ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಾಗಿರುವ ಬಾದಾಮಿ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಪ್ರತಿಷ್ಠೆಯಿಂದ ನಡೆದಿದೆ.
ಇಲ್ಲಿ ಪಕ್ಷಕ್ಕಿಂತ ಜಾತಿ ಆಧಾರದ ಮೇಲೆಯೇ ಈ ವರೆಗಿನ ಎಲ್ಲ ಚುನಾವಣೆ ನಡೆದಿವೆ. ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಸ್ಥಳೀಯರೆಂಬ ಪ್ರತಿಷ್ಠೆಯ ಜತೆಗೆ ಎಲ್ಲ ಪಕ್ಷಗಳಲ್ಲೂ ಸ್ನೇಹ ಬಳಗ ಹೊಂದಿದ್ದು, ಅದು ತಮಗೆ ಬಲ ಕೊಡಲಿದೆ ಎಂಬ ವಿಶ್ವಾಸದಲ್ಲಿದ್ದರೆ, ಜೆಡಿಎಸ್ ಮೈತ್ರಿಯೊಂದಿಗೆ ಸಿದ್ದರಾಮಯ್ಯ ಅವರ ಬಲದಿಂದ ಈ ಕ್ಷೇತ್ರದಲ್ಲಿ ಅತಿಹೆಚ್ಚು ಲೀಡ್ ಬರಲಿದೆ ಎಂಬ ನಿರೀಕ್ಷೆ ಕಾಂಗ್ರೆಸ್ ಹೊಂದಿದೆ.
ಸಿದ್ದು ಬಲದೊಂದಿಗೆ ಮೈತ್ರಿಯ ಲಾಭ: ಈ ಕ್ಷೇತ್ರದಲ್ಲಿ ಜೆಡಿಎಸ್ ಕೂಡ ಒಂದಷ್ಟು ನೆಲೆ ಹೊಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಇಲ್ಲಿ 24,484 ಮತ ಪಡೆದಿತ್ತು. ಅವು ಬಹುತೇಕ ಬಿಜೆಪಿಯ (ಪಂಚಸಾಲಿ) ಮತಗಳಾಗಿದ್ದವು ಎಂಬ ವಿಶ್ಲೇಷಣೆಯಾಗಿತ್ತು. ಈ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಇರುವುದರಿಂದ ಜೆಡಿಎಸ್ ಮತಗಳೂ ಕಾಂಗ್ರೆಸ್‌ಗೆ ಬರಲಿವೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ಹಾಕಿದೆ.ಕ್ಷೇತ್ರದ ಒಟ್ಟು 260 ಮತಗಟ್ಟೆಗಳಲ್ಲೂ ಬಹುತೇಕ 68ರಿಂದ 72ರ ವರೆಗೆ ಮತದಾನವಾಗಿದೆ. ಅದರಲ್ಲೂ ಕಾಂಗ್ರೆಸ್ ಪ್ರಬಲವಾಗಿರುವ ಏರಿಯಾಗಳಲ್ಲಿ ಹೆಚ್ಚು ಮತದಾನವಾಗಿರುವುದು ನಮಗೆ ಲಾಭವೇ ಹೆಚ್ಚು ಎಂಬುದು ಕಾಂಗ್ರೆಸ್‌ನ ಲೆಕ್ಕ.
ಕೈಗೆ ಒಳ ಹೊಡೆತ: ಆದರೆ, ಕಾಂಗ್ರೆಸ್ ಲೆಕ್ಕಾಚಾರ ಬುಡಮೇಲಾಗಿ, ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಮತ ಪಡೆಯಲಿವೆ ಎಂಬ ಲೆಕ್ಕಾಚಾರ ಬಿಜೆಪಿಯವರು ಮಾಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳಲ್ಲಿ ಬಿಜೆಪಿ ಅಭ್ಯರ್ಥಿ ಉತ್ತಮ ಸ್ನೇಹಿತರನ್ನು ಹೊಂದಿದ್ದಾರೆ. ಚುನಾವಣೆ ಘೋಷಣೆಯಾದಾಗಿನಿಂದ, ಮತದಾನ ಪ್ರಕ್ರಿಯೆ ಮುಗಿಯುವರೆಗೂ ಅವರೊಂದಿಗೆ ಸಂಪರ್ಕದಲ್ಲಿದ್ದು, ಬಿಜೆಪಿ ಪರವಾಗಿ ಕೆಲಸ ಮಾಡಲು ಗುಪ್ತ ಒಪ್ಪಂದ ಆಗಿತ್ತು ಎಂಬ ಮಾಹಿತಿ ಬಿಜೆಪಿ ವಲಯದಿಂದ ಹೊರ ಬಿದ್ದಿವೆ. ಮೇಲಾಗಿ, ಬಾದಾಮಿ ತಾಲೂಕಿನ ವ್ಯಕ್ತಿ, 4ನೇ ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದು, ಸ್ಥಳೀಯರೆಂಬ ಕಾಳಜಿ-ಪ್ರತಿಷ್ಠೆಯೂ ಈ ಚುನಾವಣೆಯಲ್ಲಿ ಹೆಚ್ಚಿತ್ತು ಎಂಬ ಕೆಲವರ ಅಭಿಪ್ರಾಯ.
ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ, ಗದ್ದಿಗೌಡರಿಗೆ ಲಾಭ ತಂದುಕೊಡಲಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಈ ಕ್ಷೇತ್ರದಲ್ಲಿ ಜಾತಿ ರಾಜಕಾರಣವೇ ಪ್ರತಿ ಬಾರಿ ಮೇಲುಗೈ ಸಾಧಿಸುತ್ತ ಬಂದಿದೆ. ಕುರುಬ-ವಾಲ್ಮೀಕಿ ಇಲ್ಲಿ ಪ್ರಭಲ ಸಮಾಜಗಳು. ಕುರುಬ ಸಮಾಜ ಸದಾ ಕಾಂಗ್ರೆಸ್‌ನೊಂದಿಗಿದ್ದರೆ, ವಾಲ್ಮೀಕಿ ಬಿಜೆಪಿಗೆ ನಿಷ್ಠೆ ತೋರಿಸಿದ ಉದಾಹರಣೆ ಇವೆ. ಎರಡೂ ಸಮಾಜದ ಮತಗಳೇ ಇಲ್ಲಿ 1 ಲಕ್ಷ ದಾಟುತ್ತವೆ. ಜತೆಗೆ ಪಂಚಮಸಾಲಿ, ಗಾಣಿಗ, ಮುಸ್ಲಿಂ, ದಲಿತ ಹಾಗೂ ನೇಕಾರ, ಉಪ್ಪಾರ ಮತದಾರರು ಹಲವು ಗ್ರಾಮಗಳಲ್ಲಿ ನಿರ್ಣಾಯರಾಗಿದ್ದಾರೆ. ಮುಸ್ಲಿಂ, ದಲಿತ ಮತಗಳು ಇಭ್ಭಾಗ ಮಾಡುವ ಪ್ರಯತ್ನಗಳೂ ನಡೆದಿದ್ದವು. ಅವು ವಿಭಜನೆಯಾಗಿದ್ದರೆ, ಕಾಂಗ್ರೆಸ್‌ಗೆ ಒಂದಷ್ಟು ಹಿನ್ನಡೆ ಎಂಬ ಲೆಕ್ಕಾಚಾರದ ಮಾತು ಕೇಳಿ ಬಂದಿವೆ.
ಸಿದ್ದು ಕ್ಷೇತ್ರ:
Advertisement
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಶೇ.70.25ರಷ್ಟು ಮತದಾನವಾಗಿದೆ. ಕಳೆದ ಬಾರಿ ಇಲ್ಲಿ ಶೇ.66.54ರಷ್ಟು ಮತದಾನ ಮಾತ್ರ ಆಗಿತ್ತು.ಕಳೆದ ಬಾರಿಗಿಂತ ಶೇ.3.71ರಷ್ಟು ಮತದಾನ ಹೆಚ್ಚಳವಾಗಿದ್ದು, ಇದು ಬಿಜೆಪಿಗೆ ಲಾಭ ಎಂಬ ಲೆಕ್ಕಾಚಾರ ಆ ಪಕ್ಷದ್ದು. ಅಲ್ಲದೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಒಟ್ಟು 2,03,125 ಮತದಾರರಿದ್ದು, ಅದರಲ್ಲಿ 1,35,153 (ಶೇ.66.54) ಜನರು ಹಕ್ಕು ಚಲಾಯಿಸಿದ್ದರು. ಆಗ ಇಲ್ಲಿ ಬಿಜೆಪಿ 73,128 ಮತ ಪಡೆದಿದ್ದರೆ, ಕಾಂಗ್ರೆಸ್-54,261 ಮತ ಗಳಿಸಿತ್ತು.
Related Articles
Advertisement
ಇಲ್ಲಿ ಬಣ ರಾಜಕೀಯ ಕೇವಲ ಕಾಂಗ್ರೆಸ್‌ಗೆ ಸೀಮಿತವಾಗಿಲ್ಲ. ಬಿಜೆಪಿಯಲ್ಲೂ ಅದು ಪ್ರತಿಷ್ಠೆ ಯಾಗಿದೆ. ಗುಳೇದಗುಡ್ಡ, ಕೆರೂರ, ಬಾದಾಮಿ ಮೂರು ಪಟ್ಟಣಗಳು ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಬಾದಾಮಿ-ಗುಳೇದಗುಡ್ಡದ ರಾಜಕೀಯ ಬೇರೆ ಬೇರೆಯಾಗೇ ಇದೆ. ಇದು ಬಿಜೆಪಿಗೆ ಒಂದಷ್ಟು ಮತಗಳ ಕೊರತೆ ತಂದರೂ ಅಚ್ಚರಿಯಿಲ್ಲ ಎಂಬ ಮಾತಿದೆ.
ಈ ಕ್ಷೇತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕ. ಹೀಗಾಗಿ ಸತತ ಮೂರು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್‌ಗೆ, ಮತ್ತೆ ಅಧಿಕಾರ ಕೊಡಿಸಬೇಕು ಎಂಬುದು ಅವರ ಪ್ರತಿಷ್ಠೆಯಾಗಿತ್ತು. ಅದಕ್ಕಾಗಿಯೇ ಸ್ವತಃ ಅಳೆದು-ತೂಗಿ, ಲಿಂಗಾಯತ ಮಹಿಳೆಗೆ ಅವರು ಟಿಕೆಟ್ ಕೊಡಿಸಿದ್ದರು. ಜತೆಗೆ ತಮ್ಮ ಸ್ವಸಮಾಜದ ಮತಗಳು ಹೆಚ್ಚಿಗೆ ಇರುವ ಪ್ರದೇಶಗಳಲ್ಲಿ ಅವರು ಪ್ರಚಾರವೂ ನಡೆಸಿದ್ದರು. ಅಲ್ಲದೇ ಕೇವಲ 10 ತಿಂಗಳಲ್ಲಿ ಬಾದಾಮಿ ಕ್ಷೇತ್ರಕ್ಕೆ 781 ಕೋಟಿ ಅನುದಾನ ತಂದಿದ್ದಾಗಿ, 3 ಬಾರಿ ಸಂಸದರಾಗಿರುವ ಗದ್ದಿಗೌಡರು ಬಾದಾಮಿಗೆ ಏನು ಮಾಡಿದ್ದಾರೆಂಬ ವೈಫಲ್ಯದ ಮಾತು ಹೇಳಿ, ಮತ ಸೆಳೆಯುವ ಪ್ರಯತ್ನ ಮಾಡಿದ್ದರು. ಈ ಅಂಶಗಳು, ಒಂದಷ್ಟು ಮತಗಳು, ಕಾಂಗ್ರೆಸ್‌ನತ್ತ ವಾಲಲು ಕಾರಣವಾಗಲಿವೆ ಎಂಬ ಚರ್ಚೆಯೂ ನಡೆಯುತ್ತಿದೆ.
ಶ್ರೀಶೈಲ ಕೆ. ಬಿರಾದಾರ