Advertisement

ಮತ್ತೆ  ಐವರು ಜೆಡಿಎಸ್‌ ಶಾಸಕರು ಕಾಂಗ್ರೆಸ್‌ಗೆ

12:32 AM Feb 05, 2017 | Team Udayavani |

ಬೆಂಗಳೂರು: ಏಳು ಭಿನ್ನಮತೀಯ ಶಾಸಕರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುವ ಸಂಗತಿಯನ್ನೇ
ಅರಗಿಸಿಕೊಳ್ಳಲಾಗದ ಜಾತ್ಯತೀತ ಜನತಾದಳಕ್ಕೆ ಮತ್ತೂಂದು ಶಾಕ್‌ ಕಾದಿದೆ.

Advertisement

ಪಕ್ಷದಲ್ಲಿ ಅಸಮಾಧಾನಗೊಂಡಿರುವ ಐವರು ಶಾಸಕರ ತಂಡವೊಂದು ಭಿನ್ನಮತೀಯ ಶಾಸಕರ ಜತೆ ಸೇರಿ ಕಾಂಗ್ರೆಸ್‌ ಕದ ತಟ್ಟತೊಡಗಿದೆ. ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌ ಜತೆ ಚರ್ಚಿಸಿ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ನೀಡುವುದಕ್ಕೆ ವಾಗ್ಧಾನ ಮಾಡಿದರೆ ಮಾತ್ರ ಐವರು ಶಾಸಕರು ಜೆಡಿಎಸ್‌ಗೆ ಗುಡ್‌ ಬೈ ಹೇಳಿ ಕಾಂಗ್ರೆಸ್‌ ಕೈ ಹಿಡಿಯಲು ಸಜ್ಜಾಗಿದ್ದಾರೆ.
ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ಐವರು ಶಾಸಕರು ರಹಸ್ಯವಾಗಿ ಭೇಟಿ ಮಾಡಿ ಜೆಡಿಎಸ್‌ ಒಳಗಿನ ಆಂತರಿಕ ವಿದ್ಯಮಾನಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬರಲಿರುವ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಭಿನ್ನಮತೀಯ ಶಾಸಕರ ಜತೆ ನಾವೂ ಸಹ ಕಾಂಗ್ರೆಸ್‌ ಪಕ್ಷವನ್ನು ಸೇರಲು ಸಿದ್ಧರಿದ್ದೇವೆ. ಪಕ್ಷದಿಂದ ಟಿಕೆಟ್‌ ಕೊಡಿಸುವ ಭರವಸೆ ಮತ್ತು ಚುನಾವಣೆಗೆ ಮುನ್ನ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ.

ಜೆಡಿಎಸ್‌ ಇನ್ನೂ ಐವರು ಶಾಸಕರು ಕಾಂಗ್ರೆಸ್‌ಗೆ ಬರಲು ಉತ್ಸುಕರಾಗಿರುವುದರ ಬಗ್ಗೆ ಆಸಕ್ತಿ ತೋರಿರುವ
ಸಿದ್ದರಾಮಯ್ಯ, ಬಜೆಟ್‌ ಅಧಿವೇಶನ ಮುಗಿಯುವ ತನಕ ಕಾಯಲು ತಿಳಿಸಿದ್ದಾರೆ. ಬಜೆಟ್‌ ಮಂಡನೆಯ ನಂತರ ಏಪ್ರಿಲ್‌ನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ಅನ್ನು ನೇರವಾಗಿ ಭೇಟಿ ಮಾಡಿಸಿ ಟಿಕೆಟ್‌ ನೀಡುವ ಖಾತರಿ ಬಗ್ಗೆ ಕಾಂಗ್ರೆಸ್‌ ವರಿಷ್ಠರಿಂದಲೇ ಭರವಸೆ ಪಡೆಯುವಂತೆ ಸಲಹೆ ನೀಡಿದ್ದಾರೆ.

ಕಾಂಗ್ರೆಸ್‌ ಸೇರಲು ಉತ್ಸುಕರಾಗಿರುವ ಐವರು ಜೆಡಿಎಸ್‌ ಶಾಸಕರು ಭಿನ್ನಮತೀಯ ಶಾಸಕರ ಗುಂಪಿನ ನಾಯಕರಾದ ಜಮೀರ್‌ ಅಹಮದ್‌ ಹಾಗೂ ಚೆಲುವರಾಯಸ್ವಾಮಿ ಅವರೊಂದಿಗೆ ಸಂಪರ್ಕದಲ್ಲಿದ್ದು, ಅವರ ಮೂಲಕ ಸಿಎಂಗೆ ತಮ್ಮ ಪ್ರಸ್ತಾಪ ಇಟ್ಟಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಜೆಡಿಎಸ್‌ನ ಭಿನ್ನಮತೀಯ ನಾಯಕರು ಶನಿವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಈ ಬಗ್ಗೆ ಚರ್ಚಿಸಿದ್ದು,
ಕಾಂಗ್ರೆಸ್‌ ಸೇರ್ಪಡೆಗೆ ಮುಂದಾಗಿರುವ ಐವರು ಜೆಡಿಎಸ್‌ ಶಾಸಕರು ಸ್ಥಳೀಯವಾಗಿ ಪ್ರಬಲರಾಗಿದ್ದು, ನಮ್ಮ ಏಳು
ಮಂದಿ ಜತೆ ಆ ಐವರಿಗೂ ಟಿಕೆಟ್‌ ಕೊಡಿಸಿ, ಹನ್ನೆರಡೂ ಮಂದಿಯೂ ಗೆದ್ದು ಬರುತ್ತೇವೆ ಎಂದು ಹೇಳಿದ್ದಾರೆ.

Advertisement

ಕಾಂಗ್ರೆಸ್‌ಗೆ ಸೇರಲು ಉತ್ಸುಕರಾಗಿರುವ ಐವರ ಶಾಸಕರ ಗುಂಪಿನಲ್ಲಿ ಹಳೇ ಮೈಸೂರಿನ ಭಾಗದವರೇ
ಹೆಚ್ಚಾಗಿದ್ದಾರೆ ಎಂದು ತಿಳಿದು ಬಂದಿದೆ. ಜೆಡಿಎಸ್‌ ಭಿನ್ನಮತೀಯ ನಾಯಕರ ಜತೆಗಿನ ಮಾತುಕತೆ ಸಂದರ್ಭದಲ್ಲಿ, ಎಸ್‌.ಎಂ.ಕೃಷ್ಣ ಅವರು ಕಾಂಗ್ರೆಸ್‌ ತ್ಯಜಿಸಿರುವುದು, ಪಕ್ಷದ ಕೆಲವು ಹಿರಿಯ ನಾಯಕರು ಬಹಿರಂಗ ವಾಗ್ಧಾಳಿ ನಡೆಸುತ್ತಿರುವುದರಿಂದ ನನ್ನ ಮುಂದೆ ದೊಡ್ಡ ಸವಾಲು ಇದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲಿಸುವ ಹೊಣೆಗಾರಿಕೆಯೂ ನನ್ನ ಮೇಲಿದೆ. ಪಕ್ಷಕ್ಕೆ ಬಲ ತಂದುಕೊಡುವವರು ಬಂದರೆ ನಾನು ಹೈಕಮಾಂಡ್‌ಗೆ
ಮನವರಿಕೆ ಮಾಡಿಕೊಡಬಹುದು, ಇಲ್ಲದಿದ್ದರೆ ಕಷ್ಟ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಜೆಡಿಎಸ್‌
ಭಿನ್ನಮತೀಯರಿಗೆ ತಿಳಿಸಿದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next