Advertisement

ಅಥಣಿಯಲ್ಲಿ ಮೋದಿ-ಸವದಿ ಸವಾರಿ ಭರ್ಜರಿ

11:47 AM May 11, 2019 | Suhan S |

ಚಿಕ್ಕೋಡಿ: ಕಳೆದ ಎರಡು ದಶಕದಿಂದ ಬಿಜೆಪಿ ಭದ್ರಕೋಟೆಯಾದ ಬಿಸಿಲು ನಾಡಿನ ಅಥಣಿ ವಿಧಾನಸಭೆ ಕ್ಷೇತ್ರ ಈಗ ಕಾಂಗ್ರೆಸ್‌ ಅಧೀನದಲ್ಲಿದೆ.

Advertisement

ಆದರೆ ಈಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಲು ಹೊರಟಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರು ಇದ್ದರೂ ಬದಲಾದ ರಾಜಕೀಯ ವಿದ್ಯಮಾನಗಳಿಂದ ಮುಂಬೈ ರೆಸಾರ್ಟ್‌ ಓಡಾಟದಿಂದ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ನೆಲಕಚ್ಚಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಚಿಕ್ಕೋಡಿ ಲೋಕಸಭೆ ಚುನಾವಣೆ ಮುಗಿದು ಹೋಗಿದೆ. ಅಥಣಿ ವಿಧಾನಸಭೆ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ ಸಿಗಲಿದೆ ಎಂಬ ಚರ್ಚೆ ಹಾಗೂ ಲೆಕ್ಕಾಚಾರಗಳು ಇಡೀ ಕ್ಷೇತ್ರದಲ್ಲಿ ಆರಂಭವಾಗಿದೆ. ಕಾಂಗ್ರೆಸ್‌-ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು ತಮ್ಮದೇ ಆದ ವಿಶ್ಲೇಷಣೆಗಳನ್ನು ಮಾಡುತ್ತಾ ಫಲಿತಾಂಶ ಎದುರು ನೋಡುತ್ತಿದ್ದಾರೆ.

ಅಥಣಿ ವಿಧಾನಸಭೆ ಕ್ಷೇತ್ರ ಕಳೆದ ಎರಡು ದಶಕದಿಂದ ಬಿಜೆಪಿ ಭದ್ರಕೋಟೆಯಾಗಿದೆ. ಕಳೆದ 2018ರಲ್ಲಿ ಬಿಜೆಪಿ ಮುಗ್ಗರಿಸಿದನ್ನು ಬಿಟ್ಟರೆ ಉಳಿದ 15 ವರ್ಷದಲ್ಲಿ ಬಿಜೆಪಿ ಬೇರು ಮಟ್ಟದಿಂದ ನೆಲೆಯೂರಿ ಪಾರುಪತ್ಯ ಸಾಧಿಸುತ್ತಾ ಬಂದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಸಮಬಲ ಸಾಧಿಸಲು ತೀವ್ರ ಕಸರತ್ತು ನಡೆಸಿದ್ದರೂ ಬಿಜೆಪಿಗೆ 10 ರಿಂದ 15 ಸಾವಿರ ಮತಗಳ ಮುನ್ನಡೆ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನುವ ಚರ್ಚೆಗಳು ಕೇಳಿ ಬರುತ್ತಿದೆ.

ಬೆಳಗಾವಿ ಜಿಲ್ಲೆಯ ಬಿಜೆಪಿ ಮುಖಂಡತ್ವದಲ್ಲಿ ಮುಂಚೂಣಿಯಲ್ಲಿದ್ದ ಲಕ್ಷ್ಮಣ ಸವದಿ ಅಥಣಿ ವಿಧಾನಸಭೆ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಸಚಿವರಾಗಿ ಕ್ಷೇತ್ರದ ಮೇಲೆ ಸಾಕಷ್ಟು ಹಿಡಿತ ಸಾಧಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಅಥಣಿ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಬಲಾಡ್ಯಗೊಳಿಸಿದರು. ನಂತರ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ ಅವರನ್ನು ಸೋಲಿಸಿ ಕಾಂಗ್ರೆಸ್‌ ಬಾವುಟ ಹಾರಿಸಬೇಕೆಂದು ಪಣ ತೊಟ್ಟ ರೆಬೆಲ್ ಶಾಸಕ ರಮೇಶ ಜಾರಕಿಹೊಳಿ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಮಹೇಶ ಕುಮಠಳ್ಳಿ ಅವರನ್ನು ಸ್ಪರ್ಧೆಗಿಳಿಸಿ ಗೆಲ್ಲಿಸುವ ಮೂಲಕ ಬಿಜೆಪಿ ಭದ್ರಕೋಟೆ ಛಿದ್ರ ಮಾಡಿದರು. ಬಿಜೆಪಿ ಪಕ್ಷದ ದೊಡ್ಡ ನಾಯಕರಲ್ಲಿ ಗುರ್ತಿಸಿಕೊಂಡಿದ್ದ ಲಕ್ಷ್ಮಣ ಸವದಿ ಸೋಲು ಪಕ್ಷದ ವರ್ಚಸ್ಸು ಕುಗ್ಗಿಸಿತು.

Advertisement

ಸೋತು ನಿರಾಸೆ ಹೊಂದದ ಲಕ್ಷ್ಮಣ ಸವದಿ ಇಡೀ ಕ್ಷೇತ್ರದಲ್ಲಿ ಸಂಚರಿಸಿ ಮತ್ತೆ ಬಿಜೆಪಿ ಪಕ್ಷವನ್ನು ಕಟ್ಟಿ ಬಲಾಡ್ಯಗೊಳಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಕೂಡಾ ಅವರಿಗೆ ಮತ ಹಾಕುವ ಮೂಲಕ ಬಿಜೆಪಿಗೆ ಭಾರಿ ಪ್ರಮಾಣದಲ್ಲಿ ಮುನ್ನಡೆ ಕೊಟ್ಟು ಮತ್ತೆ ಅಥಣಿಯಲ್ಲಿ ಬಿಜೆಪಿಯದ್ದೇ ಹವಾ ಎದ್ದು ಕಾಣಲು ಲಕ್ಷ್ಮಣ ಸವದಿ ಕಾರ್ಯತಂತ್ರ ರೂಪಿಸಿದರು.

ಮುಂಬೈ ಜಿಗಿತದಿಂದ ಕಾಂಗ್ರೆಸ್‌ ಕಾರ್ಯಕರ್ತರು ಅತಂತ್ರ:

ಬಿಜೆಪಿ ದೊಡ್ಡ ನಾಯಕನನ್ನು ಸೋಲಿಸಿದ ಶಾಸಕ ಮಹೇಶ ಕುಮಠಳ್ಳಿ ಬದಲಾದ ರಾಜಕೀಯ ವಿದ್ಯಮಾನದಲ್ಲಿ ರೆಬೆಲ್ ಶಾಸಕ ರಮೇಶ ಜಾರಕಿಹೊಳಿ ಜೊತೆಗೂಡಿ ಒಂದು ತಿಂಗಳು ಮುಂಬೈ ರೆಸಾರ್ಟ್‌ ಸೇರಿಕೊಂಡರು. ಇದರಿಂದ ಅಥಣಿ ಭಾಗದಲ್ಲಿ ಗೆಲುವಿನ ಗುಂಗಿನಲ್ಲಿ ಇದ್ದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಶಾಸಕರಿಲ್ಲದೇ ಅತಂತ್ರ ಸನ್ನಿವೇಶ ಎದುರಿಸುವಂತಾಯಿರು. ರಾಜ್ಯ ಮೈತ್ರಿ ಸರ್ಕಾರ ಅಥಣಿ ಭಾಗಕ್ಕೆ ವಿಶೇಷ ಅನುದಾನ ನೀಡುವ ಭರವಸೆ ನೀಡಿದರೂ ಶಾಸಕ ಕುಮಠಳ್ಳಿ ರಮೇಶ ಜಾರಕಿಹೊಳಿಯವರನ್ನು ಬಿಟ್ಟು ಕ್ಷೇತ್ರಕ್ಕೆ ಮರಳಲಿಲ್ಲ, ಇದರಿಂದ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದವು. ಕಾಂಗ್ರೆಸ್‌ ಕಾರ್ಯಕರ್ತರು ಶಾಸಕರನ್ನು ಬಿಟ್ಟು ದೂರ ಸರಿದರು. ಹೀಗಾಗಿ ಅಥಣಿ ಭಾಗದಲ್ಲಿ ಸಂಘಟನೆಯಾಗಬೇಕಿದ್ದ ಪಕ್ಷ ಶಾಸಕರ ರೆಸಾರ್ಟ್‌ ರಾಜಕಾರಣದಿಂದ ಮೂರು ಹೋಳಾಯಿತು. ಇದನ್ನೆ ದಾಳವನ್ನಾಗಿ ಬಳಸಿಕೊಂಡ ಬಿಜೆಪಿ ಕಾರ್ಯಕರ್ತರು ಇಡೀ ಕ್ಷೇತ್ರದಲ್ಲಿ ಶಾಸಕರು ಕಾಣೆಯಾಗಿದ್ದಾರೆಂದು ಸುದ್ದಿ ಹಬ್ಬಿಸಿ ಮತ್ತೆ ಕಮಲ ಅರಳಿಸಲು ಕಸರತ್ತು ಆರಂಭಿಸಿದರು.

ಮೋದಿ-ಸವದಿ ಅಲೆ ಜೋರು: ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕೆಂದು ಇಡೀ ದೇಶದ ಜನ ಮಾತಾಡುತ್ತಿದ್ದಾರೆ. ಅದೇ ರೀತಿ ಅಥಣಿ ಕ್ಷೇತ್ರದಲ್ಲಿಯೂ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲು ಯುವಕರು, ಮಾಜಿ ಸೈನಿಕರು, ಪ್ರಜ್ಞಾವಂತ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಮೋದಿ ಅಲೆ ಹೊರತಾಗಿ ಸ್ಥಳೀಯ ಮಾಜಿ ಸಚಿವ ಲಕ್ಷ್ಮಣ ಸವದಿ ಅಲೆ ಜೋರಾಗಿದೆ. ಸವದಿ ಒಂದು ಬಾರಿ ಸೋತರೂ ಕ್ಷೇತ್ರದಲ್ಲಿ ಸಾಕಷ್ಟು ವರ್ಚಸ್ಸು ಹೊಂದಿದ್ದಾರೆ.

ಸಮಬಲ ಸಾಧಿಸಲು ಕಾಂಗ್ರೆಸ್‌ಪ್ರಯತ್ನ: ಮೊದಲಿನಿಂದಲೂ ಅಥಣಿ ಕ್ಷೇತ್ರದ ಜನರದು ಬಿಜೆಪಿಯತ್ತಲೇ ಒಲವು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಕೈಹಿಡಿದ ಜನ ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಬೇಕೆಂದು ಶಾಸಕ ಮಹೇಶ ಕುಮಠಳ್ಳಿ, ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಹರ್ಷಾದ ಗದ್ಯಾಳ, ಹಜಾನನ ಮಂಗಸೂಳೆ, ಎಸ್‌.ಕೆ.ಬೂಟಾಳೆ, ಸತ್ತೇಪ್ಪ ಬಾಗೆನ್ನವರ ಎಸ್‌.ಎಂ.ನಾಯಿಕ ಸಾಕಷ್ಟು ಪ್ರಯತ್ನ ಮಾಡಿದ್ದಾರೆ.

.ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next