ಗೆದ್ದು ಸೋಲಿಲ್ಲದ ಸರದಾರರೆ ಎಸಿಕೊಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ, ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಅವರಿಗಿಂತಲೂ 2.09 ಲಕ್ಷ ಮತಗಳ ಭಾರಿ ಅಂತರದಿಂದ ಸೋತಿದ್ದಾರೆ. ಇದರಿಂದ ಕೋಲಾರ ಕಾಂಗ್ರೆಸ್‌ನ ಭದ್ರಕೋಟೆ ಇದೀಗ ಛಿದ್ರವಾದಂತಾಗಿದೆ.

Advertisement

ಅವರ ಸೋಲಿನ ಈ ಅಂತರವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ, ಅವರಿಗೆ ಸ್ವಪಕ್ಷೀಯರೂ ಸೇರಿ ಹಿಂದೆಂದೂ ಕಂಡರಿಯದ ವಿರೋಧಿ ಅಲೆ ಮುತ್ತಿಕೊಂಡಿದ್ದರಿಂದಲೇ ಅವರು ಹೀನಾಯವಾಗಿ ಸೋಲು ಅನುಭವಿಸಬೇಕಾಯಿತು. ಹಾಗೆ ನೋಡಿದರೆ ಮುನಿಯಪ್ಪಗೆ ಚುನಾವಣೆ ವೇಳೆ ಹೀಗೆ ವಿರೋಧಗಳನ್ನು ಎದುರಿಸಿದ್ದು ಹೊಸದೇನಲ್ಲ. ಮೊದಲಿನಿಂದಲೂ ಸ್ವಪಕ್ಷಿಯರಿಂದ ವಿರೋಧ ಮತ್ತು ಕೆಲ ನಾಯಕರಿಂದ, ಮತದಾರರಿಂದಲೂ ಸಾಕಷ್ಟು ವಿರೋಧಗಳು ಇರುತ್ತಿದ್ದವು. ಆದರೆ, ಈ ಮಟ್ಟಿಗೆ ವಿರೋಧ ಕಟ್ಟಿಕೊಂಡಿದ್ದು ಎಂದೂ ಇಲ್ಲ.

ಬಿಜೆಪಿಗೆ ಜನಮತ: 1984ರಲ್ಲಿ ಜಿ.ವೈ.ಕೃಷ್ಣನ್‌ ಅವರೂ ಇದೇ ರೀತಿಯ ವಿರೋಧವನ್ನು ಕಟ್ಟಿಕೊಂಡು ಹೀನಾಯ ಸೋಲು ಅನುಭವಿಸಬೇಕಾಯಿತು. ಆಗ ಜನತಾ ಪರಿವಾರದ ಡಾ.ವೆಂಕಟೇಶ್‌ ಅವರು ಗೆಲುವನ್ನು ಸಾಧಿಸಿದ್ದರು. ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಕೋಲಾರ ಕ್ಷೇತ್ರದ ಇತಿಹಾಸದಲ್ಲಿ ಎಂದೂ ಬಿಜೆಪಿ ಗೆಲ್ಲಿಸಿರಲಿಲ್ಲ. ಗ್ರಾಪಂ ಮಟ್ಟದಲ್ಲಿಯೂ ಬೆಳೆಯದ ಬಿಜೆಪಿಗೆ ಈ ಬಾರಿ ಮುನಿಯಪ್ಪ ಅವರನ್ನು ಸೋಲಿಸುವ ಕಾರಣಕ್ಕಾಗಿಯೇ ಬಿಜೆಪಿಗೆ ಜನ ಮತ ಹಾಕಿದ್ದಾರೆ ಎಂದು ಹೇಳಿದರು.

10 ಸಾವಿರ ಮತಗಳಿಂದ ಸೋಲು: ಪ್ರತಿ ಬಾರಿಯೂ ತಮ್ಮದೇ ತಂತ್ರಗಳ ಮೂಲಕ ವಿರೋಧಿಗಳನ್ನು ಎದುರಿಸಿ ಬಂದಿದ್ದಾರೆ, ಒಂದು ಬಾರಿ ಬಿಜೆಪಿ ಶಾಸಕರ ಬೆಂಬಲ ಪಡೆದು ಸಂಸತ್‌ಗೆ ಆಯ್ಕೆಯಾದರೆ ಮತ್ತೂಂದು ಬಾರಿ ಜೆಡಿಎಸ್‌ ಪಕ್ಷದವರನ್ನು ಸೆಳೆಯುತ್ತಿದ್ದರು. ಕೆ.ಎಚ್.ಮುನಿಯಪ್ಪ ಅವರಿಗೆ ಪ್ರತಿ ಬಾರಿಯೂ ಪ್ರಬಲ ಪೈಪೋಟಿ ಒಡ್ಡುತ್ತಿದ್ದುದು ಜೆಡಿಎಸ್‌ ಮತ್ತು ಬಿಜೆಪಿಯ ಅಭ್ಯರ್ಥಿಗಳು ಮಾತ್ರ, ಚುನಾವಣೆಯಲ್ಲಿ ಇನ್ನೇನು ಬಿಜೆಪಿ ಅಭ್ಯರ್ಥಿ ಗೆದ್ದೇ ಬಿಟ್ಟರು ಎನ್ನುವ ಸಂದರ್ಭದಲ್ಲಿ ಬಿಜೆಪಿಯ ಶಾಸಕ ಕೃಷ್ಣಯ್ಯಶೆಟ್ಟರನ್ನು ಬುಟ್ಟಿಗೆ ಹಾಕಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ. ಆಗ ಬಿಜೆಪಿಯ ವೀರಯ್ಯ ಕೇವಲ 10 ಸಾವಿರ ಮತಗಳ ಅಂತರದಿಂದ ಸೋತಿದ್ದರು.

ಮೈತ್ರಿ ಅಭ್ಯರ್ಥಿಯಾಗಿದ್ದೇ ಮುಳುವಾಯ್ತು: ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಗ್ರಾಪಂನಿಂದಲೂ ಪ್ರಬಲ ಪೈಪೋಟಿ ಒಡ್ಡುತ್ತಾ ಬರುವುದು ಜನತಾ ಪರಿವಾರಗಳು ಮಾತ್ರ. ಆದರೆ, ರಾಜಕೀಯ ತಂತ್ರಗಳನ್ನು ಹೆಣೆಯುವುದರಲ್ಲಿ ಚಾಣಕ್ಷರಾದ ಮುನಿಯಪ್ಪ ಚುನಾವಣೆ ಹೊತ್ತಿಗೆ ಜೆಡಿಎಸ್‌ ಪಕ್ಷದ ವರಿಷ್ಠರನ್ನೂ ಸೆಳೆದುಕೊಂಡು ತಮ್ಮ ವಿರೋಧಿ ಮತಗಳು ಜೆಡಿಎಸ್‌ ಅಭ್ಯರ್ಥಿಗೆ ಹೋಗುವಂತೆ ಮಾಡಿ ಗೆಲುವು ಸಾಧಿಸುತ್ತಾ ಬಂದವರು ಮುನಿಯಪ್ಪ. ಆದರೆ, ಈ ಬಾರಿ ಅವರ ಈ ತಂತ್ರ ಈಡೇರಲಿಲ್ಲ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಮುನಿಯಪ್ಪ ಕಣಕ್ಕಿಳಿದಿದ್ದೇ ಮುಳುವಾಯಿತು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

Advertisement

ಜಾತಿಯ ಲೆಕ್ಕಾಚಾರ: ಮುನಿಯಪ್ಪರಿಗೆ ಈ ಬಾರಿ ದಲಿತರಲ್ಲೇ ಒಂದು ವರ್ಗ ಸಿಡಿದೆದ್ದಿತ್ತು, ಪರಿಶಿಷ್ಟ ಜಾತಿಯಲ್ಲಿ ಹೊಲೆಯರ ಗುಂಪು.(ಬಲಗೈ) ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಕ್ಷೇತ್ರದಲ್ಲಿ ಬಲಗೈ ಗುಂಪಿನವರನ್ನು ಬೆಳೆಯಲು ಬಿಡದ ಮುನಿಯಪ್ಪ ಮೊದಲಿನಿಂದಲೂ ತುಳಿಯುತ್ತಾ ಬಂದಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. 4.5 ಲಕ್ಷ ಮತದಾರರಿರುವ ಈ ಗುಂಪು ಬಿಜೆಪಿಯಲ್ಲಿ ಇದೇ ಗುಂಪಿಗೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದು, ಈ ಗುಂಪಿಗೆ ಸೇರಿದ ಎಸ್‌.ಮುನಿಸ್ವಾಮಿ ಅವರನ್ನು ಕಣಕ್ಕಿಳಿಯುವಂತೆ ಮಾಡಿತು.

ಎಲ್ಲರೂ ಕೈ ಬಿಟ್ಟರು: ಮುನಿಯಪ್ಪ ಅವರಿಗೆ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳೂ ಕೈಕೊಟ್ಟವು ಯಾವ ಕ್ಷೇತ್ರದಲ್ಲಿಯೂ ಜನ ಕೈ ಹಿಡಿಯಲಿಲ್ಲ, ಸ್ವತಃ ಅವರ ಪುತ್ರಿ ರೂಪಾಕಲಾ ಶಾಸಕರಾಗಿರುವ ಕೆ.ಜಿ.ಎಫ್‌ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ಮುನ್ನಡೆ ಬಂದಿದೆ. ಕೆ.ಜಿಎಫ್‌ ಕ್ಷೇತ್ರ ಸೇರಿದಂತೆ ಮಾಲೂರು ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್‌ ಬರುತ್ತದೆ ಎನ್ನುವ ಮುನಿಯಪ್ಪ ಅವರ ಕನಸು ನುಚ್ಚು ನೂರಾಯಿತು.

Advertisement

Udayavani is now on Telegram. Click here to join our channel and stay updated with the latest news.

Next