Advertisement

ರಾಜ್ಯದ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾಂಗ್ರೆಸ್, ಬಿಜೆಪಿ ವಿಫಲ: ಯೋಗೀಶ್ ಶೆಟ್ಟಿ

12:39 PM Apr 19, 2022 | Team Udayavani |

ಕಾಪು: ಜಾತ್ಯಾತೀತ ಜನತಾದಳ ನೇತೃತ್ವದಲ್ಲಿ ಜಲ ಶ್ಯಾಮಲದಿಂದ ಸಸ್ಯ ಶ್ಯಾಮಲ ಸಮೃದ್ಧ ಕರ್ನಾಟಕ ನಿರ್ಮಾಣ ನಿಟ್ಟಿನಲ್ಲಿ ರಾಜ್ಯಾದ್ಯಂತ ಪುಣ್ಯಜಲ ಸಂಗ್ರಹಿಸಿ, ಸಂಕಲ್ಪ ಮಾಡುವ ಜನತಾ ಜಲಧಾರೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಜನತಾ ಜಲಧಾರೆ ಕಾಪು ಕ್ಷೇತ್ರ ಸಂಚಾರ ಕಾರ್ಯಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು ಅವರು ಚಾಲನೆ ನೀಡಿದರು.

Advertisement

ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಮಾತನಾಡಿ, ಸಮರ್ಪಕ ನೀರಾವರಿ ಸೌಲಭ್ಯಗಳ ಕೊರತೆಯಿಂದಾಗಿ ರಾಜ್ಯದ ಜನತೆ ಕೃಷಿ ಚಟುವಟಿಕೆಗಳಿಂದ ಹಿಮ್ಮುಖರಾಗುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ದೇಶ ಮತ್ತು ರಾಜ್ಯವನ್ನು ಆಳುತ್ತಿರುವ ಪ್ರಮುಖ ರಾಷ್ಟ್ರೀಯ ಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿವೆ. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಜೆಡಿಎಸ್ ಪಕ್ಷದ ವತಿಯಿಂದ ಜನತಾ ಜಲಧಾರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನತಾ ಜಲಧಾರೆ ಯಾತ್ರೆಗೆ ಉಡುಪಿ ಜಿಲ್ಲೆಯಲ್ಲೂ ಪೂರಕ ಬೆಂಬಲ ವ್ಯಕ್ತವಾಗಿದೆ ಎಂದರು.

ಜೆಡಿಎಸ್ ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವ ರಾವ್ ಮಾತನಾಡಿ, ರಾಜ್ಯದ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಆಡಳಿತದಲ್ಲಿರುವ ಸರಕಾರಗಳು ಸಂಪೂರ್ಣ ವಿಫಲವಾಗಿವೆ ಜನರ ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರವಲ್ಲದೇ ಸಮಸ್ಯೆಗಳನ್ನು ಆಲಿಸಲೂ ಕೂಡಾ ಎರಡೂ ಪಕ್ಷಗಳು ಸಮಯ ನೀಡುತ್ತಿಲ್ಲ. ಎರಡೂ ಪಕ್ಷಗಳಿಗೆ ಪರ್ಯಾಯವಾಗಿ ಜೆಡಿಎಸ್ ಬೆಳೆಯುತ್ತಿದ್ದು, ಜನರು ಕೂಡಾ ಪೂರಕವಾಗಿ ಬೆಂಬಲಿಸುತ್ತಿದ್ದಾರೆ. ಆ ಮೂಲಕ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಜೆಡಿಎಸ್ ಕಾಪು ಕ್ಷೇತ್ರಾಧ್ಯಕ್ಷ ಭರತ್ ಕುಮಾರ್ ಶೆಟ್ಟಿ, ಕಾಪು ಪುರಸಭೆ ಸದಸ್ಯ ಉಮೇಶ್ ಕರ್ಕೇರ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಜಯ್ ಕುಮಾರ್, ಮಹಿಳಾ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷೆ ಪೂರ್ಣಿಮಾ ನಾಯಕ್, ಪಕ್ಷದ ಮುಖಂಡರಾದ ಸುಧಾಕರ ಶೆಟ್ಟಿ, ದೇವರಾಜ್ ತೊಟ್ಟಂ, ಉದಯ ಹೆಗ್ಡೆ, ಅಬ್ದುಲ್ ರಜಾಕ್, ಶ್ರೀಕಾಂತ್ ಪೂಜಾರಿ ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next