Advertisement

ಭೋಪಾಲ್‌ನಲ್ಲಿ ಕಾಂಗ್ರೆಸ್‌-ಕಮಲ ಹೈಡ್ರಾಮಾ

06:00 AM Oct 28, 2018 | Team Udayavani |

ನವದೆಹಲಿ: ವಿಧಾನಸಭೆ ಚುನಾವಣೆಗೆ ಸಿದ್ಧಗೊಳ್ಳುತ್ತಿರುವ ಮಧ್ಯಪ್ರದೇಶವು ಶನಿವಾರ ಹೈವೋಲ್ಟೆಜ್‌ ರಾಜಕೀಯ ಡ್ರಾಮಾಗೆ ಸಾಕ್ಷಿಯಾಯಿತು. ನ್ಯಾಷನಲ್‌ ಹೆರಾಲ್ಡ್‌ ಗೆ ಸೇರಿದ ಜಾಗದ ಮುಂಭಾಗದಲ್ಲೇ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ ಸಾರ್ವ ಜನಿಕವಾಗಿ ಸುದ್ದಿಗೋಷ್ಠಿ ನಡೆಸಿದ್ದು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

Advertisement

ಭೋಪಾಲ್‌ನಲ್ಲಿ ಬಿಜೆಪಿಯ ಹೈಟೆಕ್‌ ಮಾಧ್ಯಮ ಕೇಂದ್ರ ಉದ್ಘಾಟಿಸಿದ ಕೂಡಲೇ, ನ್ಯಾಷನಲ್‌ ಹೆರಾಲ್ಡ್‌ಗೆ ಸೇರಿದ ಭೂಮಿಯ ಮುಂದೆಯೇ ಟೆಂಟ್‌ ನಿರ್ಮಿಸಿ ವಕ್ತಾರ ಸಂಬಿತ್‌ ಪಾತ್ರಾ ಅವರು ಸುದ್ದಿಗೋಷ್ಠಿ ನಡೆಸಿದರು. ಜತೆಗೆ, ನನ್ನ ಹಿಂಭಾಗದಲ್ಲಿರುವ ಭೂಮಿಯು “ಭಾರೀ ಭ್ರಷ್ಟಾಚಾರದ ಸ್ಮಾರಕ’ ಎಂದು ಬಣ್ಣಿಸಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಮೇಲಿರುವ ಆರೋಪಗಳ ಕುರಿತೂ ವಿವರಿಸಿದರು. ಇದರಿಂದ ಕೆಂಡಾಮಂಡಲ ಗೊಂಡ ಕಾಂಗ್ರೆಸ್‌, ಖಾಸಗಿ ಭೂಮಿಯಲ್ಲಿ ಅನುಮತಿಯಿಲ್ಲದೇ ಸುದ್ದಿಗೋಷ್ಠಿ ನಡೆಸುವ ಮೂಲಕ ಬಿಜೆಪಿ ನೀತಿ ಸಂಹಿತೆ ಉಲ್ಲಂ ಸಿದೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಹೇಳಿತು. ಅಲ್ಲದೆ, ಕಾಂಗ್ರೆಸ್‌ ವಕ್ತಾರ ಜೆ.ಪಿ. ಧನೋಪಿಯಾ ಅವರು ಸ್ಥಳಕ್ಕೆ ದೌಡಾಯಿಸಿದ್ದು, ಬಿಜೆಪಿ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡು. ಈ ವೇಳೆ ಎರಡೂ ಕಡೆ ಮಾತಿನ ಚಕಮಕಿಯೂ ನಡೆಯಿತು. ಇದಾದ ಬೆನ್ನಲ್ಲೇ ಬಿಜೆಪಿ ವಕ್ತಾರ ರಾಹುಲ್‌ ಕೊಥಾರಿ ಅವರು, ಕಾರ್ಯಕ್ರಮಕ್ಕೆ ಪಡೆದಿದ್ದ ಅನುಮತಿ ಪತ್ರವನ್ನು ಸಾರ್ವಜನಿಕರಿಗೆ ಪ್ರದರ್ಶಿಸಿದ ಘಟನೆಯೂ ನಡೆಯಿತು. 

ತಾರಿಕ್‌ ಕಾಂಗ್ರೆಸ್‌ಗೆ: ಈ ನಡುವೆ, ಕಳೆದ ತಿಂಗಳಷ್ಟೇ ಎನ್‌ಸಿಪಿ ತೊರೆದಿದ್ದ ಮಹಾರಾಷ್ಟ್ರದ ಮಾಜಿ ಸಂಸದ ತಾರಿಕ್‌ ಅನ್ವರ್‌ ಶನಿವಾರ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ರಫೇಲ್‌ ಡೀಲ್‌ ವಿಚಾರದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತದ್ದರಿಂದ ಆಕ್ರೋಶಗೊಂಡು ಅನ್ವರ್‌ ಎನ್‌ಸಿಪಿಗೆ ರಾಜೀನಾಮೆ ನೀಡಿದ್ದರು. ಇದೇ ವೇಳೆ, ತೆಲಂಗಾಣದಲ್ಲೂ ಟಿಆರ್‌ಎಸ್‌ನ ಇಬ್ಬರು ಹಿರಿಯ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ ಗೊಂಡಿದ್ದಾರೆ.

ಮೊದಲ ಹಂತದಲ್ಲಿ 1900 ಅಭ್ಯರ್ಥಿಗಳು: ನ.12ರಂದು ಛತ್ತೀಸ್‌ಗಡದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, 18 ಕ್ಷೇತ್ರಗಳಿಗೆ ನಡೆಯುವ ಹಣಾಹಣಿಯಲ್ಲಿ ಸಿಎಂ ರಮಣ್‌ಸಿಂಗ್‌ ಸೇರಿದಂತೆ 190 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ನಾಮಪತ್ರ ವಾಪಸ್‌ ಪಡೆ ಯಲು ಗಡುವು ಶುಕ್ರವಾರ ಪೂರ್ಣಗೊಂಡಿದೆ. 

ನಿವೃತ್ತ ಸೇನಾನಿಗಳ ಜತೆ ರಾಹುಲ್‌ ಮಾತುಕತೆ
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಶನಿವಾರ ರಾಹುಲ್‌ ಗಾಂಧಿ ಅವರು ನಿವೃತ್ತ ಯೋಧರೊಂದಿಗೆ 30 ನಿಮಿಷಗಳ ಸಂವಾದ ನಡೆಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಸಮಾನ ಹುದ್ದೆ, ಸಮಾನ ಪಿಂಚಣಿ ವಿಚಾರದಲ್ಲಿ ನೀಡಿರುವಂಥ ಆಶ್ವಾಸನೆಯನ್ನು ಪೂರೈಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಅಧಿಕಾರ ಕಳೆದುಕೊಂಡ ನಾಲ್ಕೂವರೆ ವರ್ಷಗಳ ಬಳಿಕ ರಾಹುಲ್‌ಗೆ ಸೇನಾನಿಗಳು ನೆನಪಾದರೇ ಎಂದು ಪ್ರಶ್ನಿಸಿದೆ.

Advertisement

ಈವರೆಗೆ ಕಾಂಗ್ರೆಸ್‌ ಜತೆಗೆ ಕೈಜೋಡಿಸಿದ ಯಾವ ಪಕ್ಷವೂ ಉಳಿದಿಲ್ಲ. ಪ್ರತಿಪಕ್ಷಗಳೆಲ್ಲ ಒಂದಾದರೂ, ಕೊನೆಗೆ ಎಲ್ಲ ಪಕ್ಷಗಳಿಗೆ ಕಾಂಗ್ರೆಸ್‌ ದ್ರೋಹ ಬಗೆದ ಬಳಿಕ ಎಂಥ ಸ್ಥಿತಿ ಬರುತ್ತದೆಂದರೆ, ಪ್ರಾದೇಶಿಕ ಪಕ್ಷಗಳೆಲ್ಲ ಸೇರಿ “ಮಿ ಟೂ’ ಎಂದು ಬೊಬ್ಬಿಡಬೇಕಾಗುತ್ತದೆ.
 ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next