Advertisement

ಕಾಂಗ್ರೆಸ್‌-ಬಿಜೆಪಿ ಪರಸ್ಪರ ಪ್ರತಿಭಟನೆ

01:15 PM Dec 29, 2017 | |

ಧಾರವಾಡ: ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ  ಹಾಕಲು ಯತ್ನಿಸಿದರು. ಇತ್ತ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ ಎಂದು  ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 

Advertisement

ಬಿಜೆಪಿ ಕಾರ್ಯಕರ್ತರು ವಶಕ್ಕೆ: ಮಹದಾಯಿ ಹೋರಾಟದಲ್ಲಿ ಕಾಂಗ್ರೆಸ್‌ ಪಕ್ಷವು ರೈತರ ದಿಕ್ಕು ತಪ್ಪಿಸುತ್ತಿದ್ದು, ಅಲ್ಲದೇ ಬಿಜೆಪಿ ವಿರುದ್ಧ ರಾಜಕಾರಣ ಮಾಡುತ್ತಿದೆ ಎಂಬುದಾಗಿ ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದ ರೀಗಲ್‌ ಸರ್ಕಲ್‌ನಲ್ಲಿರುವ ಕಾಂಗ್ರೆಸ್‌ ಕಚೇರಿ ಎದುರು ಪ್ರತಿಭಟನೆ  ನಡೆಸಿದರು. 

ಕಾಂಗ್ರೆಸ್‌ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಯತ್ನಿಸಿದಾಗ ಬಿಜೆಪಿ ಮುಖಂಡರಾದ  ಪಾಲಿಕೆ ಸದಸ್ಯ ಶಿವು ಹಿರೇಮಠ ಹಾಗೂ ಶಂಕರ ಶೆಳಕಿ ಸೇರಿದಂತೆ ಕಾರ್ಯಕರ್ತರು ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿದರು. 

ಪೊಲೀಸರ  ವರ್ತನೆ ಖಂಡಿಸಿ ಪ್ರತಿಭಟನಾಕಾರರು ರೀಗಲ್‌ ವೃತ್ತದ ಬಳಿಯೇ ಟಾಯರ್‌ಗೆ ಬೆಂಕಿ ಹಚ್ಚಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ಘೋಷಣೆ  ಕೂಗಿದರು. ಮಹದಾಯಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ.

ಇದರಿಂದ ಇಡೀ ಹೋರಾಟದ  ದಿಕ್ಕು ತಪ್ಪುತ್ತಿದೆ. ಈ  ವಿಚಾರದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಮಾಜಿ  ಶಾಸಕಿ ಸೀಮಾ ಮಸೂತಿ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ,

Advertisement

ಶಂಕರ ಶೆಳಕಿ, ಸಂಜಯ ಕಪಟಕರ, ಪ್ರಕಾಶ ಗೋಡಬೊಲೆ, ಯುವ ಮೋರ್ಚಾ ಅಧ್ಯಕ್ಷ ಶರಣು ಅಂಗಡಿ, ರೈತ ಮೋರ್ಚಾ ಅಧ್ಯಕ್ಷ ಅರವಿಂದ ಏಗನಗೌಡರ, ಮೋಹನ ರಾಮದುರ್ಗ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು  ಪೊಲೀಸರು ವಶಕ್ಕೆ ಪಡೆದರು. ನಂತರ ಬಿಡುಗಡೆ ಮಾಡಲಾಯಿತು. 

ಹೆಗಡೆ ವಿರುದ್ಧ ಕೈ ಪ್ರತಿಭಟನೆ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪರಿಶಿಷ್ಟ ಜಾತಿ ವತಿಯಿಂದ ನಗರದ ಡಿಸಿ ಕಚೇರಿ ಎದುರು  ಗುರುವಾರ ಪ್ರತಿಭಟನೆ ನಡೆಸಿದರು.

ಸಂಸದ ಅನಂತಕುಮಾರ ಹೆಗಡೆ ಅವರು, ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಸಂವಿಧಾನ ಬದಲಿಸುವ ಹೇಳಿಕೆ  ನೀಡಿರುವುದು ವಿಷಾದನೀಯ. ಇವರ ಮೇಲೆ ಶಿಸ್ತುಕ್ರಮ ಜರುಗಿಸಬೇಕು. ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವವರಿಗೆ ಮತ್ತು ಸಚಿವರಿಗೆ ಕುಮ್ಮಕ್ಕು ನೀಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತಕ್ಷಣ ವಜಾಗೊಳಿಸುವಂತೆ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ  ಮನವಿ ಸಲ್ಲಿಸಲಾಯಿತು. 

ಶಂಕರ ಹೊಸಮನಿ, ಆನಂದ ಮುಶೆಣ್ಣವರ, ಬುರಾನ ಗವಳಿ, ಹೇಮಂತ ಹುರ್ಲಹೊಸೂರ, ಮಂಜುನಾಥ ಹೊಸಮನಿ,  ಹನುಮಂತಪ್ಪ ಹರಿಜನ, ಮುದಕೇಶ ಮಾದರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next